ಬೆಂಗಳೂರು: ಪಾವಗಡದಲ್ಲಿ ಮೃತಪಟ್ಟಿದ್ದ ದೊಡ್ಡಮ್ಮನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಮಹಿಳೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದು, ಇಬ್ಬರು ಸಹೋದರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಕೂಡ್ಲುಗೇಟ್ ನಿವಾಸಿ ಕೆ.ಕೆ.ಸಂಧ್ಯಾ (22) ಮೃತರು. ಘಟನೆಯಲ್ಲಿ ಸಂಧ್ಯಾ ಸಹೋದರರಾದ ಶಶಿಕುಮಾರ್ ಹಾಗೂ ಸಂತೋಷ್ ಕುಮಾರ್ ಗಾಯಗೊಂಡಿದ್ದಾರೆ. ಘಟನೆ ಬಳಿಕ ಟಿಪ್ಪರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದರು ಎಂದು ಸಂಚಾರ ಪೊಲೀಸರು ಹೇಳಿದರು.
ವಿವಾಹಿತರಾಗಿರುವ ಸಂಧ್ಯಾ ಅವರು, ಪತಿ ಹಾಗೂ ಸಹೋದರರ ಜತೆ ಕೂಡ್ಲುಗೇಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತುಮಕೂರಿನ ಪಾವಗಡದಲ್ಲಿರುವ ದೊಡ್ಡಮ್ಮ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಂಧ್ಯಾ ದೊಡ್ಡಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಹೋದರರ ಜತೆ ಬೈಕ್‌ನಲ್ಲಿ ಭಾನುವಾರ ಮುಂಜಾನೆ ಹೊರಟಿದ್ದರು. ಶಶಿಕುಮಾರ್ ಬೈಕ್ ಚಾಲನೆ ಮಾಡುತ್ತಿದ್ದರು.
ಗೂಟ್ಟಿಗೆರೆ ಸಮೀಪದ ಟಿ.ಜಾನ್ ಕಾಲೇಜು ಬಳಿ ವೇಗವಾಗಿ ಬಂದ ಟಿಪ್ಪರ್ ಲಾರಿ, ಬೈಕ್‌ಗೆ ಡಿಕ್ಕಿಯಾಗಿದೆ. ಕೆಳಗೆ ಬಿದ್ದ ಸಂಧ್ಯಾ ಅವರ ಮೇಲೆ ಟಿಪ್ಪರ್ ವಾಹನ ಹರಿದು ಸ್ಥಳದಲ್ಲಿಯೇ ಆಕೆ ಮೃತಪಟ್ಟಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದರು. ಪ್ರಕರಣ ಹುಳಿಮಾವು ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ವ್ಯಕ್ತಿ ಸಾವು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಂದ್ರ ಭೋರಾ(44) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯ ನ್ಯೂ ಬಿಇಎಲ್ ರಸ್ತೆಯ ಕ್ರೋಮಾ ಶೋರೂಂ ಬಳಿ ಸೆ.1ರಂದು ರಾತ್ರಿ 10.30ರ ಸುಮಾರಿಗೆ ಅಪರಿಚಿತ ವಾಹನವೊಂದು ರಾಜೇಂದ್ರ ಭೋರಾ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಪ್ರಕರಣ ಸದಾಶಿವನಗರ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ಮಹಿಳೆ ಸಾವು: ಪ್ರಕರಣದಲ್ಲಿ ಕುಮಾರಸ್ವಾಮಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನೀರಿನ ಟ್ಯಾಂಕರ್ ಹರಿದು ಮಹಿಳೆಯೊಬ್ಬರ ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮೋನಿಕಾ(24) ಮೃತರು. ಕೃತ್ಯ ಎಸಗಿದ ನೀರಿನ ಟ್ಯಾಂಕರ್ ಚಾಲಕ ನವೀನ್ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ವಾಹನ ಜಪ್ತಿ ಮಾಡಿದ್ದು, ತನಿಖೆ ಮುಂದುವರಿದಿದೆ.
ಮೋನಿಕಾ ಅವರು ಬನ್ನೇರುಘಟ್ಟದ ರಸ್ತೆಯಲ್ಲಿರುವ ವೀವರ್ಸ್ ಕಾಲೋನಿಯಲ್ಲಿ ತಂದೆ ಜತೆ ವಾಸವಾಗಿದ್ದು, ಮನೆಯ ಟ್ಯಾಂಕ್‌ನಲ್ಲಿ ನೀರು ಖಾಲಿಯಾಗಿತ್ತು. ಹೀಗಾಗಿ ಖಾಸಗಿ ನೀರು ಟ್ಯಾಂಕರ್‌ಗೆ ಹೇಳಿದ್ದರು. ಸ್ಥಳಕ್ಕೆ ಬಂದ ಚಾಲಕ ನವೀನ್, ಟ್ಯಾಂಕರ್‌ನ್ನು ಹಿಮ್ಮುಖವಾಗಿ ಚಲಾಯಿಸುವಾಗ ಹಿಂಬದಿ ನಿಂತಿದ್ದ ಮೋನಿಕಾಗೆ ಡಿಕ್ಕಿ ಹೊಡೆದು, ಅವರ ಹೊಟ್ಟೆಯ ಮೇಲೆ ಹರಿದಿದೆ.
ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ನವೀನ್ ಟ್ಯಾಂಕರ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಕೆ.ಎಸ್.ಲೇಔಟ್ ಸಂಚಾರ ಠಾಣೆ ಪೊಲೀಸರು ಹೇಳಿದರು.