ಅಫಜಲಪುರ: ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲಕ್ಕೆ ಸಾವು ಪರಿಹಾರವಲ್ಲ ಎಂದು ಮುಗಳಖೋಡ-ಜಿಡಗಾ ಮಠದ ಡಾ| ಮುರುಘರಾಜೇಂದ್ರ ಶಿವಯೋಗಿಗಳು ಹೇಳಿದರು. ತಾಲೂಕಿನ ಕರ್ಜಗಿ ಗ್ರಾಮದಲ್ಲಿರುವ ಮುಗಳಖೋಡ-ಜಿಡಗಾ ಶಾಖಾ ಮಠದಲ್ಲಿ ಜಾತ್ರೆ ನಿಮಿತ್ತವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಕಷ್ಟಗಳು ಮನುಷ್ಯರಿಗೆ ಬರುತ್ತವೆ. ಕಷ್ಟಗಳು ಬಂದಾಗ ದೇವರ ಬಳಿ ಹೋಗಿ ಕೈ ಚಾಚುವುದನ್ನು ಬಿಟ್ಟು ಕಷ್ಟಗಳನ್ನು ಎದುರಿಸುವ ಕಲೆ ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿರುವ ಸಹಸ್ರಾರು ಮಠ ಮಾನ್ಯಗಳು ಧರ್ಮಾಧಾರಿತ, ಜಾತಿಯಾಧಾರಿತವಾಗಿ ಬದಲಾಗಿವೆ. ಈ ವ್ಯವಸ್ಥೆ ಬದಲಾಗಬೇಕು.
ಮಠ ಮಾನ್ಯಗಳು ಸಮಾಜ ಮುಖೀ ಕೆಲಸ ಮಾಡಬೇಕು. ಮಾನವಿಯತೆ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು. ಮುಗಳಖೋಡ-ಜಿಡಗಾ ಮಠಕ್ಕೆ ಕೇವಲ ಒಂದು ವರ್ಗದ ಭಕ್ತರಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ್ ಭಕ್ತರು ಇದ್ದಾರೆ. ಜಾತಿ ಆಧಾರಿತ ವ್ಯವಸ್ಥೆ ದೇಶದ ದುರಂತವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಭಯ ಪಡದೆ ಧೈರ್ಯದಿಂದ ಎದುರಿಸಬೇಕು. ಇದರಿಂದ ಜೀವನದಲ್ಲಿ ಒಳಿತಾಗುತ್ತದೆ ಎಂದು ಹೇಳಿದರು. ಮುಗಳಖೋಡ-ಜಿಡಗಾ ಮಠದ ಶ್ರೀಗಳಾದ ಸಿದ್ದರಾಮ ಶಿವಯೋಗಿಗಳ ಮೂರ್ತಿ ಅನಾವರಣ ಹಾಗೂ ಸಿದ್ದರಾಮ ಶಿವಯೋಗಿಗಳ ಸಂಪಕಲ್ಪ ಯಾತ್ರೆ 2018ರ ಜನವರಿಯಲ್ಲಿ ನಡೆಯಲಿದೆ.
ಅಂದಾಜು 25 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿ ಬರಲಿದ್ದಾರೆ ಎಂದು ಹೇಳಿದರು. ಪಾಂಡುರಂಗ ಮಹಾರಾಜ ಮಾತನಾಡಿದರು. ಮನುಷ್ಯನಾಗಿ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಎಲ್ಲರಲ್ಲೂ ಗುರುನಿಷ್ಠೆ, ಮಾನವತೆ ಮೈಗೂಡಿರಬೇಕು.
ಅಂದಾಗ ಗುರು ಒಲಿದು ನಿಮ್ಮ ಬಾಳು ಬಂಗಾರವಾಗಲಿದೆ ಎಂದು ಹೇಳಿದರು. ತಾಪಂ ಉಪಾದ್ಯಕ್ಷ ಭೀಮಾಶಂಕರ ಹೊನ್ನಕೇರಿ, ಸಿದ್ದಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ರಾಜು ಜಿಡ್ಡಗಿ, ಮಹಾಂತಯ್ಯ ಸಿ. ಹಿರೇಮಠ, ಗಿರಿಮಲ್ಲಯ್ಯ, ಶ್ರೀಶೈಲ ಘತ್ತರಗಿ, ಕಾಶಿನಾಥ ಹಳಗೋಧಿ, ಧರೇಪ್ಪ ಸಲಗರ, ಪಿಎಸ್‌ಐ ಸಿದ್ದರಾಯ ಭೋಸಗಿ ಇದ್ದರು.