Advertisement

ಅರಣ್ಯ ರಕ್ಷಕನ ಸಾವಿಗೆ ಅರಣ್ಯ ಸಚಿವರು, ಮುಖ್ಯಕಾರ್ಯದರ್ಶಿ ಹೊಣೆ: ಆರೋಪ

11:57 AM Feb 22, 2017 | Team Udayavani |

ಮಂಗಳೂರು: ಬಂಡೀಪುರ ಅರಣ್ಯ ರಕ್ಷಕ ಮುರುಗಪ್ಪ ಅವರ ಸಾವು ಹಾಗೂ ಮೂವರು ಅಧಿಕಾರಿಗಳು ಗಾಯಗೊಂಡಿರುವುದಕ್ಕೆ ರಾಜ್ಯದ ಅರಣ್ಯ ಸಚಿವರು ಹಾಗೂ ಇಲಾಖೆಯ ಮುಖ್ಯಕಾರ್ಯದರ್ಶಿಗಳೇ ಹೊಣೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಆರೋಪಿಸಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯು ಆಧುನಿಕ ತಂತ್ರಜ್ಞಾನಬಲಪಡಿಸುವ ಗೋಜಿಗೆ ಹೋಗದ ಕಾರಣ ಕಾಡ್ಗಿಚ್ಚಿನಿಂದ ಈ ರೀತಿಯ ಸಾವು ಸಂಭವಿಸಿದೆ. ಸರಕಾರ ಇನ್ನಾದರೂ ಎಚ್ಚೆತ್ತು ಅರಣ್ಯ ರಕ್ಷಣೆಗಾಗಿ ಬೇಕಾದ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಮೂಲಕ ಅರಣ್ಯ ಸಚಿವರು, ಮುಖ್ಯಕಾರ್ಯದರ್ಶಿಗಳು ಹಾಗೂ ವಿಪಕ್ಷ ನಾಯಕರಿಗೆ ಮನವಿ ನೀಡಿದ್ದೇವೆ ಎಂದರು.

ನಮ್ಮ ಮನವಿಗೆ 48 ಗಂಟೆಗಳೊಳಗಾಗಿ ಸಂಬಂಧ ಪಟ್ಟವರು ಪ್ರತಿಕ್ರಿಯಿಸದೇ ಇದ್ದಲ್ಲಿ ಮುರುಗಪ್ಪ ಅವರ ಸಾವಿಗೆ ಸಚಿವರು ಹಾಗೂ ಮುಖ್ಯಕಾರ್ಯದರ್ಶಿಗಳೇ ಕಾರಣ ಎಂದು ಪ್ರಕರಣ ದಾಖಲಿಸುತ್ತೇವೆ. ಗಡಿ ಕಾಯುವ ಸೈನಿಕರಂತೆ ಅರಣ್ಯ ಇಲಾಖೆಯ ಸಿಬಂದಿ ಕೂಡ ಸೈನಿಕರೇ. ಆದರೆ ಇಂದು ಅವರ ಸಾವು ಸಂಭವಿಸಿದಾಗ ಯಾರೂ ಮಾತನಾಡುತ್ತಿಲ್ಲ. ಅರಣ್ಯ ರಕ್ಷಣೆಗಾಗಿ ಆಧುನಿಕ ತಂತ್ರಜ್ಞಾನಗಳಾದ ಹೆಲಿಕಾಪ್ಟರ್‌, ಬೆಂಕಿ ನಿರೋಧಕ ಜಾಕೆಟ್‌, ಆಮ್ಲಜನಕದ ಸಿಲಿಂಡರ್‌, ಬೆಂಕಿ ನಂದಿಸುವ ಯಂತ್ರಗಳನ್ನು ಒದಗಿಸುವಂತೆ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದೇವೆ. ಆದರೆ ಇಲಾಖೆ ಸ್ಪಂದನೆ ನೀಡುತ್ತಿಲ್ಲ ಎಂದರು.

ಒಕ್ಕೂಟದ ಸಂಚಾಲಕ ದಿನೇಶ್‌ ಹೊಳ್ಳ ಮಾತನಾಡಿ, ಇಂದು ಪಶ್ಚಿಮ ಘಟ್ಟವನ್ನು ರೆಸಾರ್ಟ್‌, ಗಾಂಜಾ ಮಾಫಿಯಾ
ಗಳು ಆಳುತ್ತಿವೆ. ಇಂತಹ ಮಾಫಿಯಾಗಳು ಅರಣ್ಯಗಳನ್ನು ನಾಶ ಮಾಡುತ್ತಲೇ ಬಂದಿವೆ. ಆದರೆ ಈ ಕುರಿತು ಉತ್ತರಿಸಬೇಕಾದವರು ಮೌನವಾಗಿದ್ದಾರೆ ಎಂದರು.

ಒಕ್ಕೂಟದ ಅಧ್ಯಕ್ಷ ಸ್ವರ್ಣ ಸುಂದರ್‌, ಜಿಲ್ಲಾಧ್ಯಕ್ಷ ರತ್ನಾಕರ ಸುವರ್ಣ, ಶ್ರೀಪತಿ ಆಚಾರ್ಯ, ಅನಿತಾ ಎಸ್‌. ಭಂಡಾರ್‌ಕರ್‌, ಸಚಿನ್‌ ಭಂಡಾರ್‌ಕರ್‌ ಉಪಸ್ಥಿತರಿದ್ದರು.

Advertisement

38,720 ಚದರ ಕಿ.ಮೀ. ವಿಸ್ತೀರ್ಣ 
ರಾಜ್ಯದ ಒಟ್ಟು ಅರಣ್ಯದ ವಿಸ್ತೀರ್ಣ 38,720 ಚದರ ಕಿ.ಮೀ.ಗಳಾಗಿದ್ದು, ಇದನ್ನು ಕಾಯಲು ಒಟ್ಟು 7,898 ಸಿಬಂದಿ ಇದ್ದಾರೆ. ಆದರೆ ಇವರು ಯಾವುದೇ ಉಪಕರಣಗಳಿಲ್ಲದೆ ಬರಿಗೈಯಲ್ಲಿ ಅರಣ್ಯ ಪ್ರದೇಶ
ವನ್ನು ರಕ್ಷಿಸಬೇಕಾದ ಸ್ಥಿತಿ ಇದೆ ಎಂದು ಶಶಿಧರ  ಶೆಟ್ಟಿ ತಿಳಿಸಿದರು. 

ಬೇಡಿಕೆಗಳೇನು?
ರಾಜ್ಯದ ಅರಣ್ಯಗಳನ್ನು 15 ವಲಯಗಳನ್ನಾಗಿ ವಿಂಗಡಿಸಬೇಕು. ಪ್ರತಿ ವಲಯಕ್ಕೆ ಒಂದೊಂದು ಹೆಲಿಕಾಪ್ಟರ್‌, ನುರಿತ ಸಿಬಂದಿ, ಹೆಲಿಕಾಪ್ಟರ್‌ ಮೂಲಕವೇ ಬೆಂಕಿ ನಂದಿಸುವ ಉಪಕರಣಗಳು, ವ್ಯಾಲಿಗಳಲ್ಲಿ ಬೀಜ ಬಿತ್ತನೆ, ವನ್ಯಜೀವಿಗಳ ಚಿಕಿತ್ಸೆಗೆ ಸ್ಕ್ಯಾನಿಂಗ್‌ ಮೆಶಿನ್‌, ವೈದ್ಯಕೀಯ ಉಪಕರಣಗಳನ್ನು ಒದಗಿಸಬೇಕು.

50,000 ಜನ ವಾಹನ ಚಾಲಕರು, ಡಿಆರ್‌ಎಫ್‌ಒ ಮತ್ತು ಫಾರೆಸ್ಟ್‌ ಗಾರ್ಡ್‌ಗಳ ನೇಮಕ, ಸಿಬಂದಿಗೆ ಆಕ್ಸಿಜನ್‌ ಕಿಟ್‌, ಮೆಡಿಕಲ್‌ ಕಿಟ್‌, ಬೆಂಕಿ ನಿರೋಧಕ ಬಟ್ಟೆ, ಎಲ್ಲ ಜಿಲ್ಲೆಗಳಲ್ಲೂ ಅರಣ್ಯ ನಿರೀಕ್ಷಣಾ ಘಟಕ, ಸಿಬಂದಿಯ ಸಂಬಳ ಹೆಚ್ಚಳ, ಮಹಿಳಾ ಉದ್ಯೋಗಿಗಳಿಗೆ ಕಚೇರಿ ಕರ್ತವ್ಯ ಮೊದಲಾದ ಬೇಡಿಕೆ ಈಡೇರಿಸುವಂತೆ ಮನವಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next