Advertisement

ಬೆಳ್ತಂಗಡಿ: ಕಾಡುಕೋಣ ತಿವಿದು ಸಾವು

12:07 PM Mar 26, 2017 | Team Udayavani |

ಬೆಳ್ತಂಗಡಿ: ಇಲ್ಲಿನ ಮಂಜೊಟ್ಟಿ ಸಮೀಪ ಶನಿವಾರ ಸಂಜೆ ಕಾಡುಕೋಣ ತಿವಿದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಬೆಳ್ತಂಗಡಿ ಕಸ್ಬಾದ ರೆಂಕೆದಗುತ್ತು ನಿವಾಸಿ ಡೊಂಬಯ್ಯ ಪೂಜಾರಿ (53) ಮೃತಪಟ್ಟವರು.

Advertisement

ಡೊಂಬಯ್ಯ ಅವರು ಮಂಜೊಟ್ಟಿ ಸಮೀಪದ ಪೆರ್ಮಾಣು ಬಸದಿ ರಸ್ತೆಯ ಕಾಡಿನ ಮಧ್ಯದಲ್ಲಿರುವ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಬಂದ ಕಾಡುಕೋಣ ತಿವಿದಿದೆ. ಗಂಭೀರ ಗಾಯಗೊಂಡ ಅವರನ್ನು ತತ್‌ಕ್ಷಣ ಇಲ್ಲಿನ ಸರಕಾರಿ ಆಸ್ಪತ್ರೆಗೆ ತರಲಾಯಿತು. ಆದರೆ ದಾರಿಮಧ್ಯೆಯೇ ಅವರು  ಮೃತಪಟ್ಟಿದ್ದರು.

ಉರುಳಿನಿಂದ ತಪ್ಪಿಸಿದ ಕೋಣ
ಕಾಡುಕೋಣ ಯಾರೋ ಇಟ್ಟ ಉರುಳಿಗೆ ಬಿದ್ದು ಅದರಿಂದ ತಪ್ಪಿಸಿಕೊಂಡು ಬಂದಿತ್ತು. ಆದ್ದರಿಂದ ಆಕ್ರೋಶಗೊಂಡಿತ್ತು. ದಾಳಿ ತಡೆಯುವ ಸಾಧ್ಯತೆಗಳು ವಿಫಲವಾದವು ಎನ್ನಲಾಗಿದೆ. ಬೆಳ್ತಂಗಡಿಯ ಸುದೇಮುಗೇರಿನ ಜಾನ್‌ ಲೋಬೋ ಅವರಿಗೆ ಬೆಳ್ತಂಗಡಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ನಡ ಗ್ರಾಮದ ಮಂಜೊಟ್ಟಿಯ ಅಣ್ಣಪ್ಪಕೋಡಿಯಲ್ಲಿ ತೋಟ ಇದೆ. ತೋಟದಲ್ಲಿ ಮನೆಯೂ ಇದೆ. ಇವರ ತೋಟದಲ್ಲಿ ಡೊಂಬಯ್ಯ ಪೂಜಾರಿ ಅವರು ತೋಟದ ಕೆಲಸ ಮಾಡುತ್ತಿದ್ದರು.

ಸಂಜೆ 4 ಗಂಟೆ ವೇಳೆಗೆ ಎಲ್ಲಿಂದಲೋ ಓಡಿಬಂದ ಆಕ್ರೋಶಭರಿತ ಕಾಡುಕೋಣವು ಡೊಂಬಯ್ಯ ಅವರ ಎದೆ ಹಾಗೂ ಕೈಗೆ ಗಂಭೀರವಾಗಿ ತಿವಿಯಿತು. ಜತೆಗಿದ್ದ ಜಾನ್‌ ಲೋಬೋ ಅವರೇ ತತ್‌ಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆ ತಲುಪಲು ಸಾಧ್ಯವಾಗಲಿಲ್ಲ. ಈ ಪ್ರದೇಶ ಕಾಡಿನಿಂದ ಆವೃತವಾಗಿದ್ದು ಆಗಾಗ ಕಾಡುಕೋಣದಂತಹ ವನ್ಯಮೃಗಗಳು ದಾಳಿ ಮಾಡುತ್ತಿರುತ್ತವೆ. ಆದ್ದರಿಂದ ಕೆಲವು ರೈತರು ಉರುಳು ಇಡುವ ಕಾರ್ಯ ಕೂಡ ಮಾಡುತ್ತಾರೆ.

ಡೊಂಬಯ್ಯ ಅವರು ಅನೇಕ ವರ್ಷಗಳಿಂದ ಜಾನ್‌ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಡೊಂಬಯ್ಯ ಅವರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ. ಮೊದಲ ಪುತ್ರಿಗೆ ವಿವಾಹವಾಗಿದ್ದು ಎರಡನೇ ಪುತ್ರಿಗೆ ವಿವಾಹ ನಿಶ್ಚಿತಾರ್ಥವಾಗಿದೆ. ದೀಪಾವಳಿಯ ಅನಂತರ ವಿವಾಹ ಎಂದು ನಿಶ್ಚಯವಾಗಿತ್ತು. ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

Advertisement

ಎರಡನೇ ಘಟನೆ
ಕೆಲವೇ ದಿನಗಳ ಹಿಂದೆ ಸುಳ್ಯದಲ್ಲಿ ಇಂಥದ್ದೇ ಘಟನೆ ಸಂಭವಿಸಿತ್ತು. ಐವರ್ನಾಡು ಗ್ರಾಮದ ಬೇಂಗಮಲೆ ರಕ್ಷಿತಾರಣ್ಯ ಮಧ್ಯೆ ಹಾದು ಹೋಗುವ ಸೋಣಂಗೇರಿ- ಬೆಳ್ಳಾರೆ ರಸ್ತೆಯ ಬೇಂಗಮಲೆಯಲ್ಲಿ ಕಾಡುಕೋಣವೊಂದು ಬೈಕಿಗೆ ಢಿಕ್ಕಿ ಹೊಡೆದು, ಸವಾರ ಐವರ್ನಾಡು ದೊಡ್ಡಮನೆಯ ಬಾಲಕೃಷ್ಣ ಗೌಡ ಅವರ ಪುತ್ರ ಸುಳ್ಯದ ಎಲೆಕ್ಟ್ರಿಕಲ್‌ ಅಂಗಡಿಯ ನೌಕರ ಜಯದೀಪ್‌ (23) ಗಂಭೀರ ಗಾಯಗೊಂಡಿದ್ದರು.15 ದಿನಗಳ ಅಂತರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಊರ ಕೋಣ: ಇಲಾಖೆ ಈ ಮಧ್ಯೆ ದಾಳಿ ಮಾಡಿದ್ದು ಕಾಡುಕೋಣ ಅಲ್ಲ; ಸಾಕಿದ ಕೋಣ ಎಂಬ ಮಾಹಿತಿ ಇದೆ. ಅರಣ್ಯ ಇಲಾಖಾ ಮೂಲಗಳು ಇದು ಕಾಡುಕೋಣ ಅಲ್ಲ ಎಂದು ಹೇಳುತ್ತಿದ್ದು, ಈ ಪ್ರದೇಶದಲ್ಲಿ ಕಾಡು ಕೋಣ ದಾಳಿ ನಡೆಸಲು ಸಾಧ್ಯವಿಲ್ಲ. ಗಾಯಗಳು ಕೂಡ ಕಾಡುಕೋಣದ ದಾಳಿಯಂತಿರದೆ ಸಾಕಿದ ಕೋಣದಿಂದಾದ ಗಾಯದಂತಿವೆ ಎಂದು ತಿಳಿಸಿದ್ದಾರೆ.

ಕೋಣದ ಕುತ್ತಿಗೆಯಲ್ಲಿ ನೈಲಾನ್‌ ಹಗ್ಗವಿತ್ತು ಎಂದು ಹೇಳಲಾಗಿದ್ದು, ಪ್ರಾರಂಭದಲ್ಲಿ ಯಾರೋ ತೋಟದ ಬದಿಯಲ್ಲಿ ಇಟ್ಟ ಉರುಳಿನ ಹಗ್ಗ ಕಡಿದು ಸಿಕ್ಕಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಉರುಳು ಇಡಲು ನೈಲಾನ್‌ ಹಗ್ಗ ಉಪ
ಯೋಗಿಸುವುದಿಲ್ಲ ಎಂಬ ಮಾಹಿತಿಯಿದ್ದು, ದಾಳಿ ನಡೆಸಿದ್ದು ಸಾಕಿದ ಕೋಣವೇ ಎಂಬ ಅನುಮಾನ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next