Advertisement

ರಸ್ತೆ ಬದಿ ನರಳುತ್ತಾ ಬಿದ್ದಿದ್ದ ಅನಾಥ ವೃದ್ಧ ಸಾವು

08:43 PM Jul 25, 2021 | Team Udayavani |

ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ಬಳಿ ಕಾಲಿಗೆ ಗ್ಯಾಂಗ್ರಿನ್ ಆಗಿ ರಸ್ತೆ ಬದಿ ನರಳುತ್ತಾ ಬಿದ್ದು ಸಾರ್ವಜನಿಕರು ಮತ್ತು ಸಂಘಟನೆಗಳ ನೆರವಿನೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಆಂಧ್ರಪ್ರದೇಶ ಮೂಲದ 55-65 ವಯಸ್ಸಿನ ಅನಾಥ ವೃದ್ಧನೊಬ್ಬ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ ಎಂದು ಮುದ್ದೇಬಿಹಾಳ ಪೊಲೀಸರು ತಿಳಿಸಿದ್ದಾರೆ.

Advertisement

ಈ ವೃದ್ಧನ ಗುರುತು ಪತ್ತೇ ಹಚ್ಚಲು ಅವರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ವಾರಸುದಾರರು ಯಾರಾದರೂ ಇದ್ದಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆ (ದೂ:08356-220333), ಮುದ್ದೇಬಿಹಾಳ ಸಿಪಿಐ ಕಚೇರಿ (ದೂ: 08352-220332) ಅಥವಾ ವಿಜಯಪುರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ (ದೂ:08352-222533) ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.

ಘಟನೆ ಹಿನ್ನೆಲೆ:

ಜು.9 ರಂದು ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಹೊರವಲಯದಲ್ಲಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮಳೆಯಲ್ಲೇ ಬಿದ್ದು, ಕಾಲಿನ ಗಾಯಕ್ಕೆ ಹುಳ ಬಿದ್ದು ನರಳಾಡುತ್ತಿದ್ದ ಈತನನ್ನು ಕಾರ್ಗಿಲ್‍ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಕಿರಣಗೌಡ ಪಾಟೀಲ ಕಂಡು ತಂಗಡಗಿಯ ಮಾಜಿ ಸೈನಿಕ ಬಸವರಾಜ ನಿಡಗುಂದಿ ಮತ್ತು ಸ್ನೇಹಿತರ ಬಳಗಕ್ಕೆ ಮಾಹಿತಿ ನೀಡಿದ್ದರು. ಅವರು ವೃದ್ಧನಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು. ಸಲಾಂ ಭಾರತ ಟ್ರಸ್ಟ್ನ ಸದಸ್ಯರು ಆತನನ್ನು ಮುದ್ದೇಬಿಹಾಳದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಸಿಪಿಐ ಆನಂದ ವಾಘ್ಮೋಡೆ ಉಸ್ತುವಾರಿಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.

ಅವ್ಯವಸ್ಥೆಗೆ ಅಸಮಾಧಾನ:

Advertisement

ವೃದ್ಧನನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಲಾಂ ಭಾರತ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವಾಜೀದ್ ಹಡಲಗೇರಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಅನಾಥ ವೃದ್ಧನಿಗೆ ಸರಿಯಾದ ಚಿಕಿತ್ಸೆ ದೊರೆತಿಲ್ಲ ಎನ್ನುವುದಕ್ಕೆ ಆತನ ಸಾವು ಸಾಕ್ಷಿಯಾಗಿದೆ. ಆತನ ಕಾಲಿಗೆ ಹುಳ ಬಿದ್ದು ಗ್ಯಾಂಗರೀನ್ ಆಗಿತ್ತು. ಕಾಲು ಕತ್ತಿರಿಸಿದರೆ ಆತ ಬದುಕುತ್ತಾನೆ ಎಂದು ಇಲ್ಲಿನ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಆತನಿಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಸರಿಯಾದ ಚಿಕಿತ್ಸೆ ದೊರೆತಿದ್ದರೆ ಆತನನ್ನು ಅನಾಥ ವೃದ್ಧಾಶ್ರಮಕ್ಕೆ ಸೇರಿಸಿಕೊಳ್ಳಲು ಎಲ್ಲ ತಯಾರಿ ಮಾಡಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next