ಬೆಂಗಳೂರು: ಕೊಕ್ಕರೆ ಹಿಡಿಯಲು ಕೆರೆಗೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಮ್ಮನಪಾಳ್ಯದಲ್ಲಿ ಭಾನುವಾರ ನಡೆದಿದೆ. ಬಂಡೇಪಾಳ್ಯದ ಮಂಗಮ್ಮನಪಾಳ್ಯ ನಿವಾಸಿ ಸಲ್ಮಾನ್ (19) ಮೃತ ಯುವಕ. ಯುವಕನ ಮೃತದೇಹ ಕೆರೆಯಲ್ಲಿ ಮುಳುಗಿದ್ದು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ಮಂಗಮ್ಮನಪಾಳ್ಯದಲ್ಲಿ ಮೆಕಾನಿಕ್ ಕೆಲಸ ಮಾಡುವ ಸಲ್ಮಾನ್ ಭಾನುವಾರ ಕೆಲಸಕ್ಕೆ ರಜೆಯಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ಮಂಗಮ್ಮನಪಾಳ್ಯದ ಕೆರೆಗೆ ಹೋಗಿದ್ದ. ಈ ವೇಳೆ ಕೆರೆಯಲ್ಲಿ ಕೊಕ್ಕರೆಗಳಿದ್ದುದನ್ನು ಗಮನಿಸಿದ ಎಲ್ಲರೂ ಅವುಗಳತ್ತ ಕಲ್ಲೆಸೆದಿದ್ದಾರೆ. ಈ ವೇಳೆ ಕೊಕ್ಕರೆಯೊಂದು ಕಲ್ಲು ತಾಗಿ ಗಾಯಗೊಂಡಿತ್ತು.
ಅದನ್ನು ಹಿಡಿಯಲು ಸಲ್ಮಾನ್ ಕೆರೆಯೊಳಗೆ ಇಳಿದಿದ್ದಾನೆ. ಈಜು ಬಾರದಿದ್ದರೂ ಕೊಕ್ಕರೆ ಆಸೆಗೆ ಕೆರೆಯ ಆಳಕ್ಕೆ ಹೋಗಿ ನೀರಿನೊಳಗೆ ಸಿಲುಕಿದ್ದು, ಮೇಲೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳ ಸಿಬ್ಬಂದಿ ಮೃತ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಪತ್ತೆಯಾಗಿಲ್ಲ. ನಂತರ ಎನ್‌ಡಿಆರ್‌ಎಫ್ ಪಡೆ ಸಿಬ್ಬಂದಿ ಸ್ಥಳಕ್ಕೆ ಬಂದು ಸಂಜೆ 7ರ ವರೆಗೆ ಕಾರ್ಯಾಚರಣೆ ನಡೆಸಿದರೂ ಸಲ್ಮಾನ್ ಪತ್ತೆಯಾಗಲಿಲ್ಲ.
ಸಲ್ಮಾನ್ ಮೃತದೇಹ ಕೆರೆಯ ಆಳದಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಕೆರೆಯಲ್ಲಿ ಮುಳುಗುತ್ತಿದ್ದಂತೆ ಆತನ ಸ್ನೇಹಿತರು ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬಂಡೆಪಾಳ್ಯ ಠಾಣೆಯಲ್ಲಿ ದಾಖಲಾಗಿದೆ.