Advertisement

ಸೈನೈಡ್‌ ಸೇವನೆಯಿಂದಲೇ ಮಹಿಳೆ ಸಾವು: ಪ್ರಬಲ ದಾಖಲೆ ಕೇಳಿದ ಕೋರ್ಟ್‌

10:09 AM Oct 11, 2017 | Team Udayavani |

ಬೆಂಗಳೂರು: ಸೈನೈಡ್‌ ಮೋಹನನಿಂದ ಕೊಲೆಯಾಗಿದ್ದಾಳೆ ಎನ್ನಲಾದ ಅನಿತಾ ಬರಮಾರ್‌ ಸಾವಿಗೆ ಸೈನೈಡ್‌ ಅಥವಾ ಪಾಸ್ಪರಸ್‌ (ಕ್ರಿಮಿನಾಶಕ) ಸೇವನೆ ಕಾರಣವೇ ಎಂಬುದನ್ನು ದಾಖಲಾತಿಗಳೊಂದಿಗೆ ಸ್ಪಷ್ಟಪಡಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಮಂಗಳವಾರ ಹೈಕೋರ್ಟ್‌ ಸೂಚಿಸಿದೆ.

Advertisement

2009ರಲ್ಲಿ ನಡೆದ ಅನಿತಾ ಬರಮಾರ್‌ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್‌ ಕೋರ್ಟ್‌ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾ.ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿತು.

ಮಂಗಳವಾರದ ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು,ಅನಿತಾ ಬರಮಾರ್‌ ಕೊಲೆ ಪ್ರಕರಣ ಸಂಬಂಧ ಆರೋಪಿ ಸೈನೈಡ್‌ ಮೋಹನನ ಹೇಳಿಕೆ, ಎಫ್ಐಆರ್‌, ದೋಷಾರೋಪ ಪಟ್ಟಿ ಸಲ್ಲಿಸಿ ವಾದಮಂಡಿಸಿದರು. ಆರೋಪಿ ಸೈನೈಡ್‌ ಮೋಹನ 20 ಮಹಿಳೆಯರನ್ನು ಸೈನೈಡ್‌ ಕೊಟ್ಟು ಕೊಲೆಗೈದಿದ್ದಾನೆ. ಅನಿತಾ ಬರಮಾರ್‌ ಅವರನ್ನು ಅದೇ ರೀತಿ ಕೊಂದಿದ್ದಾನೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಹೀಗಾಗಿ ಅಧೀನ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆ ಕಾಯಂಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.

ಅನಿತಾ ಬರಮಾರ್‌ ಮರಣೋತ್ತರ ಪರೀಕ್ಷೆ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ಮಹಿಳೆಯ ಶವಪರೀಕ್ಷೆ ವರದಿಯಲ್ಲಿ ಪಾಸ್ಪರಸ್‌ ಸೇವನೆಯಿಂದಲೂ ಸಾವು ಸಂಭವಿಸಿದೆ ಎಂದು ಉಲ್ಲೇಖವಾಗಿದೆ. ಆರೋಪಿಯೂ ತಾನು ಸೈನೈಡ್‌ ನೀಡಿಲ್ಲ ಎಂದು ಆಕ್ಷೇಪಿಸಿದ್ದಾನೆ. ಆದರೆ ಪ್ರಾಸಿಕ್ಯೂಶನ್‌, ಸೈನೈಡ್‌ ಸೇವನೆಯಿಂದ ಸಾವು ಸಂಭವಿಸಿದೆ ಎಂದು ವಾದಿಸುತ್ತಿದ್ದೀರಿ. ಹೀಗಾಗಿ
ಕೊಲೆಯಾದ ಮಹಿಳೆಯ ಶವಪರೀಕ್ಷೆ ವರದಿ ನೀಡಿದ ವೈದ್ಯರ ಬಳಿ ಹೇಳಿಕೆ ಕೊಡಿಸಿ. ಇಲ್ಲವೇ ಮಹಿಳೆ ಸೈನೈಡ್‌ ಸೇವನೆಯಿಂದ ಮೃತಪಟ್ಟಿದ್ದಾಳೆ ಎಂಬುದಕ್ಕೆ ಪ್ರಬಲ ದಾಖಲೆಗಳನ್ನು ಸಲ್ಲಿಸಿ ಎಂದು ಸೂಚನೆ ನೀಡಿ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. 

ಮಂಗಳವಾರದ ವಿಚಾರಣೆ ವೇಳೆಯೂ ಕನ್ನಡದಲ್ಲಿಯೇ ವಾದ ಮಂಡಿಸಿದ ಆರೋಪಿ ಸೈನೈಡ್‌ ಮೋಹನ್‌, ತಾನು ಸೈನೈಡ್‌ ನೀಡಿ ಕೊಲೆ ಮಾಡಿಲ್ಲ. ತನ್ನ ವಿರುದ್ಧದ ಆರೋಪಗಳು ನಿರಾಧಾರ ಎಂದು ನ್ಯಾಯಪೀಠಕ್ಕೆ ತಿಳಿಸಿದ.

Advertisement
Advertisement

Udayavani is now on Telegram. Click here to join our channel and stay updated with the latest news.

Next