ಅರಸೀಕೆರೆ: ನಗರ ಸಮೀಪದ ಮಾಲೇಕಲ್ ತಿರುಪತಿಯ ಬೆಟ್ಟದ ದಾರಿಯಲ್ಲಿರುವ ಕಟ್ಟೆಯ ನೀರಿನಲ್ಲಿ ಈಜಾಡಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ನಿತೀನ್ (15) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಬಾಣಾವರ ಗ್ರಾಮದ ವಾಸಿ ಶಿವಮ್ಮ ಅವರ ಪುತ್ರ ನಿತೀನ್, ನಗರದ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದು, ಸೋಮವಾರ ಬೆಳಗ್ಗೆ ವಸತಿ ಶಾಲೆಯಲ್ಲಿ ತಿಂಡಿ ಮಾಡಿದ ನಂತರ ತನ್ನ ಸಹಪಾಠಿಗಳಾದ 5 ವಿದ್ಯಾರ್ಥಿಗಳ ಜೊತೆಯಲ್ಲಿ ನಗರ ಸಮೀಪದಲ್ಲಿರುವ ಮಾಲೇಕಲ್ ತಿರುಪತಿ ದೇವಾಲಯದ ಬೆಟ್ಟದ ದಾರಿಯಲ್ಲಿರುವ ಕಟ್ಟೆಯಲ್ಲಿ ಈಜಾಡಲು ಹೋಗಿದ್ದಾನೆ.
ಈ ವೇಳೆಯಲ್ಲಿ ಈಜು ಬಾರದೆ ನೀರಿನಲ್ಲಿ ಮುಳುಗಿದ್ದು ಕಂಡು ಭಯಭೀತರಾದ ಇನ್ನಿತರ ವಿದ್ಯಾರ್ಥಿಗಳು, ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮಣ್, ಎಎಸ್‌ಐ ಯೋಗಾಂಬರಂ ನೇತೃತ್ವದ ಪೊಲೀಸರ ತಂಡ, ಆಗ್ನಿ ಶಾಮಕ ಠಾಣೆಯ ಸಿಬ್ಬಂದಿ ಘಟನೆ ಸ್ಥಳಕ್ಕೆ ಆಗಮಿಸಿ ನಿತೀನ್ ಮೃತ ದೇಹವನ್ನು ಹೊರ ತೆಗೆದು ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ತಂದಿದ್ದರು.
ಈ ಸುದ್ದಿ ತಿಳಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಸ್ಪತ್ರೆಗೆ ಬಂದು ಮೃತಪಟ್ಟ ವಿದ್ಯಾರ್ಥಿಯ ಶವದ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯಾಧಿಕಾರಿಗಳಿಗೆ ಸೂಚಿಸಿ, ಮೃತ ವಿದ್ಯಾರ್ಥಿಯ ತಾಯಿ ಶಿವಮ್ಮಗೆ ಸಾಂತ್ವನ ಹೇಳಿ, ಅಂತ್ಯ ಸಂಸ್ಕಾರ ಮಾಡಲು ಹತ್ತು ಸಾವಿರ ರೂ. ನೀಡಿದರು.
ಕಳೆದ ನಾಲ್ಕು ವರ್ಷ ಹಿಂದೆ ಗಂಡನನ್ನು ಕಳೆದು ಕೊಂಡಿದ್ದ ಶಿವಮ್ಮ, ಕೂಲಿ ಕೆಲಸ ಮಾಡಿಕೊಂಡು, ಮೃತ ನಿತೀನ್, ಪುತ್ರಿಯನ್ನು ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಸೋಮವಾರ ಬೆಳಗ್ಗೆ ವಿಧಿಯ ವಿಪರ್ಯಾಸ ಎಂಬುವಂತೆ ಭವಿಷ್ಯಕ್ಕೆ ನೆರಳಾಗುತ್ತಿದ್ದ ಮಗನನ್ನು ಕಳೆದು ಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.