Advertisement
ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಗೆ ಈಗಾಗಲೇ ನೂರಾರು ಮರಗಳು ಧರೆಗುರುಳಿದ್ದು, ಶನಿವಾರ ಕಾಕ್ಸ್‌ಟೌನ್‌ನ ಸತೀಶ್ (35) ಎಂಬವರು ಅಸುನೀಗಿದ್ದೂ ಸೇರಿ ಈವರೆಗೆ ನಾಲ್ವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಮಾತ್ರ ಬೀಳುವ ಸ್ಥಿತಿಯಲ್ಲಿರುವ ಮರಗಳು, ಕೊಂಬೆಗಳ ತೆರವು ಕಾರ್ಯಕ್ಕೆ ವೇಗ ನೀಡುತ್ತಿಲ್ಲ. ಮಳೆಗಾಲಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
Related Articles
Advertisement
ಬಿರುಗಾಳಿ ಮಳೆಗೆ ಉರುಳಿದ 56 ಮರಗಳು ಹಾಗೂ 596 ಕೊಂಬೆಗಳನ್ನು ಪಾಲಿಕೆಯ ಅರಣ್ಯ ವಿಭಾಗದ 21 ತಂಡಗಳು ರಾತ್ರಿಯಿಂದಲೇ ತೆರವುಗೊಳಿಸುವ ಕಾರ್ಯ ಆರಂಭಿಸಿ, ಭಾನುವಾರ ಮಧ್ಯಾಹ್ನವರೆಗೆ 44 ಮರಗಳು, 359 ಕೊಂಬೆಗಳನ್ನು ತೆರವುಗೊಳಿಸಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನಗರದಲ್ಲಿ ಬಿರುಗಾಳಿ ಸಹಿತ ಮಳೆಯ ಆರ್ಭಟ ಭಾನುವಾರವೂ ಮುಂದುವರಿದಿದ್ದು, ನಗರದ ವಿವಿದೆಡೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ಶನಿವಾರವಷ್ಟೇ ಭಾರೀ ಗಾಳಿ ಸಹಿತ ಸುರಿದಿದ್ದ ಮಳೆ ನಗರದ ಜನರನ್ನು ಹೈರಾಣಾಗಿಸಿತ್ತು. ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಆರಂಭವಾದ ಗಾಳಿ ಸಹಿತ ಮಳೆ ತಡರಾತ್ರಿವರೆಗೂ ಸುರಿಯಿತು. ಕೆ.ಆರ್.ಪುರ, ಮೆಜೆಸ್ಟಿಕ್, ಬನಶಂಕರಿ, ನಾಯಂಡಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಯಶವಂತಪುರ, ಪೀಣ್ಯ ಸೇರಿ ಇತೆರೆಡೆ ಗಾಳಿಗೆ ವಾಹನಗಳು ಚಲಾಯಿಸುವುದೇ ಕಷ್ಟಕರವಾಗಿತ್ತು. ಹೀಗಾಗಿ ವಾಹನ ಸವಾರರು ಮಾರ್ಗಮಧ್ಯೆಯಿದ್ದ ಬಸ್ ನಿಲ್ದಾಣ, ಕಟ್ಟಡಗಳ ಕೆಳಗೆ ಆಶ್ರಯಪಡೆಯಬೇಕಾಯಿತು.
ಮಂತ್ರಿಮಾಲ್ ಮುಂಭಾಗ ಬೃಹತ್ ಗಾತ್ರದ ಮರ ಬಿದ್ದಿದ್ದು, ಸಂಪಿಗೆರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಹಾಗೆಯೇ ಹಳೇ ಏರ್‌ಪೋರ್ಟ್ ರಸ್ತೆಯಲ್ಲಿ ಮರ ಬಿದ್ದಿದ್ದು, ಸಂಚಾರ ದಟ್ಟಣೆ ಯಲ್ಲೇ ಹೆಚ್ಚಾಗಿದ್ದು, ನಡು ರಸ್ತೆಯಲ್ಲೇ ಆ್ಯಂಬುಲೆನ್ಸ್ ನಿಲ್ಲಬೇಕಾಯಿತು. ಇನ್ನು ಬಿಟಿಎಂ ಲೇಔಟ್‌ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್ ಮೇಲೆ ಮರದ ಬಿದಿದ್ದು, ಬಸ್ ಭಾಗಶಃ ಹಾನಿಗೀಡಾಗಿದೆ.
ಕಾರು ಜಖಂ: ಶನಿವಾರದ ಮಳೆಗೆ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹೈರಾಣಾಗಿದ್ದರು. ಅದರ ನಡುವೆಯೇ ಭಾನುವಾರ ರಾತ್ರಿ ಸುರಿದ ಮಳೆಗೆ ಮಲ್ಲೇಶ್ವರದಲ್ಲಿ 5, ಜಯಮಹಲ್, ಹೊಯ್ಸಳನಗರ, ಬಿಟಿಎಂ ಲೇಔಟ್‌ನಲ್ಲಿ ತಲಾ ಒಂದು ಮರ ಹಾಗೂ ವಿವಿಧೆಡೆ ಕೊಂಬೆಗಳು ಬಿದ್ದಿವೆ. ಜಯಮಹಲ್ 5ನೇ ಮುಖ್ಯರಸ್ತೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದಿದೆ. ಕಾರು ಚಾಲಕ ಒಳಗೆ ಇದ್ದರಾದರೂ, ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಬಿಬಿಎಂಪಿ ಸಿಬ್ಬಂದಿ ಧರೆಗುರುಳಿದ್ದ ಮರಗಳನ್ನು ತೆರವುಗೊಳಿಸಿದರು.
ಸಂಚಾರ ದಟ್ಟಣೆ: ಮಹದೇವಪುರ ವಲಯದಲ್ಲಿ ಆರಂಭವಾದ ಮಳೆ ಕ್ರಮೇಣ ನಗರದೆಲ್ಲೆಡೆ ವ್ಯಾಪಿಸಿತು. ಅದರ ಪರಿಣಾಮ ಕೆ.ಆರ್.ಪುರ, ಮೆಜೆಸ್ಟಿಕ್, ಬನಶಂಕರಿ, ನಾಯಂಡಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಯಶವಂತಪುರ, ಪೀಣ್ಯ ಸೇರಿ ಇತರ ಕಡೆಗಳಲ್ಲಿ ರಸ್ತೆಗಳಲ್ಲಿ 2-3 ಅಡಿಗಳಷ್ಟು ನೀರು ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಆಯುಕ್ತರಿಂದ ಮಾಹಿತಿ ಪಡೆದ ಸಿಎಂ:
ಬೆಂಗಳೂರಿನಲ್ಲಿ ಶನಿವಾರ, ಭಾನುವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ. ಶನಿವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಉರುಳಿದ್ದ 50ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ನಿಯಂತ್ರಣ ಕೊಠಡಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಅಧಿಕಾರಿ, ಸಿಬ್ಬಂದಿ ಜಾಗೃತರಾಗಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಿಎಂಗೆ ಮಾಹಿತಿ ನೀಡಿದ್ದಾರೆ.