Advertisement
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆಯ ಯಮುನಪ್ಪ ಅಸಂಗಿ ಅವರ ಪತ್ನಿ ವಡಿಗೇರಿಯ ನೀಲವ್ವ ಯಾನೆ ಶ್ಯಾಮವ್ವ (29) ಹಾಗೂ ಪುತ್ರ ಹನುಮಂತ (4) ಸಾವನ್ನಪ್ಪಿದವರು.
ಯಮುನಪ್ಪ ಅಸಂಗಿ ಅವರೊಂದಿಗೆ 2009ರಲ್ಲಿ ನೀಲವ್ವ ವಿವಾಹವಾಗಿದ್ದು, ಈ ದಂಪತಿಗೆ ಓರ್ವ ಪುತ್ರ ಹಾಗೂ 2 ಹೆಣ್ಣು ಮಕ್ಕಳು. ಸವಿತಾ (7), ಹನುಮಂತ (4) ಹಾಗೂ ಕೊನೆಯ ಮಗು ಜ್ಯೋತಿ (3). ನೀಲವ್ವ ಅವರ ತಂಗಿ ರೇಣುಕಾ ಅವರಿಗೆ ಯಮುನಪ್ಪ ಅವರ ತಮ್ಮ ಪರಮೇಶ್ ಜತೆ ವಿವಾಹವಾಗಿತ್ತು. ಅವರ ಮೂವರು ಮಕ್ಕಳು, ಮೈದುನ ಸುರೇಶ್ ಹಾಗೂ ತಾಯಿ ಮಲ್ಲವ್ವ ಒಟ್ಟು 10 ಮಂದಿ ಯಮುನಪ್ಪ ಅವರ ಮನೆಯಲ್ಲಿ ಜತೆಯಾಗಿ ವಾಸವಾಗಿದ್ದಾರೆ. ಯಮುನಪ್ಪ ಕಳೆದ ಹಲವು ವರ್ಷಗಳಿಂದ ಮೇಸಿŒ ಕೆಲಸ ಮಾಡುತ್ತಿದ್ದಾರೆ. ಯಮುನಪ್ಪ ಅವರು ಬಾಲ್ಯದಿಂದಲೇ ಮಾತು ಬಾರದವರಾಗಿದ್ದರು.
Related Articles
ನೀಲವ್ವ ಅವರು ತವರು ಮನೆಯಾದ ಹುನಗುಂದ ತಾಲೂಕಿನ ವಡಿಗೇರಿಯ ಕರಿಯಮ್ಮ ಜಾತ್ರೆ ಪ್ರಯುಕ್ತ ಊರಿಗೆ ತೆರಳಿದ್ದು, ಒಂದು ತಿಂಗಳಿನಿಂದ ಅಲ್ಲೇ ಇದ್ದರು. ಸೋಮವಾರವಷ್ಟೇ ಊರ ಜಾತ್ರೆ ಮುಗಿಸಿ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ತಾಯಿ ಹಾಗೂ ಮಕ್ಕಳು ಉಡುಪಿಗೆ ಆಗಮಿಸಿದ್ದರು.
Advertisement
ತಾಯಿ ಹಾಗೂ ಮಗುವನ್ನು ಕಳೆದುಕೊಂಡ ಕುಟುಂಬಸ್ಥರೆಲ್ಲ ಒಂದೆಡೆ ರೋದಿಸುತ್ತಿದ್ದರೆ ಮತ್ತೂಂದೆಡೆ ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡಿರುವ ಬಗ್ಗೆ ಅರಿವಿಲ್ಲದ ಮೂರರ ಹರೆಯದ ಬಾಲೆ ಜ್ಯೋತಿ ಓಡಾಡುತ್ತಿದ್ದಳು. ಇತ್ತ ಮಾತು ಬಾರದ ಯಮುನಪ್ಪ ಅವರು ಪತ್ನಿ ಹಾಗೂ ಮಗುವನ್ನು ಕಳೆದುಕೊಂಡು ರೋದಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಸ್ಥಳೀಯರ ಪ್ರಯತ್ನದೆಂದೂರ್ಕಟ್ಟೆ ನಿವಾಸಿಗಳಾದ ಅಶೋಕ್, ನಿತೇಶ್ ಹಾಗೂ ಪ್ರಭಾಕರ್ ಅವರು ತಾಯಿ-ಮಗುವನ್ನು ರಕ್ಷಿಸಲು ನೀರಿಗಿಳಿದಿದ್ದು, ತುಂಬಾ ಹೊತ್ತು ಹುಡುಕಾಟ ನಡೆಸಿದರು. ಬೆಳಗ್ಗೆ 10.30ರ ಸುಮಾರಿಗೆ ಅವಘಡ ಸಂಭವಿಸಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಎರಡೂ ಮೃತದೇಹಗಳನ್ನು ಅಶೋಕ್ ಅವರು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಅಗ್ನಿ ಶಾಮಕ ದಳದಲ್ಲಿ ಮುಳುಗು ತಜ್ಞರಿಲ್ಲ
ಘಟನೆ ಸಂಭವಿಸಿದ ತತ್‌ಕ್ಷಣ ರಕ್ಷಣೆಗಾಗಿ ಅಗ್ನಿಶಾಮಕ ದಳಕ್ಕೆ ಸುದ್ದಿ ತಿಳಿಸಿದ್ದು, ಅವರು ಬಂದು ಬೋಟ್ ಮೂಲಕ ಹುಡುಕಾಡಿ ಮೇಲಕ್ಕೆತ್ತಲು ಪ್ರಯತ್ನಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಅಗ್ನಿಶಾಮಕ ದಳದಲ್ಲಿ ನೀರಿನಲ್ಲಿ ಮುಳುಗಿ ಮೇಲೆತ್ತಬಲ್ಲ ಮುಳುಗು ತಜ್ಞರಿರಲಿಲ್ಲ ಅನ್ನುವುದು ಅಚ್ಚರಿ ಮೂಡಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಹುಟ್ಟೂರಾದ ಐಹೊಳೆಗೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು. ಘಟನಾ ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್ ನಾಯಕ್, ಪಿಡಿಒ ಬೂದ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಕುಮಾರಸ್ವಾಮಿ, ಮಣಿಪಾಲ ಎಸ್‌ಐ ಗೋಪಾಲಕೃಷ್ಣ, ಇನ್ಸ್‌ಪೆಕ್ಟರ್ ಸುದರ್ಶನ್‌ಭೇಟಿ ನೀಡಿ ಪರಿಶೀಲನೆ ನಡೆಸಿದರು. 5 ವರ್ಷಗಳ ಹಿಂದೆ ಕಲ್ಲುಕೋರೆ ಸ್ಥಗಿತ
ಪೆರುಪಾದೆಯಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ 25 ವರ್ಷಗಳಿಂದ ಕಲ್ಲುಕೋರೆ ನಡೆಯುತ್ತಿದ್ದು, ಕಳೆದ 5 ವರ್ಷದ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಕೋರೆಯನ್ನು ನಿರ್ವಹಿಸುತ್ತಿದ್ದ ಖಾಸಗಿಯವರು ಅನಂತರ ಪರವಾನಿಗೆ ನವೀಕರಿಸಿರಲಿಲ್ಲ. 20 ಅಡಿ ಆಳದಲ್ಲಿ ನೀರಿದ್ದು, ಇದು ಅಪಾಯಕಾರಿ ಎಂದು ಈ ಹಿಂದೆಯೇ ಸೂಚನಾ ಫಲಕಗಳನ್ನು ಹಾಕಲಾಗಿತ್ತು. ಈಗದು ಇಲ್ಲ. ಈ ಕೋರೆಯನ್ನು ಇನ್ನು ಕೆರೆಯಾಗಿ ಪರಿಗಣಿಸಿ ಸರಕಾರದಿಂದ ಹೆಚ್ಚಿನ ಅನುದಾನ ಸಿಕ್ಕರೆ ಮೆಟ್ಟಿಲು ನಿರ್ಮಿಸಿ ಬಟ್ಟೆ ಒಗೆಯಲು ಅನುಕೂಲ ಮಾಡಿಕೊಡುವ ಯೋಜನೆ ಇದೆ ಎಂದು ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್ ನಾಯಕ್ ತಿಳಿಸಿದರು. ಕಲ್ಲುಕೋರೆ: ಬೇಕಿದೆ ಕಠಿನ ಕ್ರಮ
ನಿರುಪಯುಕ್ತ ಬೋರ್‌ವೆಲ್‌ಗಳನ್ನು ಮುಚ್ಚುವಂತೆ ಕಟ್ಟನಿಟ್ಟಿನ ಆದೇಶ ಹೊರಡಿಸಿದ ಜಿಲ್ಲಾಡಳಿತವು ಇಂತಹ ಅಪಾಯಕಾರಿ ಕಲ್ಲಿನ ಕೋರೆಗಳನ್ನು ಮುಚ್ಚುವಂತೆ ಕಠಿನ ಕ್ರಮ ಕೈಗೊಳ್ಳಬೇಕಿದೆ. ಹುಟ್ಟುಹಬ್ಬ ಆಚರಿಸಿ ಮೂರೇ ದಿನಕ್ಕೆ ಸಾವು
ಬಾಲಕ ಹನುಮಂತ 2012ರ ಎ. 22ರಂದು ಹುಟ್ಟಿದ್ದು, ಮೂರು ದಿನಗಳ ಹಿಂದಷ್ಟೇ 4 ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದ. ಅಕ್ಕ, ತಂಗಿಯರೊಂದಿಗೆ ಸಂತಸದಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಖಾಸಗಿಯವರ ಜವಾಬ್ದಾರಿ: ಪ್ರಮೋದ್
ಈ ಘಟನೆ ದುರದೃಷ್ಟಕರ. ಕಲ್ಲಿನಕೋರೆಗಳಲ್ಲಿ ಇಂತಹ ದುರ್ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಮುಚ್ಚುವಂತೆ ಸೂಚನೆ ನೀಡಿದರೂ ಕೋರೆ ನಡೆಸುವ ಖಾಸಗಿಯವರು ಬಹುತೇಕ ಕಡೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ಅವರ ಜವಾಬ್ದಾರಿ ಕೂಡ ಆಗಿದೆ. ಗಣಿಗಾರಿಕೆ ಇಲಾಖೆಯವರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿತ್ತು. ಪರಿಹಾರದ ಬಗ್ಗೆ ಕಾನೂನಿನಲ್ಲಿ ಏನೆಲ್ಲ ಪ್ರಕ್ರಿಯೆಗಳಿವೆಯೋ ಆ ಮೂಲಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
– ಪ್ರಮೋದ್ ಮಧ್ವರಾಜ್, ಉಸ್ತುವಾರಿ ಸಚಿವ ಪರಿಶೀಲಿಸಿ ಕ್ರಮ: ಜಿಲ್ಲಾಧಿಕಾರಿ
ಕಲ್ಲುಕೋರೆ ಮುಚ್ಚುವುದು ಅದರ ಹೊಣೆಗಾರಿಕೆ ವಹಿಸಿಕೊಂಡವರ ಜವಾಬ್ದಾರಿ. ಹೊಳೆಗೆ ಬಿದ್ದು ಸಾವು ಎಂದು ನನಗೆ ಬಂದ ಮೊದಲ ಮಾಹಿತಿಯಾಗಿತ್ತು. ಸಂಜೆಯಷ್ಟೇ ಕಲ್ಲಿನಕೋರೆಗೆ ಬಿದ್ದು ಸಾವು ಎಂದು ತಿಳಿಯಿತು. ಬುಧವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಜಿಲ್ಲೆಯಲ್ಲಿರುವ ಅನಧಿಕೃತ, ಅಪಾಯಕಾರಿ ಕಲ್ಲು ಕೋರೆಗಳನ್ನು ಮುಚ್ಚುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ