ಮೈಸೂರು: ನಗರದಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಎರಡು ವರ್ಷದ ಮಗುವೊಂದು ಬಲಿಯಾಗಿರುವ ಘಟನೆ ಉದಯಗಿರಿಯ ಮುನೇಶ್ವರ ನಗರದಲ್ಲಿ ನಡೆದಿದೆ. ಮುನೇಶ್ವರ ನಗರದ 17ನೇ ಅಡ್ಡರಸ್ತೆಯ ನಿವಾಸಿ ರೆಹಮಾನ್ ಖಾನ್ ಹಾಗೂ ಹಾಜಿರಾ ಬೇಗಂ ದಂಪತಿಯ 25 ತಿಂಗಳ ಹೆಣ್ಣು ಮಗು ಅಲೀನಾಖಾನ್ ಮಳೆ ನೀರಿನಿಂದ ತುಂಬಿದ್ದ ಚರಂಡಿಗೆ ಬಿದ್ದು ಮೃತಪಟ್ಟಿದೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೆ ಮುನೇಶ್ವರ ನಗರ ಕೊಳಚೆ ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿದೆ.
ಮನೆಯೊಳಕ್ಕೆ ಮಂಡಿ ಉದ್ದಕ್ಕೆ ನೀರು ನುಗ್ಗುತ್ತಿದ್ದನ್ನು ಕಂಡ ರೆಹಮಾನ್‌ಖಾನ್ ಹಾಗೂ ಹಾಜಿರಾ ಬೇಗಂ ದಂಪತಿ, ಮನೆಯಲ್ಲಿ ಮಲಗಿದ್ದ ಮಗು ಅಲೀನಾಖಾನ್‌ಳನ್ನು ಮನೆಯ ಹೊರಗೆ ಕೂರಿಸಿ, ದಂಪತಿ ಮನೆಯಲ್ಲಿ ತುಂಬಿಕೊಂಡಿದ್ದ ಮಳೆ ನೀರನ್ನು ಡಬ್ಬದಲ್ಲಿ ತುಂಬಿ ಮನೆಯಿಂದ ಹೊರಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ವೇಳೆ ನಿದ್ರೆಯ ಮಂಪರಿನಲ್ಲಿದ್ದ ಮಗು, ತೂಕಡಿಸಿ ತೂಕಡಿಸಿ ಮನೆಯ ಮುಂದಿನ ಚರಂಡಿಗೆ ಬಿದ್ದಿದೆ.
ಉಕ್ಕಿ ಹರಿಯುತ್ತಿದ್ದ ಚರಂಡಿಗೆ ತಲೆ ಕೆಳಗಾಗಿ ಬಿದ್ದ ಮಗು ಕಲುಷಿತ ನೀರು ಸೇವಿಸಿದೆ. ಚರಂಡಿಗೆ ಬಿದ್ದ ಮಗು ಚೀರಾಟ ಕೇಳಿದ ದಂಪತಿ ಮನೆಯಿಂದ ಓಡಿ ಬಂದು ಮಗುವನ್ನು ಮೇಲೆತ್ತಿ ಸ್ಥಳೀಯರ ನೆರವಿನೊಂದಿಗೆ ರಾತ್ರಿಯೇ ಕೆ.ಆರ್.ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಕಲುಷಿತ ನೀರು ಕುಡಿದು ನಿತ್ರಾಣಗೊಂಡಿದ್ದ ಮಗು, ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಮೃತಪಟ್ಟಿದೆ.
ಸಾಂತ್ವನ: ಮಗು ಸಾವನ್ನಪ್ಪಿದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾಲಿಕೆ ಸದಸ್ಯ ಅಯೂಬ್‌ಖಾನ್, ಮಗುವಿನ ಪೋಷಕರಿಗೆ ಸಾಂತ್ವನ ಹೇಳಿ, ತಹಶೀಲ್ದಾರ್ ಟಿ.ರಮೇಶ್‌ಬಾಬುರಿಗೆ ಮಗು ಸಾವನ್ನಪ್ಪಿರುವ ವಿಷಯ ತಿಳಿಸಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್, ಮಗು ಮೃತಪಟ್ಟಿರುವುದರಿಂದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದರೂ ಪೊಲೀಸರಿಗೆ ದೂರು ನೀಡಿದರೆ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ ಎಂಬ ಕಾರಣಕ್ಕೆ ಮಗುವಿನ ಪೋಷಕರು ಒಪ್ಪಲಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸದಿದ್ದರೆ, ಸರ್ಕಾರದಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ವಿವರಿಸಿ ಹೋದರು.