ಬೆಂಗಳೂರು: ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ಎರಡು ವರ್ಷದ ಬಾಲಕ ಅಸುನೀಗಿದ ಘಟನೆ ಈಜಿಪುರ ಜಂಕ್ಷನ್‌ನಲ್ಲಿರುವ ರಕ್ಷಣಾ ಇಲಾಖೆ ಪ್ರದೇಶದ ಆವರಣದೊಳಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಕ್ಷಣಾ ಇಲಾಖೆ ಪ್ರದೇಶದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣದ ಕಾರ್ಮಿಕ ಸುರೇಶ್ ಸಿಂಗ್ ಪತ್ನಿ ಯಶೋಧ ಪುತ್ರ ಯಶಪಾಲ ಸಿಂಗ್(2) ಮೃತ ಬಾಲಕ. ಕೂಲಿ ಕೆಲಸಕ್ಕಾಗಿ ನಗರಕ್ಕೆ ಆಗಮಿಸಿದ್ದ ರಾಜಸ್ಥಾನ ಮೂಲದ ದಂಪತಿ, ಎರಡು ವರ್ಷದ ಮಗನನ್ನು ಕಳೆದುಕೊಂಡು. ನೋವು ಮರೆಯಲು ಸ್ವಂತ ಊರಿಗೆ ತೆರಳಿದ್ದಾರೆ.
ಜೂನ್ 8ರಂದು ದಂಪತಿ ಎಂದಿನಂತೆ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಶೆಡ್‌ನಿಂದ ಕೆಲಸದ ಸ್ಥಳಕ್ಕೆ ತೆರಳಲು ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದರು. ಈ ವೇಳೆ ಯಶೋಧ ಮಗು ಯಶಪಾಲ್ನನ್ನು ಜತೆಗೆ ಕೂರಿಸಿಕೊಂಡಿದ್ದರು. ಈ ವೇಳೆ ಮಗು ಯಶಪಾಲ್ ಆಯತಪ್ಪಿ ಟ್ರ್ಯಾಕ್ಟರ್‌ನಿಂದ ಕೆಳಕ್ಕೆ ಬಿದ್ದಿದ್ದು ತಲೆಗೆ ಗಂಭೀರ ಪೆಟ್ಟಾಗಿದ್ದು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಂಪತಿ ಕಟ್ಟಡ ನಿರ್ಮಾಣ ಹಂತದ ಕೆಲಸದಲ್ಲಿ ತೊಡಗಿದ್ದಾಗ ಮಗುವನ್ನು ಟ್ರ್ಯಾಕ್ಟರ್ ಡೈವರ್ ಸೀಟಿನ ಹಿಂಭಾಗವಿರುವ ಸೀಟ್‌ನಲ್ಲಿ ಕುಳ್ಳಿರಿಸಿದ್ದಾರೆ. ಮಗು ಕೆಲ ಸಮಯದ ಬಳಿಕ ಆಯ ತಪ್ಪಿ ಡಾಂಬರು ರಸ್ತೆಯ ಮೇಲೆ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಬಹುಶ: ಮಗು ನಿದ್ದೆ ಬಂದಾಂತಾಗಿ ಕೆಳಗೆ ಬಿದ್ದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಸುರೇಶ್ ಸಿಂಗ್, ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಬಿಲ್ಡಿಂಗ್ ಕಂಟ್ರಾಕ್ಟರ್ ಪಂಕಜ್ ಶೆಟ್ಟಿ ಹಾಗೂ ಕೂಲಿ ಕಾರ್ಮಿಕರ ಕಂಟ್ರಾಕ್ಟರ್ ಲಕ್ಷ್ಮಣ್ ಸಿಂಗ್ ವಿರುದ್ಧ ವಿವೇಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪಂಕಜ್‌ಶೆಟ್ಟಿ ಹಾಗೂ ಲಕ್ಷ್ಮಣ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ದಂಪತಿ ಇಬ್ಬರು ರಾಜಸ್ಥಾನಕ್ಕೆ ತೆರಳಿದ್ದು, ಅವರು ಬಂದ ಬಳಿಕ ಹೇಳಿಕೆ ದಾಖಲಿಸಿಕೊಳ್ಳಲಾಗುವುದು. ಸದ್ಯ, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು