Advertisement

ಜಾಹೀರಾತು ನೀತಿ ಅಂತಿಮಕ್ಕೆಪಾಲಿಕೆಗೆ 12ರವರೆಗೆ ಗಡುವು

11:03 AM Dec 07, 2018 | |

ಬೆಂಗಳೂರು: ಹೊಸ ಜಾಹೀರಾತು ನೀತಿ ಹಾಗೂ ಬೈಲಾಗಳನ್ನು ಡಿ.12ರೊಳಗೆ ಅಂತಿಮಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ. ನಗರ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌.ಸುಜಾತಾ ಅವರಿದ್ದ ಪೀಠದಲ್ಲಿ ನಡೆಯಿತು.

Advertisement

ಈ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಕರಡು ಜಾಹೀರಾತು ನೀತಿ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಆಲಿಸಿದ್ದು, ಕೆಲ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಗಣಿಸಲಾಗಿದ್ದು, ಆದಷ್ಟು ಶೀಘ್ರ ಜಾಹೀರಾತು ನೀತಿ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
 
ಇದನ್ನು ಪರಿಗಣಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ಮತ್ತಷ್ಟು ವಿಳಂಬ ಮಾಡಬೇಡಿ. ಡಿ.12ರೊಳಗೆ ಜಾಹೀರಾತು ನೀತಿ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿ ಎಂದು ಬಿಬಿಎಂಪಿಗೆ ನಿರ್ದೇಶಿಸಿತು. ಕೆ.ಆರ್‌ ಪುರ ಶಾಸಕ ಭೈರತಿ ಬಸವರಾಜು ಹಾಗೂ ಸ್ಥಳೀಯ ಕಾರ್ಪೊರೇಟರ್‌ ಭಾವಚಿತ್ರಗಳನ್ನು ಒಳಗೊಂಡ ಅನಧಿಕೃತ ಫ್ಲೆಕ್ಸ್‌ ಅಳವಡಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಈ ಹಿಂದೆ ನೀಡಿದ್ದ ಸೂಚನೆಯಂತೆ, ಕೆ.ಆರ್‌ ಪುರ ಠಾಣೆ ಪೊಲೀಸರು ಅಕ್ರಮವಾಗಿ ಜಾಹೀರಾತು ಅಳವಡಿಸಿದ್ದ ಮುರಳಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಡ್ವೋಕೇಟ್‌ ಜನರಲ್‌ ತಿಳಿಸಿದರು. ಬಿಬಿಎಂಪಿ, ಪೊಲೀಸ್‌ ಇಲಾಖೆ ಮತ್ತಷ್ಟು ಜಾಗೃತವಾಗಿ ಕೆಲಸ ಮಾಡಬೇಕು ಎಂದು ಪೀಠ ತಾಕೀತು ಮಾಡಿತು. 

ಇ-ಮೇಲ್‌ ಕಳುಹಿಸಿದವನಿಂದ ಕ್ಷಮೆ
ಫ್ಲೆಕ್ಸ್‌ ಹಾವಳಿ ತಡೆಗಟ್ಟಲು ತನ್ನ ಬಳಿ ಕೆಲವೊಂದು ಐಡಿಯಾಗಳಿದ್ದು, ಅದನ್ನು ಜಾರಿಗೊಳಿಸಿದರೆ ಸಮಸ್ಯೆಗಳನ್ನು ಬಗೆಹರಿಸಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿಯವರನ್ನು ಹೆಸರಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಅನಾಮಧೇಯ ಇ-ಮೇಲ್‌ ಕಳುಹಿಸಿದ್ದ ಯಶವಂತ ಪುರದ ನಿವಾಸಿ ಕೇಶವನ್‌ ನ್ಯಾಯಾಲಯಕ್ಕೆ ಹಾಜರಾಗಿ ಕ್ಷಮೆ ಯಾಚಿಸಿದರು. “ನೀವು ಏನೇ ಹೇಳುವುದಿದ್ದರೂ ಕಾನೂನು ಪ್ರಕ್ರಿಯೆ ಮೂಲಕವೇ ಹೇಳಬೇಕು. ವ್ಯಾಪ್ತಿ ಮೀರಿ ವರ್ತಿಸಿ ನ್ಯಾಯಾಲಯಕ್ಕೆ ತೊಂದರೆ ಮಾಡ ಬಾರದು’ ಎಂದು ನ್ಯಾಯಪೀಠ ಸೂಚಿಸಿತು. ಬಳಿಕ ಕೇಶವನ್‌ ಅವರ ದೂರು ಮತ್ತು ಸಲಹೆಗಳಿದ್ದರೆ ಅದನ್ನು ಬಿಬಿಎಂಪಿಗೆ ಸಲ್ಲಿಸಲು ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next