Advertisement

ಗಡುವು ಮುಗಿದರೂ ರಾಜೀನಾಮೆ ಇಲ್ಲ

03:45 AM Feb 04, 2017 | Team Udayavani |

ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ನೀಡಿದ್ದ ನಿರ್ದೇಶನವನ್ನು ಕೆಎಂಎಫ್ ಅಧ್ಯಕ್ಷ ನಾಗರಾಜ್‌ ನಿರ್ಲಕ್ಷಿಸಿದ್ದಾರೆ. ಒಂದು ವೇಳೆ ನಾಗರಾಜ್‌ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದಿದ್ದರೆ ಖಾಲಿ ಇರುವ ಸಚಿವ ಸ್ಥಾನವನ್ನು ಎಂ.ಪಿ ರವೀಂದ್ರ ಅವರಿಗೆ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎನ್ನಲಾಗುತ್ತಿದೆ.

Advertisement

ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರವೀಂದ್ರ, ಅಧ್ಯಕ್ಷ ಸ್ಥಾನವನ್ನು ನೀಡುವಂತೆ ನಾಗರಾಜ್‌ಗೆ ಸೂಚಿಸಲು ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಾಜ್‌ ಕೊಟ್ಟ ಮಾತು ತಪ್ಪುತ್ತಿದ್ದಾರೆ. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಅಧ್ಯಕ್ಷ ಸ್ಥಾನ ಬಿಟ್ಟುಕೊಡದಿದ್ದರೆ ಕಾನೂನು ರೀತಿಯ ಕ್ರಮ ಜರುಗಿಸುವ ಅನಿವಾರ್ಯವಾಗಿದೆ ಎಂದರು.

ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಎಂ.ಪಿ ರವೀಂದ್ರ ಅವರಿಗೆ ಬಿಡಿಸಿಕೊಡುವಂತೆ ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ಸಂಜೆಯೊಳಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೆಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಗಡುವು ನೀಡಿದ್ದರು. ಆದರೆ ಇದೇ ಕಾರಣದಿಂದ ಹಾಲಿ ಅಧ್ಯಕ್ಷ ನಾಗರಾಜ್‌ ಯಾರ ಕೈಗೂ ಸಿಗದೇ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ. ಕೆಎಂಎಫ್ ಕಚೇರಿಗೆ ಹಾಜರಾದರೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಚೇರಿಯ ಕಡೆಗೂ ಸುಳಿಯದೇ ಮೊಬೈಲ್‌ ನಾಟ್‌ ರೀಚೆಬಲ್‌ ಮಾಡಿಕೊಂಡು ಕಾಲ ತಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌, ನಾಗರಾಜ್‌ ಅವರನ್ನು ಕೆಎಂಎಫ್ ಅಧ್ಯಕ್ಷ ಗಾದಿಯಿಂದ ಪದಚ್ಯುತ ಗೊಳಿಸುವ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಆದರೆ ನಾಗರಾಜ್‌ ಈಗ ಡಿ ಕೆ ಶಿವಕುಮಾರ್‌ ವಿರುದಟಛಿವೇ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.

ಮೊದಲ 2 ವರ್ಷಗಳವರೆಗೆ ನಾಗರಾಜ್‌, 3 ವರ್ಷಗಳ ಅವಧಿಗೆ ಎಂ.ಪಿ. ರವೀಂದ್ರ ಕೆಎಂಎಫ್ ಅಧ್ಯಕ್ಷರಾಗಬೇಕೆಂದು ಡಿ.ಕೆ. ಶಿವಕುಮಾರ್‌ ಹಾಗೂ ಅಂದಿನ ಸಹಕಾರ ಸಚಿವ ಮಹದೇವ ಪ್ರಸಾದ್‌ ಸಮ್ಮುಖದಲ್ಲಿ ಒಪ್ಪಂದ ಏರ್ಪಟಿತ್ತು. ಸೆಪ್ಟೆಂಬರ್‌ನಲ್ಲೇ ಅವಧಿ ಮುಗಿದರೂ ನಾಗರಾಜ್‌ ರಾಜೀನಾಮೆ ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next