ನವದೆಹಲಿ: ಭಾರತ-ಪಾಕಿಸ್ತಾನ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಹಾಗೂ ಫೈವ್-ಸ್ಟಾರ್ ಶ್ರೇಣಿಗೆ ಬಡ್ತಿ ಪಡೆದ ಭಾರತೀಯ ವಾಯುಪಡೆಯ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಜನ್ ಸಿಂಗ್(98) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಬೆಳಗ್ಗೆ ಸೇನೆಯ ರಿಸರ್ಚ್ ಆಂಡ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಜೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದರು. ರಾತ್ರಿ 9ರ ಸುಮಾರಿಗೆ ಅರ್ಜನ್ ಸಿಂಗ್ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಧೀರ ಮಾರ್ಷಲ್: ಅಖೂ°ರ್ ಪಟ್ಟಣದ ಮೇಲೆ ಪಾಕಿಸ್ತಾನ 1965ರಲ್ಲಿ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಐಎಎಫ್ನ ನೇತೃತ್ವವನ್ನು ಅರ್ಜನ್ ಸಿಂಗ್ ವಹಿಸಿ, ವೀರಾವೇಶದಿಂದ ಹೋರಾಡಿ ಪಾಕಿಸ್ತಾನ ಪಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹಲವು ಕಠಿಣ ಸ್ಥಿತಿಗಳೂ ಎದುರಾಗಿದ್ದವು. ಅವುಗಳನ್ನೆಲ್ಲ ಲೆಕ್ಕಿಸದೆ ವೀರಾವೇಶದಿಂದ ಹೋರಾಡಿ, ದೇಶಕ್ಕೆ ಜಯ ತಂದು ಕೊಡುವಲ್ಲಿ ಯಶಸ್ಸು ಗಳಿಸಿದ್ದರು. ಹೀಗಾಗಿ, ದೇಶದ ಸೇನಾ ಇತಿಹಾಸದಲ್ಲೇ ಇವರನ್ನು “ಐಕಾನ್’ ಎಂದೇ ಗುರುತಿಸಲಾಗುತ್ತಿತ್ತು.
ವಿಶೇಷ ಗೌರವ: ಕಳೆದ ವರ್ಷವಷ್ಟೇ ಈವರೆಗೆ ಯಾರಿಗೂ ಸಿಕ್ಕಿಲ್ಲದಂಥ ವಿಶೇಷ ಗೌರವವೊಂದು ಅವರಿಗೆ ದೊರೆತಿತ್ತು. ಪಶ್ಚಿಮ ಬಂಗಾಳದಲ್ಲಿನ ಪ್ರಮುಖ ಪನಾಗಡ ವಾಯುನೆಲೆಗೆ ಅರ್ಜನ್ ಸಿಂಗ್ ಅವರ ಹೆಸರನ್ನೇ ಇಡಲಾಗಿತ್ತು. ದೇಶದ ಇತಿಹಾಸದಲ್ಲಿ ಯಾವುದೇ ಸೇನಾನೆಲೆಗೂ ವ್ಯಕ್ತಿಯ ಹೆಸರು ಅದರಲ್ಲೂ ಬದುಕಿರುವವರ ಹೆಸರು ಇಟ್ಟಿದ್ದಿಲ್ಲ. ಅಂಥ ಗೌರವ ಪಡೆದ ಮೊದಲಿಗರೇ ಅರ್ಜನ್ ಸಿಂಗ್.