ನಮ್ಮೂರು ಹಳ್ಳಿ. ಅಲ್ಲಿ ಅಂಗನವಾಡಿಯಾಗಲೀ ನರ್ಸರಿ ಸ್ಕೂಲ್ ಆಗಲೀ ಇರಲಿಲ್ಲ. ಹಾಗಾಗಿ, ನನಗೆ 5 ವರ್ಷವಾದಾಗ ಒಂದನೆಯ ತರಗತಿಗೆ ಸೇರಿಸಿದರು. ಅಧ್ಯಾಪಿಕೆಯಾಗಿದ್ದ ನನ್ನ ತಾಯಿ ತಾನು ಶಾಲೆಗೆ ಹೋಗುವಾಗ ಹತ್ತಿರದಲ್ಲಿದ್ದ ಪ್ರಾಥಮಿಕ ಶಾಲೆಯ ಒಂದನೆಯ ತರಗತಿಯಲ್ಲಿ ನನ್ನನ್ನು ಕುಳ್ಳಿರಿಸಿ ಹೋಗುತ್ತಿದ್ದರು. ಆದರೆ, ನಾನು ಅಲ್ಲಿ ಕುಳಿತುಕೊಳ್ಳದೆ ಅವರ ಹಿಂದೆಯೇ ಓಡಿಬರುತ್ತಿದ್ದೆ. ನನಗೆ ಉಪಾಯವಾಗಿ ಮತ್ತು ಗದರಿಸಿಯೂ ಹೇಳಿ ಸೋತ ಅವರು ಕೊನೆಗೆ ನನ್ನ ಅಧ್ಯಾಪಕರ ಹತ್ತಿರ ಕೇಳಿಕೊಂಡರು. ಅವರು ಬೆತ್ತ ಹಿಡಿದು ದುರುಗುಟ್ಟಿ ನೋಡಿ ನನ್ನನ್ನು ಗದರಿಸಿದಾಗ ನನ್ನ ಹಠ ಮಾಯವಾಯಿತು.
ನನಗೆ ಒಬ್ಬಳು ಪುಟ್ಟ ತಂಗಿಯಿದ್ದಳು. ಅವಳು ಮಾತಿನ ಮಲ್ಲಿ. ಅವಳ ಮುಗ್ಧ ಮನಸ್ಸಿನ ಸ್ನಿಗ್ಧ ನುಡಿಗಳು ಎಲ್ಲರಿಗೂ ಸಂತೋಷಕೊಡುತ್ತಿದ್ದವು. ನನ್ನ ಹನ್ನೊಂದನೆಯ ವರ್ಷದಲ್ಲಿ ಉಪನಯನ ಸಂಸ್ಕಾರ ನಡೆಸಿದರು. ಈ ಸಂಭ್ರಮವನ್ನು ಬೆರಗಾಗಿ ನೋಡುತ್ತಿದ್ದ ಅವಳು ಅಮ್ಮನೊಡನೆ ತನಗೆ ಯಾವಾಗ ಉಪನಯನವೆಂದು ಕೇಳಿದಳು. ಆಗ ಅಮ್ಮ, “”ಹುಡುಗಿಯರಿಗೆ ಉಪನಯನವಿಲ್ಲ, ಮದುವೆ ಮಾತ್ರ” ಎಂದರು. “”ನನಗೆ ಯಾವಾಗ ಮದುವೆ?” ಎಂದು ಕೇಳಿದಾಗ ಅವಳಿಗೆ ಅಮ್ಮ ಎಂದರು, “”ನೀನು ದೊಡ್ಡವಳಾಗಬೇಕು, ಒಳ್ಳೆಯ ಹುಡುಗ ಸಿಗಬೇಕು” ಎಂದು. ಅದಕ್ಕೆ ಅವಳ ಪ್ರಶ್ನೆ “”ಒಳ್ಳೆಯ ಹುಡುಗ ಅಣ್ಣನೇ ಇದ್ದಾನಲ್ಲ ಅಮ್ಮ”.
ಒಮ್ಮೆ ಅಮ್ಮ ನಮ್ಮಿಬ್ಬರನ್ನೂ ಕರೆದುಕೊಂಡು ಎಲ್ಲಿಗೋ ಹೋಗುತ್ತಿದ್ದರು. ಮೂರು ಮಂದಿ ಕುಳಿತುಕೊಳ್ಳುವ ಸೀಟಿನ ಕಿಟಕಿ ಬಳಿ ನಾನೂ ನನ್ನ ಪಕ್ಕ ಅಮ್ಮನ ಮಡಿಲಲ್ಲಿ ತಂಗಿಯೂ, ಅವರ ಹತ್ತಿರ ಒಬ್ಬರು ಮುಸ್ಲಿಮ್ ಹೆಂಗಸೂ ಕುಳಿತಿದ್ದರು. ಬಸ್‌ಸ್ಟಾಪ್‌ಗ್ಳಲ್ಲಿ ನಿಂತಾಗಲೆಲ್ಲ ಆ ಮಹಿಳೆ ತನ್ನ ಬುರ್ಖಾ ಮೇಲಕ್ಕೆತ್ತಿ ತಾನು ಇಳಿಯುವ ಸ್ಟಾಪ್ ಬಂತೆ? ಎಂದು ಕಿಟಕಿಯಿಂದ ಇಣುಕಿ ನೋಡುತ್ತಿದ್ದರು. ಆಗ ನನ್ನ ತಂಗಿಗೆ ನಾವು ಮನೆಯಲ್ಲಿ ಮುಖಕ್ಕೆ ಮುಸುಕಿ ಹಾಕಿ ತೆಗೆಯುತ್ತ, “ಕೂ… ಅದಾ…’ ಎನ್ನುತ್ತಿದ್ದ ಆಟ ನೆನಪಾಗಿ ಅವರು ಬುರ್ಖಾ ಹಾಕಿದಾಗ “ಕೂ…’ ಎನ್ನುತ್ತಲೂ, ತೆಗೆದಾಗ “ಅದಾ’ ಎನ್ನುತ್ತಲೂ ಇದ್ದಳು. ಇದನ್ನು ನೋಡಿ ಆ ಹೆಂಗಸೂ ನಗತೊಡಗಿದರು. ಅವಳಿಗೆ ಮೂರು ವರ್ಷವಾದಾಗ ವಿದ್ಯಾರಂಭ ಮಾಡಲು ನಿಶ್ಚಯಿಸಿದೆವು. ವಿದ್ಯಾರಂಭ ಮಾಡುವಾಗ ಅಕ್ಕಿಯ ಮೇಲೆ ಬರೆಯುವುದನ್ನು ನಾವು “ಅಕ್ಕಿಯಲ್ಲಿ ಹಿಡಿಸುವುದು’ ಎನ್ನುತ್ತಿದ್ದೆವು. ಹಿಂದಿನ ದಿನ ನಾವು ನಾಳೆ ಪುಟ್ಟಿಯನ್ನು ಅಕ್ಕಿಯಲ್ಲಿ ಹಿಡಿಸುವುದು ಎನ್ನುವುದನ್ನು ಕೇಳಿ ಅವಳು ಹೆದರಿ, “ನನ್ನನ್ನು ಅಕ್ಕಿಯಲ್ಲಿ ಹಿಡಿಸಬೇಡಿ. ದೋಸೆಯಲ್ಲಾದರೂ ಆದೀತು’ ಎಂದು ಅಳತೊಡಗಿದ್ದಳು.
ವರುಣ
10ನೇ ತರಗತಿ
ಕೆನರಾ ಹೈಸ್ಕೂಲ್, ಮಂಗಳೂರು