Advertisement

ದಿನಪೂರ್ತಿ ನಡೆಯದ ವಿಧಾನ ಪರಿಷತ್‌ ಕಲಾಪ

09:23 AM Jul 20, 2019 | Sriram |

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ರಾಜೀನಾಮೆಗೆ ಆಗ್ರಹಿಸಿ ಮೇಲ್ಮನೆಯಲ್ಲಿ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರಿಂದ ಗುರುವಾರ ಇಡೀ ದಿನದ ಕಲಾಪ ಬಲಿಯಾಗಿದೆ.

Advertisement

ಬೆಳಗ್ಗೆ 11.30ಕ್ಕೆ ದಿನದ ಕಲಾಪ ಆರಂಭಕ್ಕೂ ಮೊದಲೇ ಪ್ರತಿಪಕ್ಷದ ಸದಸ್ಯರಾದ ಅರುಣ್‌ ಶಹಾಪುರ, ನಾರಾಯಣಸ್ವಾಮಿ, ಆಯನೂರು ಮಂಜುನಾಥ, ಕೆ.ಪಿ.ನಂಜುಂಡಿ, ತೇಜಸ್ವಿನಿ ಗೌಡ, ಮಹಾಂತೇಶ್‌ ಕವಟಗಿಮಠ, ಎನ್‌.ರವಿಕುಮಾರ್‌, ಎಂ.ಕೆ.ಪ್ರಾಣೇಶ್‌ ಮೊದಲಾದರು ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದ್ದರು.

ಸರ್ಕಾರದಲ್ಲಿ ಬಹುತಮ ಇಲ್ಲದೇ ಇದ್ದರೂ, ಸಿಎಂ ರಾಜೀ ನಾಮೆ ನೀಡುತ್ತಿಲ್ಲ. ವರ್ಗಾವಣೆ ದಂಧೆ ಯಲ್ಲಿ ಸರ್ಕಾರ ನಿರತವಾ ಗಿದೆ. ಮುಖ್ಯಮಂತ್ರಿಗಳು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು. ಕೆಲ ಕಾಲ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ್‌ ಚಂದ್ರಶೆಟ್ಟಿ, ವಿಧಾನಸಭೆಯಲ್ಲಿ ಸಚಿವರು ಹಾಜರಾತಿ ಇರಬೇಕಾದ್ದರಿಂದ ಸದನವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿದರು.

3.30ಕ್ಕೆ ಆರಂಭವಾಗಬೇಕಿದ್ದ ಸದನ 3.45ಕ್ಕೆ ಆರಂಭವಾಯಿತು. ಆಗಲೂ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಭಾರತ್‌ ಮಾತಾಕೀ ಜೈ, ಒಂದೇ ಮಾತರಂ ಘೋಷಣೆಗಳನ್ನು ಕೂಗುತ್ತಲೇ ಸಿಎಂ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರ ಪ್ರದರ್ಶಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವಾಗಲೇ, ಸದಸ್ಯ ಐವನ್‌ ಡಿಸೋಜಾ ಮಾತನಾಡಿ, ನೀರಿಲ್ಲದ ಬಾವಿಯಿಂದ ಮೇಲೆ ಬನ್ನಿ, ಕಾಂಗ್ರೆಸ್‌ ಶಾಸಕರನ್ನು ಅಪಹರಣ ಮಾಡಿರುವ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು ಎಂದು ಹೇಳಿದರು.

ಸರ್ಕಾರದಲ್ಲಿ ಬಹುಮತ ಇಲ್ಲದೇ ಇದ್ದರೂ, ಅಧಿಕಾರಕ್ಕೆ ಅಂಟಿಕೊಂಡು ಕೂತಿರುವ ಮೂಲಕ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಸುಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ದೂರಿದರು.

Advertisement

ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದೆ. ಇಲ್ಲಿಯೂ ಕಲಾಪ ನಡೆಯಲು ಅವಕಾಶ ಮಾಡಿಕೊಡಬೇಕು. ಕಳೆದ ಮೂರು ದಿನದಿಂದ ಪ್ರತಿಪಕ್ಷದ ಸದಸ್ಯರ ಪ್ರತಿಭಟನೆಯಿಂದ ಕಲಾಪ ಸರಿಯಾಗಿ ನಡೆದಿಲ್ಲ. ಇಂತಹ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಸಭಾ ನಾಯಕಿ ಹಾಗೂ ಸಚಿವೆ ಡಾ.ಜಯಮಾಲಾ ಆಗ್ರಹಿಸಿದರು.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ಪರವಿರೋಧ ವಾಗ್ವಾದ ಹೆಚ್ಚಾಗುತ್ತಿದ್ದಂತೆ ಕಲಾಪದಲ್ಲಿ ಗದ್ದಲ ಏರ್ಪಟ್ಟಿದ್ದರಿಂದ ಸಭಾಪತಿಯವರು ಸದನವನ್ನು ಸಂಜೆ 5.30ರವರೆಗೆ ಮುಂದೂಡಿದರು. 6 ಗಂಟೆಗೆ ಸದನದ ಕಲಾಪ ಪುನರ್‌ ಆರಂಭವಾಗುತ್ತಿದ್ದಂತೆ ಬಾವಿಗೆ ಇಳಿದು ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಸಭಾಪತಿಯವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next