Advertisement

ನಾಡಿದ್ದು ಸಿದ್ದರಾಮಯ್ಯಗೆ ಅಭಿನಂದನೆ

01:41 PM Jun 12, 2017 | Team Udayavani |

ದಾವಣಗೆರೆ: ರಾಜ್ಯ ಸರ್ಕಾರಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿಸಲು, ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ, ಹಾಗೂ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಡಲು ಆದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೂ. 14 ರಂದು ಬೆಂಗಳೂರಿನ ಅರಮನೆ ಮೈದಾನದ ಶ್ರೀಕೃಷ್ಣ ವಿಹಾರ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

Advertisement

ಬುಧವಾರ ಸಂಜೆ 4ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಹಾಸಭಾದಿಂದ ಅಭಿನಂದಿಸಲಾಗುವುದು. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ವಿವಿಧ ಭಾಗದವರು ಒಳಗೊಂಡಂತೆ 40-50 ಸಾವಿರ ಜನರು ಭಾಗವಹಿಸುವರು. ಜಾತಿ, ಪಕ್ಷಾತೀತವಾಗಿ ನಡೆಯುವ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. 

ನಮ್ಮವರೇ ಆದ ಬಿ.ಡಿ. ಜತ್ತಿ, ಎಸ್‌.ಆರ್‌. ಕಂಠಿ, ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಎಸ್‌.ಆರ್‌. ಬೊಮ್ಮಾಯಿ, ಜೆ.ಎಚ್‌. ಪಟೇಲ್‌, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅವರು ಯಾರು ಸರ್ಕಾರಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿಸುವ ಆದೇಶ ಮಾಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಮಾಡಿದ್ದಾರೆ. ಹಾಗಾಗಿ ಅವರನ್ನು ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದರು. 

ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ 5ಕೋಟಿ ವೆಚ್ಚದಲ್ಲಿ ಅಕ್ಕಮಹಾದೇವಿ ಹೆಸರಿಡಲಾಗಿದೆ. ಕಲಬುರುಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ, ಕೇಂದೀಯ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್‌ ಹೆಸರಿಡುವ ಬಗ್ಗೆಯೂ ಚರ್ಚೆ ನಡೆದಿದೆ. ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆಯನ್ನ ಪ್ರಾರಂಭಿಸಿದ್ದಾರೆ. ಈ ಎಲ್ಲಾ ಕಾರಣಕ್ಕೆ ಮುಖ್ಯಮಂತ್ರಿಗಳನ್ನ ಅಭಿನಂದಿಸಲಾಗುವುದು ಎಂದು ತಿಳಿಸಿದರು. 

ಕಳೆದ ವರ್ಷ ನಡೆದ ಸಾಮಾಜಿಕ ಶೈಕ್ಷಣಿಕ(ಜಾತಿ ಗಣತಿ) ಸಮೀಕ್ಷೆ ಸಂದರ್ಭದಲ್ಲಿ ವೀರಶೈವ-ಲಿಂಗಾಯತರು ಸರಿಯಾಗಿ ಜಾತಿ, ಉಪಜಾತಿ ಹೆಸರು ಬರೆಸದ ತಪ್ಪು ಮಾಡಿದ್ದಾರೆ. ಕೆಲವರು ವೀರಶೈವ ಗಾಣಿಗ, ಸಿಂಪಿಗ ಎಂದೆಲ್ಲಾ ಬರೆಸಿದ್ದಾರೆ. ಇನ್ನು ಕೆಲವರು ಆರ್‌ಎಸ್ಸೆಸ್‌ನವರ ಮಾತು ಕೇಳಿ ಹಿಂದೂ ಲಿಂಗಾಯತ ಎಂದೆಲ್ಲಾ ಬರೆಸಿದ್ದಾರೆ. ಸಾದರು, ವೀರಶೈವರು, ಪಂಚಮಸಾಲಿಗಳು ಎಲ್ಲರೂ ಒಂದೇ. ಎಲ್ಲರೂ ಒಂದಾದರೆ ನಮ್ಮ ಸಂಖ್ಯೆಯೇ ಒಂದೂವರೆ ಕೋಟಿಯಷ್ಟು ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ಎಸ್‌. ವೀರಣ್ಣ, ಎ.ಸಿ. ಜಯಣ್ಣ, ಅಣಬೇರು ರಾಜಣ್ಣ, ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ್‌, ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಸಿ. ಉಮಾಪತಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎಚ್‌. ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌, ಸುಧಾ ದಿಬ್ದಳ್ಳಿ, ಜ್ಯೋತಿ ಜಂಬಗಿ, ನಿರ್ಮಲಾ ಸುಭಾಶ್‌, ಕಿರುವಾಡಿ ಸೋಮಶೇಖರ್‌, ದೇವರಮನೆ ಶಿವಕುಮಾರ್‌, ದಾನಪ್ಪ ಜತ್ತಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next