ಕುಮಟಾ: ಕಾಗಾಲ-ಹುಬ್ಬಣಗೇರಿ ನಿವಾಸಿ ನಾಗಾಂಜಲಿ ಪರಮೇಶ್ವರ ನಾಯ್ಕ ಎಸ್‌ಎಸ್‌ಎಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕುಮಟಾ ಕೊಂಕಣ ಎಜ್ಯುಕೇಶನ್‌ನ ಸಿವಿಎಸ್‌ಕೆ ಪ್ರೌಢಶಾಲೆಯಲ್ಲಿ ಓದುತ್ತಿರುವ ನಾಗಾಂಜಲಿ 625ಕ್ಕೆ 625 ಅಂಕ ಪಡೆದು ಹುಬ್ಬೇರುವಂತೆ ಮಾಡಿದ್ದಾಳೆ. ಶಾಲೆಯಲ್ಲಿ ಆಡಳಿತ ಮಂಡಳಿಯಿಂದ ಹಿಡಿದು ಮುಖ್ಯಾಧ್ಯಾಪಕರು, ಶಿಕ್ಷಕರು ಉತ್ತಮ ಪ್ರೋತ್ಸಾಹ ನೀಡಿದ್ದು, ಶಿಕ್ಷಕರು ಕಾಲಕಾಲಕ್ಕೆ ಇವರನ್ನು ಸಂಪರ್ಕಿಸಿ, ಪರೀಕ್ಷೆ ಸಿದ್ಧತೆ ಕುರಿತು ಮಾರ್ಗದರ್ಶನ ನೀಡಿರುವುದು ಉನ್ನತಿಗೆ ಕಾರಣವಾಗಿದೆ. ಗಡಿ ಭದ್ರತಾ ಪಡೆಯಲ್ಲಿ ಹವಾಲ್ದಾರ್ ಆಗಿ 2006ರಲ್ಲಿ ನಿವೃತ್ತರಾಗಿರುವ ಪರಮೇಶ್ವರ ನಾಯ್ಕ ಮಹೇಂದ್ರಾ ಟೆಂಪೋವನ್ನು ಖರೀದಿಸಿ ಅದರಿಂದಲೇ ಜೀವನ ನಡೆಸುತ್ತಿದ್ದಾರೆ. ಓರ್ವ ಟೆಂಪೋ ಮಾಲಕನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಮಧ್ಯಮ ವರ್ಗದವರೂ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.