ಹುಮನಾಬಾದ: ಈ ಭಾಗದ ಜನಪ್ರಿಯ ಶಾಸಕರೂ ಆಗಿರುವ ರಾಜ್ಯದ ಗಣಿ, ಭೂವಿಜ್ಞಾನ ಮತ್ತು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಅವರ ಮುಂದಾಳತ್ವದಲ್ಲಿ ಹೊಸ ವರ್ಷದಲ್ಲಿ ದಸರಾ ಉತ್ಸವ ನಡೆಯಬೇಕು ಎಂದು ಬಾಳೆಹೊನ್ನುರು ರಂಭಾಪುರಿ ಜಗದ್ಗುರುಗಳು ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಹಿರೇಮಠದ ರೇಣುಕ ಗಂಗಾಧರ ಸ್ವಾಮೀಜಿ ಅವರ 21ದಿನಗಳ ಕಾಲದ ಮೌನ ಅನುಷ್ಠಾನ ಸಮಾರೋಪದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಚಿವ ಪಾಟೀಲ ಧರ್ಮದ ಮೇಲೆ ಅಭಿಮಾನ ಉಳ್ಳವರು. ಅವರಿಗೆ ಮುಜರಾಯಿ ಖಾತೆ ದೊರೆತಿರುವುದು ನಿಜಕ್ಕೂ ಸೂಕ್ತ. ಅವರ ಅಧಿಕಾರ ಅವಧಿಯಲ್ಲಿ ಪ್ರಮುಖ ಮಠಗಳ ಅಭಿವೃದ್ಧಿಗಾಗಿ ಶಕ್ತಿಮೀರಿ ಅನುದಾನ ನೀಡಿದಲ್ಲಿ ಅವರ ಹೆಸರು ಸುವರ್ಣಾಕ್ಷರದಲ್ಲಿ ಶಾಶ್ವತ ನೆಲೆಯಾಗುತ್ತದೆ ಎಂದರು.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಾಧನೆ, ಸಿದ್ಧಿಗಾಗಿ ಅನುಷ್ಟಾನ ಕೈಗೊಳ್ಳುತ್ತಿರುವ ರೇಣುಕ ಗಂಗಾಧರ ಸ್ವಾಮೀಜಿ ಅವರ ಕಾರ್ಯ ಪ್ರಶಂಸನೀಯ. ಅಂಥವರಿಗೆ ಭಕ್ತರು ಸಹಕರಿಸಬೇಕು ಎಂದು ಸಲಹೆ ನೀಡಿದರು. ಹುಡಗಿ ಹಿರೇಮಠದ ವೀರೂಪಾಕ್ಷ ಸ್ವಾಮೀಜಿ, ತಡೋಳಾ ಗುರುಕುಲ ಆಶ್ರಮದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಳ್ಳಿಖೇಡ(ಬಿ) ಚಿಕ್ಕಮಠದ ಪಂಡಿತಾರಾಧ್ಯ ಸ್ವಾಮೀಜಿ, ಸದಲಾಪುರ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ, ಹಿರೇನಾಂವ ಸ್ವಾಮೀಜಿ, ರಾಜೇಶ್ವರದ ಘನಲಿಂಗ ರುದ್ರಮುನಿ ಸ್ವಾಮೀಜಿ, ಸೋಮನಾಥಲಿಂಗ ಸ್ವಾಮೀಜಿ, ಕಲ್ಲೂರು ಹಿರೇಮಠದ ಮೃತ್ಯುಂಜಯ ಸ್ವಾಮೀಜಿ, ತ್ರಿಪುರಾಂತ ಸ್ವಾಮೀಜಿ ಮತ್ತಿತರರು ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಗೌರವ ಕಾರ್ಯದರ್ಶಿ ವೀರಣ್ಣ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಮಾಳಶಟ್ಟಿ, ಬಾಬುರಾವ್
ಪೋಚಂಪಳ್ಳಿ, ಬಾಬುರಾವ್ ಪರಮಶಟ್ಟಿ ಇನ್ನಿತರರು ಇದ್ದರು. ಅನುಷ್ಟಾನ ಸಮಾಪ್ತಿಯ ನಂತರ ಭಕ್ತರು ಹಿರೇಮಠದ ಗಂಗಾಧರ ಸ್ವಾಮೀಜಿ ಅವರನ್ನು ದೇವಸ್ಥಾನದಿಂದ ಹಿರೇಮಠದ ವರೆಗೆ ಪುಷ್ಪ ಹಾಸಿ ಸ್ವಾಗತಿಸಿದರು.