Advertisement
ಆಕೆ ಗೆಳತಿ ಕೀರ್ತನಾ ಜತೆಗೆ ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ರವಿವಾರ ಮಧ್ಯಾಹ್ನ ತೆರಳಿದ್ದರು. ಸಂಜೆ ವೇಳೆಗೆ ಸಮೀಪದಲ್ಲಿದ್ದ ಮೈದಾಳ ಕೆರೆಯಿಂದ ಉಕ್ಕಿ ಹರಿಯುವ ನೀರನ್ನು ವೀಕ್ಷಿಸಲು ತೆರಳಿದ್ದರು. ಸೆಲ್ಫಿ ತೆಗೆದುಕೊಂಡು ದಡಕ್ಕೆ ಬರುವಾಗ ಬಂಡೆಯಿಂದ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಜತೆಯಲ್ಲಿದ್ದ ಸ್ನೇಹಿತೆಯು ಸಂಬಂಧಿಕರಿಗೆ, ಸ್ನೇಹಿತರಿಗೆ ಮಾಹಿತಿ ನೀಡಿದರು. ಕೂಡಲೇ ಕ್ಯಾತ್ಸಂದ್ರ ಪೊಲೀ ಸರು, ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಧಾವಿಸಿ ತೀವ್ರ ಹುಡುಕಾಟ ನಡೆಸಿದರೂ ವಿದ್ಯಾರ್ಥಿನಿಯ ಪತ್ತೆಯಾಗ ಲಿಲ್ಲ. ರಾತ್ರಿ ಆಗಿದ್ದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಸೋಮವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದಾಗ ಅಲ್ಲೇ ಕಲ್ಲಿನ ಪೊಟರೆಯಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿನಿ ಜನರ ಶಬ್ದ ಕೇಳಿ ಜೋರಾಗಿ ಕೂಗಿಕೊಂಡರು. ನೀರಿನಲ್ಲಿ ಕೊಚ್ಚಿ ಹೋಗಿ 12 ಗಂಟೆಗಳ ಬಳಿಕ ಯಶಸ್ವಿಯಾಗಿ ರಕ್ಷಿಸಲಾಯಿತು.
ಚೇತರಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಾ, ಗೆಳತಿ ಜತೆಗೆ ಸೆಲ್ಫಿ ತೆಗೆದುಕೊಂಡು ವಾಪಸ್ ಬರುವಾಗ ಬಂಡೆ ಜಾರಿ ಕೆಳಕ್ಕೆ ಬಿದ್ದೆ. ನನಗೆ ಈಜು ಬರುವುದಿಲ್ಲ. ಪುಣ್ಯಕ್ಕೆ ಬಂಡೆ ಮಧ್ಯೆ ಸಿಲುಕಿಕೊಂಡೆ. ಸ್ವಲ್ಪ ಮಾತ್ರ ಆಕಾಶ ಕಾಣಿಸುತ್ತಿತ್ತು. ಯಾರಾದರೂ ಬಂದು ರಕ್ಷಿಸಿಯಾರೆಂಬ ಭರವಸೆಯಿಂದ ಧೈರ್ಯವಾಗಿದ್ದೆ. ಪೊಟರೆಯಲ್ಲಿ ಜಾಗ ಇಲ್ಲದ ಕಾರಣ ರಾತ್ರಿ ಇಡೀ ಮಂಡಿಯೂರಿ ಕುಳಿತಿದ್ದೆ. ನೀರು ಸಹ ಮಂಡಿಯವರೆಗೆ ಇತ್ತು. ದೇವರ ಧ್ಯಾನ ಮಾಡುತ್ತ, ಅಪ್ಪ, ಅಮ್ಮನನ್ನು ನೆನೆಯುತ್ತಿದ್ದೆ. ಬೆಳಕು ಬಂದ ತತ್‌ಕ್ಷಣ ಯಾರೋ ಕೂಗಿದ ಶಬ್ದ ಕೇಳಿಸಿತು. ನಾನೂ ಕೂಗಿ ಕರೆದೆ. ತಹಶೀಲ್ದಾರ್, ಅಗ್ನಿ ಶಾಮಕ ದಳ, ಎಲ್ಲರ ಸಹಕಾರದಿಂದ ಬದುಕಿದ್ದೇನೆ ಎಂದರು. ಇಂಥ ಜಾಗದಲ್ಲಿ ಸೆಲ್ಫಿ ಗೀಳಿಗೆ ಯಾರೂ ಮುಂದಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ.