Advertisement

ಜಗತ್ತಿಗೆ ಅಣ್ವಸ್ತ್ರ ಸಮರದ ಅಪಾಯ! ಈಗ ಏಕೆ ಭೀತಿ?

12:41 AM Oct 15, 2022 | Team Udayavani |

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದ ಅನಂತರ ಈಗ ಜಗತ್ತಿನ ಮುಂದಿರುವ ಪ್ರಶ್ನೆ ಇದು. ರಷ್ಯಾ ಯುದ್ಧದಾಹದಿಂದಾಗಿ ಈಗಾಗಲೇ ಉಕ್ರೇನ್‌ ಬಹಳಷ್ಟು ನರಳಿದೆ. ಇದರ ನಡುವೆಯೇ ನ್ಯಾಟೋಗೆ ಉಕ್ರೇನ್‌ ಅನ್ನು ಸೇರಿಸಿಕೊಳ್ಳುವ ಕುರಿತಂತೆ ಮತ್ತೆ ಚರ್ಚೆಗಳು ಶುರುವಾಗಿವೆ. ಒಂದು ವೇಳೆ ಉಕ್ರೇನ್‌ ನ್ಯಾಟೋಗೆ ಸೇರಿದ್ದೇ ಆದರೇ ಮೂರನೇ ಮಹಾ ಸಮರ ಪಕ್ಕಾ ಎಂದು ರಷ್ಯಾ ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ಸಮರ ನಡೆದರೆ ಅಣ್ವಸ್ತ್ರ ಪ್ರಯೋಗದ ಭೀತಿಯನ್ನು ತಳ್ಳಿಹಾಕುವಂತೆ ಇಲ್ಲವೇ ಇಲ್ಲ…

Advertisement

ಈಗ ಏಕೆ ಭೀತಿ?
ಯುದ್ಧಾರಂಭದಿಂದಲೂ ಈ ಭೀತಿ ಇದ್ದೇ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಆತಂಕ ಹೆಚ್ಚಾಗಲು ಕಾರಣಗಳೂ ಇವೆ. ಅಂದರೆ ಉಕ್ರೇನ್‌ ಸೇನೆಯು ಇತ್ತೀಚೆಗಷ್ಟೇ ಕ್ರಿಮಿಯಾದ ಸೇತುವೆಯನ್ನು ಟಾರ್ಗೆಟ್‌ ಮಾಡಿಕೊಂಡು ಡ್ರೋನ್‌ಮೂಲಕ ದಾಳಿ ನಡೆಸಿ, ಆ ಸೇತುವೆಯನ್ನು ಧ್ವಂಸ ಮಾಡಿದೆ. ಇದರಿಂದ ಕೆರಳಿ ಕೆಂಡವಾಗಿರುವ ರಷ್ಯಾ, ಆಗಿನಿಂದಲೂ ಉಕ್ರೇನ್‌ ಮೇಲೆ ದಿನವೂ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಈ ಸಮಯದಲ್ಲಿ ಉಕ್ರೇನ್‌ಗೆ ಇನ್ನೂ ಹೆಚ್ಚಿನ ಸಹಾಯ ನೀಡಲು ಐರೋಪ್ಯ ದೇಶಗಳು ಮತ್ತು ಅಮೆರಿಕ ಮುಂದಾಗಿವೆ. ಅಲ್ಲದೆ ಉಕ್ರೇನ್‌ ಅನ್ನು ನ್ಯಾಟೋಗೆ ಸೇರಿಸಿಕೊಳ್ಳುವ ಸಿದ್ಧತೆಗಳೂ ಶುರುವಾಗಿವೆ. ಹೀಗಾಗಿ ರಷ್ಯಾ ನ್ಯೂಕ್ಲಿಯರ್‌ ಬಾಂಬ್‌ ಪ್ರಯೋಗಿಸುವ ಬೆದರಿಕೆ ಹಾಕಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವೂ ರಷ್ಯಾ ಗಡಿಯಲ್ಲಿರುವ ಇತರ ದೇಶಗಳಿಗೆ ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುತ್ತಿದೆ.

ರಷ್ಯಾ ಬಳಿಯೇ ಹೆಚ್ಚು
ಜಗತ್ತಿನ ಬೇರೆ ಎಲ್ಲ ದೇಶಗಳನ್ನು ಹೋಲಿಕೆ ಮಾಡಿದರೆ ರಷ್ಯಾ ಬಳಿಯೇ ಹೆಚ್ಚು ಅಣು ಬಾಂಬ್‌ಗಳಿವೆ ಎಂಬುದು ಆತಂಕದ ವಿಚಾರ. ಅಷ್ಟೇ ಅಲ್ಲ, ನಮ್ಮನ್ನು ನಾವು ಕಾಯ್ದುಕೊಳ್ಳಲು ನಮ್ಮಲ್ಲಿರುವ ಎಲ್ಲ ಪ್ರಬಲ ಶಕ್ತಿಗಳನ್ನು ಬಳಸಿಕೊಳ್ಳುತ್ತೇವೆ ಎಂಬ ರಷ್ಯಾ ಅಧ್ಯಕ್ಷ ಪುತಿನ್‌ ಅವರ ಹೇಳಿಕೆಯೂ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ವಿಚಿತ್ರವೆಂದರೆ ಅಣ್ವಸ್ತ್ರದ ರೇಸ್‌ನಲ್ಲಿ ರಷ್ಯಾವೇ ಮುಂದೆ ಇದೆ. ಇಲ್ಲಿ ಅಂದಾಜು 5,977 ಅಣು ಬಾಂಬ್‌ಗಳಿದ್ದರೆ, ಅಮೆರಿಕದ ಬಳಿ 5,428 ಅಣ್ವಸ್ತ್ರಗಳಿವೆ. ಇದರಲ್ಲಿ ಈಗಾಗಲೇ ಸೇನೆಯಿಂದ ನಿವೃತ್ತಿ ಹೊಂದಿರುವ ಅಣ್ವಸ್ತ್ರಗಳೂ ಇವೆ. ಆದರೂ ಜಗತ್ತಿನಲ್ಲಿ ಇರುವ ಒಟ್ಟಾರೆ ಅಣ್ವಸ್ತ್ರಗಳಲ್ಲಿ ಇವರಿಬ್ಬರ ಬಳಿಯೇ ಶೇ.90ರಷ್ಟಿವೆ. ರಷ್ಯಾವು ತನ್ನ ಬಳಿ ಈ ಕ್ಷಣವೇ ಬಳಕೆ ಮಾಡಬಲ್ಲ 1,458 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದ್ದರೆ, ಅಮೆರಿಕ 1,389 ಸಿಡಿತಲೆಗಳನ್ನು ಹೊಂದಿದೆ. ಇವುಗಳನ್ನು ಅಂತಾರಾಷ್ಟ್ರೀಯ ಬ್ಯಾಲೆಸ್ಟಿಕ್‌ ಮಿಸೈಲ್‌, ಸಬ್‌ಮೆರಿನ್‌ನಿಂದ ಪ್ರಯೋಗಿಸಬಲ್ಲ ಬ್ಯಾಲೆಸ್ಟಿಕ್‌ ಮಿಸೈಲ್‌ ಮತ್ತು ಸ್ಟ್ರಾಟಜಿಕ್‌ ಬಾಂಬರ್ಸ್‌ಗಳನ್ನು ಹೊಂದಿವೆ. ಇನ್ನು ಟ್ರಾಕ್ಟಿಕಲ್‌ ನ್ಯೂಕ್ಲಿಯರ್‌ ವೆಪನ್‌ ವಿಚಾರದಲ್ಲಿ ರಷ್ಯಾವೇ ಅಮೆರಿಕಗಿಂತ ಹತ್ತರಷ್ಟು ಮುಂದಿದೆ. ಅಲ್ಲದೆ ಅಮೆರಿಕವು ತನ್ನ ಬಳಿ ಇರುವ ಒಟ್ಟಾರೆ ಟ್ರಾಕ್ಟಿಕಲ್‌ ನ್ಯೂಕ್ಲಿಯರ್‌ ವೆಪನ್‌ನಲ್ಲಿ ಶೇ.50ರಷ್ಟನ್ನು ರಷ್ಯಾದಲ್ಲಿರುವ ಐರೋಪ್ಯ ಒಕ್ಕೂಟದ ದೇಶದಲ್ಲಿ ಇರಿಸಿದೆ. ಅಮೆರಿಕದ ಈ ವೆಪನ್‌ಗಳನ್ನು 0.3 ಕಿ.ಮೀ.ನಿಂದ 170 ಕಿ.ಮೀ.ವರೆಗೆ ಹಾರಿಸಬಹುದಾಗಿದೆ.

ಯಾವ ಬಗೆಯ ಅಣ್ವಸ್ತ್ರವನ್ನು ಪ್ರಯೋಗಿಸಬಹುದು?
ಸದ್ಯ ರಷ್ಯಾ ಆಗಲಿ ಅಮೆರಿಕವಾಗಲಿ ಎಂಥ ಇಂಥದ್ದೇ ನ್ಯೂಕ್ಲಿಯರ್‌ ಅಸ್ತ್ರವನ್ನು ಬಳಕೆ ಮಾಡುತ್ತೇವೆ ಎಂದು ಹೇಳಿಕೊಂಡಿಲ್ಲ. ಆದರೆ ರಷ್ಯಾದ ನಾಯಕರೊಬ್ಬರ ಪ್ರಕಾರ ಕೆಳಮಟ್ಟದಲ್ಲಿ ಹಾದುಹೋಗುವಂಥ ಟ್ರಾಕ್ಟಿಕಲ್‌ ನ್ಯೂಕ್ಲಿಯರ್‌ ವೆಪನ್‌ ಅನ್ನು ಬಳಕೆ ಮಾಡಬಹುದು ಎಂದಿದ್ದಾರೆ.

ಏನಿದು ಟ್ರಾಕ್ಟಿಕಲ್‌ ನ್ಯೂಕ್ಲಿಯರ್‌ ವೆಪನ್‌?
ಸಾಮಾನ್ಯವಾಗಿ ದೇಶವೊಂದರ ನಗರವನ್ನು ಟಾರ್ಗೆಟ್‌ ಮಾಡಿಕೊಂಡು ಅಣ್ವಸ್ತ್ರ ದಾಳಿ ನಡೆಸಬೇಕಾದರೆ ದೊಡ್ಡ ಮಟ್ಟದ ಅಣ್ವಸ್ತ್ರವನ್ನೇ ಪ್ರಯೋಗಿಸಬೇಕು. ಆದರೆ ಯುದ್ಧಾಂಗಣದಲ್ಲಿ ಕಡಿಮೆ ಪ್ರದೇಶದ ಗುರಿಯನ್ನು ಇರಿಸಿಕೊಂಡು ಈ ಟ್ರಾಕ್ಟಿಕಲ್‌ ವೆಪನ್‌ ಅನ್ನು ಬಳಕೆ ಮಾಡಬಹುದು. ಇದರ ತೀವ್ರತೆಯೂ ಕಡಿಮೆ ಇರುತ್ತದೆ. ಈ ಅಣ್ವಸ್ತ್ರಗಳನ್ನು ನೆಲದ ಮೇಲಿಂದ, ಸಬ್‌ಮೆರಿನ್‌ನಿಂದ ಪ್ರಯೋಗಿಸಬಹುದು. ಅಷ್ಟೇ ಅಲ್ಲ, ವಿಮಾನಗಳ ಮೂಲಕವೂ ಕೆಳಗೆ ಹಾಕಬಹುದು.

Advertisement

ದೊಡ್ಡ ಮಟ್ಟದ ಬಾಂಬ್‌ ಬಳಕೆ ಮಾಡಲ್ಲವೇ?
ಸದ್ಯದ ಸ್ಥಿತಿಯಲ್ಲಿ ಇಂಥ ಸಾಧ್ಯತೆ ಗಳು ಕಡಿಮೆ. ಆದರೆ ರಷ್ಯಾ ಮತ್ತು ಅಮೆರಿಕ ನಡುವೆ ನೇರವಾಗಿ ಯುದ್ಧವಾದರೆ ಇಂಥ ಬೃಹತ್‌ ಗಾತ್ರದ ಅಣ್ವಸ್ತ್ರಗಳನ್ನು ಪ್ರಯೋ ಗಿಸುವ ಸಾಧ್ಯತೆ ಇದೆ ಎಂದು ರಕ್ಷಣ ವಲಯದ ವಿಶ್ಲೇಷಕರು ಹೇಳುತ್ತಾರೆ. ಸದ್ಯದ ಮಟ್ಟಿಗೆ ಇಂಥ ದೊಡ್ಡ ಅಣ್ವಸ್ತ್ರಗಳು ಎರಡು ದೇಶದ ಶಸ್ತ್ರಸಂಗ್ರಹಾಗಾರದಲ್ಲಿವೆ ಯಂತೆ. ಹಾಗಾಗಿ ಹೆದರಬೇಕಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.

ಐರೋಪ್ಯ ದೇಶಗಳಿಗೆ ರಷ್ಯಾದಿಂದಲೇ ಅಣು ಇಂಧನ ಪೂರೈಕೆ?
ವಿಚಿತ್ರವೆನಿಸಿದರೂ ಈ ಅಂಶ ಸತ್ಯ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿ ಈಗಾಗಲೇ ತಿಂಗಳುಗಳೇ ಕಳೆದಿದ್ದರೂ ಐರೋಪ್ಯ ಒಕ್ಕೂಟ ರಷ್ಯಾದ ಈ ಅಣು ಇಂಧನ ಕ್ಷೇತ್ರದ ಮೇಲೆ ಯಾವುದೇ ರೀತಿಯಲ್ಲೂ ದಿಗ್ಬಂಧನ ಹೇರಿಲ್ಲ. ಏಕೆಂದರೆ ಐರೋಪ್ಯ ಒಕ್ಕೂಟದ ಬಹಳಷ್ಟು ದೇಶಗಳಿಗೆ ಈಗಲೂ ರಷ್ಯಾವೇ ಅಣು ಇಂಧನ ಸರಬರಾಜು ಮಾಡುತ್ತಿದೆ. ಅಲ್ಲದೆ ಒಂದು ವೇಳೆ ಐರೋಪ್ಯ ದೇಶಗಳು ಆಮದು ನಿಲ್ಲಿಸಿದರೆ ಈ ದೇಶಗಳಲ್ಲಿ ದೊಡ್ಡ ವಿದ್ಯುತ್‌ ಸಮಸ್ಯೆಯಾಗಲಿದೆ.

ಸದ್ಯ ಐರೋಪ್ಯ ಒಕ್ಕೂಟದ 18 ಕಡೆಗಳಲ್ಲಿ ರಷ್ಯಾದ ಅಣು ರಿಯಾಕ್ಟರ್‌ಗಳಿವೆ. ಅಂದರೆ ಪಿನ್‌ಲೆಂಡ್‌, ಸ್ಲೊವಾಕಿಯಾ, ಹಂಗೇರಿ, ಬಲ್ಗೇರಿಯಾ ಮತ್ತು ಚೆಕ್‌ ರಿಪಬ್ಲಿಕ್‌. ಅಲ್ಲದೆ, ರಷ್ಯಾವು ಐರೋಪ್ಯ ಒಕ್ಕೂಟಗಳಿಗೆ ಶೇ.19ರಷ್ಟು ಅಣು ಇಂಧನ ಪೂರೈಸುತ್ತಿದೆ. ಜತೆಗೆ ಕಳೆದ ವರ್ಷ ಐರೋಪ್ಯ ಒಕ್ಕೂಟ ಆಡಳಿತವು 203.7 ದಶಲಕ್ಷ ಡಾಲರ್‌ನಷ್ಟು ಯುರೇನಿಯಂ ಅನ್ನು ರಷ್ಯಾದಿಂದ ಆಮದು ಮಾಡಿಕೊಂಡಿತ್ತು.

ಐರೋಪ್ಯ ಒಕ್ಕೂಟದಲ್ಲಿ
ಯಾರ ಬಳಿ ಅಣ್ವಸ್ತ್ರಗಳಿವೆ?
ನ್ಯಾಟೋ ದೇಶಗಳು:
ಟರ್ಕಿ, ಇಟಲಿ, ಜರ್ಮನಿ, ಫ್ರಾನ್ಸ್‌, ಇಂಗ್ಲೆಂಡ್‌, ಬೆಲ್ಜಿಯಂ.

ಯಾವ ದೇಶಗಳಲ್ಲಿ
ಎಷ್ಟು ಅಣ್ವಸ್ತ್ರಗಳಿವೆ?
1. ರಷ್ಯಾ 5,977
2. ಅಮೆರಿಕ 5,428
3. ಚೀನ 350
4. ಫ್ರಾನ್ಸ್‌ 290
5. ಇಂಗ್ಲೆಂಡ್‌ 225
6. ಪಾಕಿಸ್ಥಾನ 165
7. ಭಾರತ 160
8. ಇಸ್ರೇಲ್‌ 90
9. ಉ.ಕೊರಿಯಾ 20

ರಷ್ಯಾ ಬಳಿಯ ನ್ಯೂಕ್ಲಿಯರ್‌ ವೆಪನ್‌ಗಳು

1,588 ಈಗಾಗಲೇ ಯುದ್ಧಕ್ಕೆ ಸನ್ನದ್ಧಗೊಳಿಸಿ ಇರಿಸಲಾ ಗಿರುವಂಥ ಅಣ್ವಸ್ತ್ರಗಳು
2,889 ಮೀಸಲು ರೀತಿಯಲ್ಲಿ ಇರಿಸಿರುವಂಥವು
1500 ಈಗಾಗಲೇ ನಿವೃತ್ತಿಯಾಗಿರುವಂಥವು

-ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next