Advertisement

ಅಪಾಯ ಆಹ್ವಾನಿಸುತ್ತಿದೆ ಕಾಪೆಜಾಲು ರಸ್ತೆ ಸನಿಹದ ತೋಡು

10:16 PM Nov 13, 2019 | mahesh |

ಬೆಳಂದೂರು: ಕಡಬ ತಾಲೂಕಿನ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬರೆಪ್ಪಾಡಿ – ನಾಣಿಲ – ಕಾಣಿಯೂರು ರಸ್ತೆಯ ಕಾಪೆಜಾಲಿನ ತಿರುವು ರಸ್ತೆ ಸನಿಹದಲ್ಲೇ ದೊಡ್ಡ ತೋಡು ಹರಿಯುತ್ತಿದ್ದು, ಅಪಾಯ ಅಹ್ವಾನಿಸುವಂತಿದೆ.

Advertisement

ಮಾಣಿ – ಮೈಸೂರು ಹೆದ್ದಾರಿಯ ಮಂಡ್ಯಂಗಳ ಎಂಬಲ್ಲಿ ರಸ್ತೆ ಬದಿಯ ಕೆರೆಗೆ ಕಾರೊಂದು ಬಿದ್ದು ನಾಲ್ವರು ಬಲಿಯಾದ ಘಟನೆ ನೆನೆಪಿಸಿಕೊಳ್ಳುವ ಇಲ್ಲಿನ ಮಂದಿ, ಇದೀಗ ಅಪಾಯಕಾರಿ ಸ್ಥಳದ ಬಗ್ಗೆ ಭೀತಿಗೊಂಡಿದ್ದಾರೆ.

ಲೋಕೋಪಯೋಗಿ ಇಲಾಖೆ ಅಧೀನದ ಬರೆಪ್ಪಾಡಿ -ನಾಣಿಲ -ಕಾಣಿಯೂರು ಸುಮಾರು 9.5 ಕಿ.ಮೀ.ನಷ್ಟು ಉದ್ದದ ರಸ್ತೆಯ ಬರೆಪ್ಪಾಡಿಯಿಂದ ಮುಂದುವರಿದಾಗ ಕಾಪೆಜಾಲಿನ ತಿರುವು ಜಾಗದ ಇಳಿಜಾರು ಭಾಗದಲ್ಲೆ ಈ ಅಪಾಯಕಾರಿ ಸ್ಥಳವಿದೆ. ಇಲ್ಲಿ ಹರಿಯುವ ತೋಡಿಗೂ ರಸ್ತೆಯ ಅಂತರ ಬಹಳಷ್ಟು ಕಡಿಮೆಯಿದೆ. ಅಗಲವಾದ ತೋಡಿನಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಹಲವು ಬಾರಿ ಈ ತೋಡಿನ ನೀರು ರಸ್ತೆಗೆ ಬಂದು ಸಂಚಾರ ಸ್ಥಗಿತಗೊಳ್ಳುತ್ತದೆ. ವರ್ಷಂಪ್ರತಿ ತೋಡಿನ ಧರೆ ಕುಸಿಯುತ್ತ ಬರುತ್ತಿದ್ದು, ರಸ್ತೆಯ ಸನಿಹಕ್ಕೆ ಬರುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತು¤ಕೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಈ ರಸ್ತೆ ಕುದ್ಮಾರು, ಚಾರ್ವಾಕ, ಕಾಮಣ, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗಿದೆ. ಬರೆಪ್ಪಾಡಿ ಸಮೀಪದ ನೂಜಲತ್ತಡ್ಕ ಎಂಬಲ್ಲಿಂದ ಕಾಣಿಯೂರು ಪೇಟೆ ಸಮೀಪದ ಕೂಡು ರಸ್ತೆ ತನಕ ಸಂಪರ್ಕ ದಲ್ಲಿರುವ ಈ ರಸ್ತೆಯಲ್ಲಿ ನಿತ್ಯ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಆಟೋ ಸಹಿತ ನೂರಾರು ವಾಹನಗಳು ಸಂಚರಿಸುತ್ತವೆ. ಕಾರಣಿಕ ದೈವಸ್ಥಾನ ದೈಪಿಲ ಕ್ಷೇತ್ರ ಸಹಿತ ಹಲವು ಪೂಜಾ ಮಂದಿರಗಳು, ಮಸೀದಿಗಳು, ಅಂಗನವಾಡಿ, ಶಾಲಾ ಸಂಪರ್ಕಕ್ಕೆ ಈ ರಸ್ತೆ ಅಗತ್ಯವಾಗಿದೆ.

ಸೂಚನ ಫ‌ಲಕವಿಲ್ಲ
ಸಾವಿರಾರು ಮಂದಿ ಪ್ರಯಾಣಿಸುವ ಈ ರಸ್ತೆಯ ಅಪಾಯಕಾರಿ ಸ್ಥಳದಲ್ಲಿ ಸವಾರರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸದ್ಯ ಈ ಅಪಾಯಕಾರಿ ಸ್ಥಳದಲ್ಲಿ ಯಾವುದೇ ಮುನ್ಸೂಚನೆ ಇಲ್ಲದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ. ಇಲ್ಲಿನ ತಿರುವನ್ನು ತೆರವುಗೊಳಿಸಿ ನೇರ ರಸ್ತೆ ಮಾಡಬೇಕು. ರಸ್ತೆಯನ್ನು ವಿಸ್ತರಿಸಿದರೆ ಸಮಸ್ಯೆ ಪರಿಹಾರವಾದೀತು ಎಂಬುದು ಸಾರ್ವಜನಿಕರ ಅಭಿಪ್ರಾಯ.

Advertisement

ಎಚ್ಚೆತ್ತುಕೊಳ್ಳಿ
ಮಾಣಿ – ಮೈಸೂರು ಹೆದ್ದಾರಿಯ ಪುತ್ತೂರು ಸಮೀಪದ ಮಡ್ಯಂಗಳದಲ್ಲಿ ರಸ್ತೆ ಬದಿಯ ಅಪಾಯಕಾರಿ ಕೆರೆಯನ್ನು ಮುಚ್ಚಿಸುವಂತೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ನಾಲ್ಕು ಜೀವಗಳು ಬಲಿಯಾದವು. ಆ ಬಳಿಕ ಎಚ್ಚೆತ್ತುಕೊಂಡ ಇಲಾಖೆ ಕ್ರಮ ಕೈಗೊಂಡಿತ್ತಾದರೂ ಇದಕ್ಕೆ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡರೆ ಮಾತ್ರ ಸಂಭವಿಸುವ ದುರಂತ ತಪ್ಪಿಸಬಹುದು. ತತ್‌ಕ್ಷಣ ಕ್ರಮ ಕೈಗೊಳ್ಳಿ ಎನ್ನುವುದು ಸ್ಥಳೀಯರ ಆಗ್ರಹ.

ಅಪಾಯಕಾರಿ ಸ್ಥಳವೆಂದು ಗುರುತಿಸಿ
ರಸ್ತೆ ಬದಿಯಲ್ಲಿನ ಕೆರೆ, ತೋಡು ಮುಂತಾದ ನೀರಿನ ಮೂಲಗಳಿಂದ ಹಲವಾರು ದುರ್ಘ‌ಟನೆಗಳು ನಡೆಯುತ್ತಿವೆ. ಎಡಮಂಗಲದಿಂದ ಆರಂಭಗೊಂಡು ಕೊಪ್ಪ ಸಮೀಪದ ತಿರ್ತಗೇರಿ ಎಂಬಲ್ಲಿ ಕುಮಾರಧಾರಾ ನದಿಯನ್ನು ಸಂಧಿಸುವ ತೋಡು ಕಾಪೆಜಾಲು ಎಂಬಲ್ಲಿ ರಸ್ತೆ ಬದಿಯಲ್ಲೇ ಹರಿಯುತ್ತದೆ. ಈ ಬೃಹದಾಕಾರದ ತೋಡಿರುವ ಜಾಗವನ್ನು ಅಪಾಯಕಾರಿ ಸ್ಥಳವೆಂದು ಗುರುತಿಸಿ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾದ ಮೋಹನಚಂದ್ರ ಖಂಡಿಗ ತಿಳಿಸಿದ್ದಾರೆ.

ಪ್ರಸ್ತಾವನೆ ಸಲ್ಲಿಸಲಾಗಿದೆ
9.5 ಕಿಮೀ. ಉದ್ದದ ಬರೆಪ್ಪಾಡಿ- ಕಾಣಿಯೂರು ಲೋಕೋಪಯೋಗಿ ರಸ್ತೆ ಮೇಲ್ದರ್ಜೆಗೆ 15 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸರಕಾರಕ್ಕೆ ಸಲ್ಲಿಸಲಾಗಿದೆ. ವಿಸ್ತರಣೆ, ಮೋರಿ ಅÙ ವಡಿಕೆ, ತಿರುವು ನೇರ ಮಾಡುವುದು, ಧರೆ ತೆರವು, ಕುಮಾರ ಧಾರಾ ನದಿ, ತೋಡಿನ ನೀರು ಉಕ್ಕಿ ಹರಿದಾಗ ರಸ್ತೆ ಆವರಿಸುವ ಜಾಗ ಎತ್ತರಿಸುವ ಪ್ರಕ್ರಿಯೆ, ಭೂ ಸ್ವಾಧೀನ ಇದರಲ್ಲಿ ಸೇರಿವೆ. ಮುಂಗ್ಲಿ ಮಜಲಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಅರ್ಧ ಕಿ.ಮೀ. ಅಭಿವೃದ್ಧಿ ಆಗಿದೆ.
– ಬಿ. ರಾಜಾರಾಮ, ಸಹಾಯಕ ಅಭಿಯಂತರ, ಲೋಕೋಪಯೋಗಿ ಇಲಾಖೆ

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next