Advertisement

ಕರ್ನಾಟಕದ ದಂಗಲ್‌: ಹಳಿಯಾಳ ಎಂಬ ಹುರಿಯಾಳುಗಳ ಅಖಾಡ

01:11 PM Jan 28, 2017 | |

ಹಳಿಯಾಳದಲ್ಲಿ ಕುಸ್ತಿಗೆ ಹೆಸರು ವಾಸಿ. ಜಿಲ್ಲೆ ಅನೇಕ ಕುಸ್ತಿ ಪಟುಗಳನ್ನು ತಯಾರು ಮಾಡುವ ಕಾರ್ಖಾನೆ ಅಂದರೆ ಅದು ಹಳಿಯಾಳವೇ. ಕೃಷಿಯ ಜೊತೆ ಕುಸ್ತಿಯನ್ನು ಇಟ್ಟುಕೊಂಡಿರುವ ಇಲ್ಲಿರುವ ಹಳ್ಳಿಗಳೇ ಒಂದು ರೀತಿ ಕುಸ್ತಿಯ ದಂಗಲ್‌ ಇದ್ದಂತೆ. ಇವೆಲ್ಲ ಹೇಗೆ ಸಾಧ್ಯ? ಇಲ್ಲಿದೆ ಮಾಹಿತಿ.

Advertisement

ಅದು ಅಂತಿಮ ಪಂದ್ಯಾವಳಿ.  ಸ್ಪರ್ಧಿಗಳಿಬ್ಬರ ಕೈ ಕುಲುಕಿಸಿ, ನಿರ್ಣಾಯಕ ಪೀಪಿ ಊದುತ್ತಿದ್ದಂತೆಯೇ ಆ ಹೆಣ್ಮಕ್ಕಳು ಒಬ್ಬರ ಮೇಲೊಬ್ಬರು ಮದಗಜಗಳಂತೆಯೇ ಮುಗಿಬಿದ್ದರು.  ಆಕೆಯ ಪಟ್ಟಿಗೆ ಈಕೆಯ ಪ್ರತ್ಯುತ್ತರ , ಏಟಿಗೆ ಎದಿರೇಟು ಈ ಕಾಳಗ ಮುಂದುವರೆಯುತ್ತಿದ್ದಂತೆಯೇ ಸುತ್ತ ನೆರೆದವರ ಹರ್ಷೋದ್ಗಾರ ಮುಗಿಲು ಮುಟ್ಟಿರುತ್ತದೆ. ಕಿಕ್ಕಿರಿದು ತುಂಬಿರುವ ಇಡೀ ಕ್ರೀಡಾಂಗಣದಲ್ಲಿ ವಿದ್ಯುತ್‌ ಸಂಚಾರ.  ಒಂದೊಂದು ಪಟ್ಟಿಗೂ ಮುಗಿಲು ಮುಟ್ಟುವ ಚೀರಾಟ, ಆರ್ಭಟ.

ಇದು ಮೊನ್ನೆಯಷ್ಟೇ ಬಿಡುಗಡೆಯಾದ ದಂಗಲ್‌ ಚಿತ್ರದ ಕ್ಲೈಮ್ಯಾಕ್ಸ್‌ ಅಂದುಕೊಂಡ್ರಾ? ಇಲ್ಲ. ಹಳಿಯಾಳದ ಕುಸ್ತಿ ಅಖಾಡದಲ್ಲಿ ಪ್ರತಿವರ್ಷ ಕಂಡುಬರೋ ದೃಶ್ಯಗಳು ಇವು.

ಧಾರವಾಡ ಜಿಲ್ಲೆಗೆ ಹೊಂದಿಕೊಂಡಂತೆಯೇ ಇರುವ ಉತ್ತರ ಕನ್ನಡ ಜಿಲ್ಲೆಯ ಅರೆಬಯಲು ಸೀಮೆ ಭಾಗವಾಗಿರುವ ಹಳಿಯಾಳ ತಾಲೂಕಿನ ಸುಮಾರು ಒಂದು ಲಕ್ಷಜನಸಂಖ್ಯೆಯಲ್ಲಿ ಮುಕ್ಕಾಲುಪಾಲು ಜನ ವಾಸಿಸುವುದು ಹಳ್ಳಿಗಳಲ್ಲೇ. ಕೃಷಿ ಪ್ರಧಾನ ಈ ಹಳ್ಳಿಗಳಲ್ಲಿ ಮುಖ್ಯವಾಗಿ ಬೆಳೆಯುವುದು ಕಬ್ಬು , ರಾಗಿ ಮತ್ತು ಭತ್ತ.  ಅಪ್ಪಟ ಬಯಲುಸೀಮೆಯ ಪ್ರದೇಶದಂತೇ, ಸ್ವಾಭಾವಿಕವಾಗಿಯೇ ಗಟ್ಟುಮುಟ್ಟಾಗಿ ಶ್ರಮಿಕರಾಗಿರುವ ಇಲ್ಲಿನ ಜನರಿಗೆ ಮೊದಲಿನಿಂದಲೂ ಕುಸ್ತಿಯಂತಹ ಗಂಡುಮೆಟ್ಟಿನ ಕ್ರೀಡೆಗಳಲ್ಲಿ ಅತೀವ ಆಸಕ್ತಿ.  ಹೀಗಾಗಿ ಇಲ್ಲಿನ ಪ್ರತೀ  ಹಳ್ಳಿಗಳಲ್ಲೂ ಗರಡಿಮನೆಗಳಿವೆ.  ಈ ಜನರ ಕುಸ್ತಿಹುಚ್ಚು ನಿನ್ನೆ ಮೊನ್ನೆಯದಲ್ಲ, ಶತಮಾನಗಳಿಂದಲೇ ಇದು ಬೆಳೆದು ಬಂದಿದೆ. ಗ್ರಾಮದೇವರ ಜಾತ್ರೆ ಇರಲಿ, ಸಂಕ್ರಾಂತಿ ದೀಪಾವಳಿಯಂತಹ ಹಬ್ಬಗಳಿರಲಿ ಕುಸ್ತಿಗಿಲ್ಲಿ ಅಗ್ರತಾಂಬೂಲ. ಗ್ರಾಮದ ಜನರು ಚಂದಾ ಎತ್ತಿ ಕುಸ್ತಿಪಂದ್ಯಾವಳಿಗಳನ್ನು ಆಯೋಜಿಸುವುದು ಪೈಲ್ವಾನರನ್ನು ಕರೆಸಿ ಸನ್ಮಾನಿಸುವುದು ಇದೊಂದು ಸಂಸ್ಕೃತಿಯಾಗಿ ಇಲ್ಲಿ ಬೆಳೆದು ಬಂದಿದೆ.

ಇಲ್ಲಿನ ಹಳ್ಳಿಗಳ ಅವಿಭಜಿತ ಕುಟುಂಬಗಳಲ್ಲಿ ಪ್ರತಿಯೊಂದು ಮನೆಯಿಂದ ಒಬ್ಬರಾದರೂ ಕುಸ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದರು.ಈ ಭಾಗದಲ್ಲಿ ಗರಡಿಮನೆಗಳಿಲ್ಲದ ಹಳ್ಳಿ ಹೋಬಳಿಗಳಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಶಹರೀಕರಣದ ಬಿಸಿ ಕುಸ್ತಿಗೂ ತಟ್ಟಿದೆ. ಯುವಜನಾಂಗ ನಗರಮುಖೀಯಾಗಿರುವುದರಿಂದ ಈ ಗರಡಿಮನೆಗಳು ಒಂದೊಂದಾಗಿ ಮುಚ್ಚುತ್ತಿವೆ   ಎನ್ನುತ್ತಾರೆ ಹಳಿಯಾಳದ ಮಹಾಂತೇಶ.

Advertisement

ಕುಸ್ತಿಯ ಇಷ್ಟೊಂದು ಅತೀವ ಆಸಕ್ತಿ ಇರುವ ಈ ನೆಲದಿಂದ ಸ್ವಾಭಾವಿಕವಾಗಿಯೇ ಬಹಳಷ್ಟು ಪಟುಗಳು ಈ ಕ್ರೀಡೆಯಲ್ಲಿ ತಮ್ಮ ಹಿರಿಮೆಯನ್ನು ನೀಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ,  ನಿಗ್ರೋ ಬ್ರದರ್ ಎಂದೇ ಖ್ಯಾತಿಯಾಗಿದ್ದ ಆಗ್ನೇಲ ಮತ್ತು ಜುಜೇ ಸಹೋದರರು. ರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಸದ್ದುಮಾಡಿದ್ದ ಹನುಮಂತ ಘಾಟೆY , ಬಾಬು, ತೊರೆಲàಕರಗೆ ಪಟ್ಟಿಬೆಳೆಯುತ್ತಾ ಹೋಗುತ್ತದೆ.  ಹಳಿಯಾಳವು ಕುಸ್ತಿಯ ಕಣಜ ಇಲ್ಲಿನ ಕುಸ್ತಿಪಟುಗಳ ಬಗ್ಗೆ ಹೇಳುವುದಾದರೆ ಒಂದು ಪುಸ್ತಕವನ್ನೇ ಬರೆಯಬಹುದು. ಹೊಸ ಹೊಸ ಪ್ರತಿಭೆಗಳು ಸಹ ಅಷ್ಟೇ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ  ಎನ್ನುತ್ತಾರೆ ಇಲ್ಲಿನ ಕುಸ್ತಿ ತರಬೇತುದಾರ ಮಂಜುನಾಥ.

ರಾಜ್ಯ ಸರ್ಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2007 ರಲ್ಲಿ ಕಾರವಾರದಲ್ಲಿ ಸ್ಥಾಪಿಸಿದ ಕ್ರೀಡಾ ಹಾಸ್ಟೇಲನ್ನು 2011 ರಲ್ಲಿ ಹಳಿಯಾಳಕ್ಕೆ ಸ್ಥಳಾಂತರಿಸಿತು ಅಂದರೆ ಕುಸ್ತಿಯ ಮೆಹನತ್ತು ಏನು ಅಂತ ತಿಳಿದಿಕೊಳ್ಳಿ.   ಅಂದಿನಿಂದ ಈ ಕ್ರೀಡಾ ಹಾಸ್ಟೆಲಿನಲ್ಲಿ ಕುಸ್ತಿಯ ತರಬೇತಿ ಪಡೆದ ಅನೇಕ ಯುವಕ ಯುವತಿಯರು ರಾಜ್ಯ , ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.ಪ್ರಸಕ್ತ ಎಂಟು ಯುವತಿಯರೂ ಸೇರಿದಂತೆ ಇಪ್ಪತ್ತೆ„ದು ಯುವ ಪೈಲ್ವಾನರುಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಹತ್ತನೆಯ ತರಗತಿಯವರೆಗೆ ಇಲ್ಲಿ ಅಭ್ಯಸಿಸಲು ಅವಕಾಶವಿದ್ದು ದಾವಣಗೆರೆ ಅಥವಾ ಬೆಳಗಾವಿಯ ಕ್ರೀಡಾ ಹಾಸ್ಟೇಲನಲ್ಲಿ ಅವರು ತಮ್ಮ ಶಿಕ್ಷಣವನ್ನು ಮುಂದುವರೆಸಬಹುದು. ಇಲ್ಲಿ ತರಬೇತಿ ಪಡೆದ ಅನೇಕ ಪಟುಗಳು ವಿವಿಧ ಇಲಾಖೆಗಳಲ್ಲಿ ಕ್ರೀಡಾ ಮೀಸಲಿನಡಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲೇ ಅಭ್ಯಸಿಸಿದ ರಾಷ್ಟ್ರೀಯ ಚಾಂಪಿಯನ್‌ ತುಕಾರಾಂ ಗೌಡ ಮೂಡಬಿದಿರೆಯ ಆಳ್ವಾಸ ಕಾಲೇಜಿನಲ್ಲಿ ಕುಸ್ತಿಯ ತರಬೇತುದಾರ.  ಹಳಿಯಾಳದ ಕ್ರೀಡಾ ವಸತಿ ಹಾಸ್ಟೇಲಗೆ ಹೊಸತೊಂದು ಕಟ್ಟಡ ಮಂಜೂರಿಯಾಗಿ ನಿರ್ಮಾಣ ಹಂತದಲ್ಲಿದ್ದು ಮುಂದಿನ ಜೂನ್‌ನಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆ ಇದೆ.  ಈ ಹೊಸ ಕಟ್ಟಡದಿಂದ ಹೆಚ್ಚಿನ ಸವಲತ್ತುಗಳು ಉಪಲಬ್ಧವಾಗಲಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಷ್ಟೇ ಅಲ್ಲದೇ ಸ್ಥಳಿಯ 22 ಮಾಜಿ ಪೈಲ್ವಾನರನ್ನು ಸರ್ಕಾರವು ಗುರುತಿಸಿ ಮಾಶಾಸನ ನೀಡುತ್ತಿದೆ. 

ಇನ್ನು ಕುಸ್ತಿಯ ಬಗೆಗಿನ ಇಲ್ಲಿವರ ಅತೀವ ಪ್ರೀತಿಯು ಆಸಕ್ತರನ್ನೆಲ್ಲ ಒಗ್ಗೂಡಿಸಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳನ್ನು ನಡೆಸುವಂತೆ ಪ್ರೇರೇಪಿಸಿದೆ. 2002ರಿಂದ ಸ್ಥಳಿಯರೇ ಚಂದಾ ಎತ್ತಿ ಸಂಘ ಸಂಸ್ಥೆಗಳೊಡನೆ ಕೈಗೂಡಿಸಿ ಆರಂಭಿಸಿದ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕುಸ್ತಿಪಂದ್ಯಾವಳಿಗೆ ನಡೆಯುತ್ತವೆ. ರಾಜ್ಯ ಹೊರರಾಜ್ಯದ ಸುಮಾರು ಮುನ್ನೂರು ಕುಸ್ತಿಪಟುಗಳು ಭಾಗವಸಿ ಮೂರು ದಿನಗಳ ಕಾಲ ಇಲ್ಲಿ ನಡೆಯುವ ಈ ರ್ವಾಕ ಪಂದ್ಯಾವಳಿಗಳು ಒಂದು ರೀತಿಯಲ್ಲಿ ಕುಸ್ತಿಯ ಐಪಿಎಲ್‌ ಅಂತಲೇ ಹೇಳಬೇಕು. ಕಿಕ್ಕಿರಿದ ಮೈದಾನದಲ್ಲಿ ಭಾರಿ ಬಹುಮಾನಗಳೊಂದಿಗೆ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದೇ ಒಂದು ಅನನ್ಯ ಅನುಭವ ಎನ್ನುತ್ತಾರೆ ಸ್ಪರ್ಧಾಳುಗಳು. 

2016 ರ ಪಂದ್ಯಾವಳಿಯ ಬಹುಮಾನಗಳಲ್ಲಿ ಹೆಚ್ಚಿನ ಪಾಲು ಪಡೆದ ಆಳ್ವಾಸ ಮೂಡುಬಿದಿರೆ ತಂಡದ ತರಬೇತುದಾರ ತುಕಾರಾಮ ಗೌಡ ಹೇಳುವಂತೆ  “ನಮ್ಮ ಅಪ್ಪಟ ದೇಶಿಯ ಕ್ರೀಡೆಗಳು ಉಳಿಯಬೇಕಾದರೆ ಇಂತಹ ಪೋ› ಹೆಚ್ಚು ಹೆಚ್ಚು ಬೇಕು. ಕುಸ್ತಿ ಅದರಲ್ಲೂ ವಿಶೇಷವಾಗಿ ಮಹಿಳೆಯರ ವಿಭಾಗದಲ್ಲಿ ಪಂಜಾಬ್‌ , ದೆಹಲಿ ಮತ್ತು ಹರಿಯಾಣದವರ ಪ್ರಾಬಲ್ಯವಿದೆ. ದಕ್ಷಿಣದವರು ಭಾಗವಹಿಸುವುದೂ ಕಡಿಮೆ.  ಈ ರೀತಿಯ ಪ್ರೋತ್ಸಾಹ ದೊರಕಿದಲ್ಲಿ ನಾವೂ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಬಹುದು’  ಅಂತಾರೆ.   ಹಳಿಯಾಳದ ಮಾಜಿ ರಾಷ್ಟ್ರೀಯ ಕುಸ್ತಿಪಟು ಸೋಮನಿಂಗ ಗಂಗಾರಾಂ ಕದಂ  ಹೇಳುವ ಪ್ರಕಾರ- ಕುಸ್ತಿ ಅರೆಕಾಲಿಕ ಕೆಲಸವಲ್ಲ .ಅದರ ಹಿಂದೆ ಸತತ ಕಠಿಣ ಪರಿಶ್ರಮವಿದೆ. ಒಬ್ಬ ಕುಸ್ತಿಪಟು ತನ್ನ ಜೀವನವನ್ನೇ ಕ್ರೀಡೆಗೋಸ್ಕರ ಮುಡಿಪಾಗಿಡುತ್ತಾರೆ. ನಿವೃತ್ತಿಯ ನಂತರ ಕುಸ್ತಿಪಟುಗಳಿಗೆ ಸರ್ಕಾರ ವೈದ್ಯಕೀಯ ಸೇರಿದಂತೆ ಉಳಿದ ಸೌಲಭ್ಯಗಳನ್ನು ನೀಡಬೇಕು. ಹಳಿಯಾಳದ ಹಂಪಿಹೊಳಿ ಗ್ರಾಮದ ಸೋಮನಿಂಗ ಅವರು 1993ರಲ್ಲಿ ಬಿಹಾರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರು.

ಸಿಂಥೆಟಿಕ್‌ ಮ್ಯಾಟಿಂಗ್‌ ಮತ್ತು ಮಣ್ಣು  ಹೀಗೆ ಎರಡು ವಿಭಾಗಗಳಲ್ಲಿ ನಡೆಯುವ ಈ ಕುಸ್ತಿಯಲ್ಲಿ ಮಹಿಳೆಯರ ಪಂದ್ಯಾವಳಿಗಳು ಇನ್ನೊಂದು ಪ್ರಮುಖ ಆಕರ್ಷಣೆ. ತಾವು ಯಾವ ರೀತಿಯಲ್ಲೂ ಪುರುಷರಿಗೆ ಕಮ್ಮಿ ಇಲ್ಲ ಎಂಬಂತೇ ಕಾದಾಡುವ ಮಹಿಳಾಮಣಿಗಳು ಈ ಪಂದ್ಯಾವಳಿಯ ಯಶಸ್ಸಿನಲ್ಲಿ ಸಮಪಾಲೀನರು. 

ಹೌದು .. ಮಹಿಳಾ ಕುಸ್ತಿಪಟುಗಳಿಬ್ಬರ ಕಥೆಯಾಧಾರಿತ ಹಿಂದಿ ಚಿತ್ರ ದಂಗಲ್‌ ಬಾಕ್ಸಾಫಿಸಿನಲ್ಲಿ ಕೊಳ್ಳೆಹೊಡೆದು ಕುಸ್ತಿಯಂತಹ ಅಪ್ಪಟ ದೇಸಿಯ ಕ್ರೀಡೆಗೆ ನೀಡಬೇಕಾಗಿರುವ ಪ್ರೋತ್ಸಾಹದ ಬಗೆಗಿನ ಚರ್ಚೆಗೆ ಮರುಹುಟ್ಟು ನೀಡಿದೆ. ಹವಾನಿಯಂತ್ರಿತ ಚಿತ್ರಮಂದಿರದಲ್ಲಿ ಕುಳಿತು ಜನರು ರಾಷ್ಟ್ರೀಯ ಕ್ರೀಡಾನೀತಿಯ ಬಗ್ಗೆ ಚರ್ಚಿಸತೊಡಗಿದ್ದಾರೆ.ಅದರೆ ಇವಾವುದರ ಬಗ್ಗೆ ಪರಿವೆಯೇ ಇಲ್ಲದೆ ಇನ್ನೊಂದೆಡೆ ಈ ಅಪ್ಪಟ ಹಳ್ಳಿಗರು ತಮ್ಮ ಕೈಂಕರ್ಯವೆಂಬಂತೆಯೇ ಕ್ರೀಡೆಗೆ ನೀರೆರೆಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 ಕೃಷಿ, ಖುಷಿ ಮತ್ತು ಕುಸ್ತಿ
ಮನೆಯಲ್ಲೊಬ್ಬ ಪೈಲ್ವಾನನ್ನು ಬೆಳೆಸುವುದು ಈ ಹಿರಿಕರಿಗೊಂದು ಹೆಮ್ಮೆಯ ವಿಷಯವೇ. ಹೊಲದಲ್ಲಿ ಮೈಬಗ್ಗಿಸಿ ದುಡಿಯುವ ಕುಟುಂಬದವರು ಬಿಡುವು ಮಾಡಿಕೊಂಡು ಈ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದರು. ಕೃಷಿಕರಾಗಿದ್ದು ಜೊತೆಗೆ ಹೈನೋದ್ಯಮ ಇಲ್ಲಿನವರ ಉಪಕಾಯಕವೂ ಆಗಿದ್ದುದರಿಂದ ಈ ಪೈಲ್ವಾನರ ಊಟೋಪಚಾರಕ್ಕೆ ತೊಂದರೆಯೇನೂ ಇರಲಿಲ್ಲ. ಆ ಕಾಲದಲ್ಲಿ ಇಲ್ಲಿನ ಮಂಗಳವಾಡ, ಯಡುಗ, ದುಸಗಿ, ಮುತ್ತನಮರಿ , ವಾಡಾ, ಗರಡೊಳ್ಳಿ ,ಅರ‌್ಲವಾಡಾ , ಹುಣಸ್ವಾಡಾ ಹೀಗೆ ಒಂದೊಂದೂ ಹಳ್ಳಿಗಳು ಒಬ್ಬರನ್ನೊಬ್ಬರನ್ನು ಮೀರಿಸುವಂಥ ಹೊಸ ಪೈಲ್ವಾನರನ್ನು ಹೊರಹೊಮ್ಮಿಸುತ್ತಿದ್ದವು.ಆದರೆ ಇಲ್ಲಿನವರ ಉಮೇದಿಗೆ ತಕ್ಕಂತೆ ಮೂಲಭೂತ ಸೌಕರ್ಯಗಳು ಅಭಿವೃದ್ಧಿಗೊಳ್ಳಲಿಲ್ಲ. ಮಣ್ಣಿನ ಕುಸ್ತಿಯಿಂದ ಆವಿಷ್ಕಾರಗೊಂಡು ಮ್ಯಾಟಿಂಗ ಕುಸ್ತಿಬಂದು ಪಾಯಿಂಟ್‌ ಆಟ ಆರಂಭವಾಗಿದ್ದುದು ಸ್ಥಳೀಯ ಪ್ರತಿಭೆಗಳಿಗೆ ತರಬೇತಿಯ ಕೊರತೆಯಿಂದ ಸೂಕ್ತ ತಾಂತ್ರಿಕತೆ , ಕೌಶಲ್ಯಗಳನ್ನು 
ಅರ್ಥೈಸಿಕೊಳ್ಳಲಾಗದೇ ಹಿನ್ನಡೆಗೆ ಕಾರಣವಾಯಿತು. ಈ ನಿಟ್ಟಿನಲ್ಲಿ ಇಲ್ಲಿ ಕ್ರೀಡಾ ಹಾಸ್ಟೇಲ್‌ ಸ್ಥಾಪನೆಗೊಂಡಿದ್ದು ಒಂದು ಉತ್ತಮ ಬೆಳವಣಿಗೆ. ಇವೆಲ್ಲರ ಜೊತೆಗೆ ಈ ಹಾಸ್ಟಲ್‌ನ ಇನ್ನೊಂದು ಅತಿಮುಖ್ಯ ಕೊಡುಗೆ ಎಂದರೆ ಮಹಿಳೆಯರ ಕುಸ್ತಿಗೆ ಸಿಕ್ಕ ಪ್ರೋತ್ಸಾಹ.
 ಕಳೆದ ಹತ್ತು ವರ್ಷಗಳಿಂದ ಮಹಿಳೆಯರೂ ಈ ಕುಸ್ತಿತರಬೇತಿ ಕೇಂದ್ರದಲ್ಲಿ ಹೆಚ್ಚುಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಳಿಯಾಳದ ಹೆಸರಾಂತ ಕುಸ್ತಿಪಟುಗಳ ಪಟ್ಟಿಯಲ್ಲಿ ಈ ಮಹಿಳಾಮಣಿಗಳ ಹೆಸರುಗಳೂ ನಿಧಾನವಾಗಿ ಸೇರಿಕೊಳ್ಳುತ್ತಿದೆ. ಕುಸ್ತಿಯೆಂದರೆ ಪುರುಷರ ಅಖಾಡವೆಂಬ ಮನೋಸ್ಥಿತಿ ಬದಲಾಗುತ್ತಿದೆ.     

 ಸುನೀಲ ಬಾರಕೂರ
ಚಿತ್ರಗಳು-ಆರ್‌. ಬಯ್ಯಣ್ಣ

Advertisement

Udayavani is now on Telegram. Click here to join our channel and stay updated with the latest news.

Next