Advertisement

ನೆರೆಪೀಡಿತ 98 ಗ್ರಾಮಗಳಲ್ಲಿಲ್ಲ ಹಾನಿ ಸಮೀಕ್ಷೆ

10:26 AM Sep 18, 2019 | Suhan S |

ಬಾಗಲಕೋಟೆ: ಮೂರು ನದಿಗಳ ಪ್ರವಾಹದಿಂದ ಬಾಧಿತಗೊಂಡ 195 ಗ್ರಾಮಗಳ ಪೈಕಿ, 98 ಗ್ರಾಮಗಳಲ್ಲಿ ಯಾವುದೇ ಹಾನಿ ಕುರಿತು ಸಮೀಕ್ಷೆ ನಡೆಸಿಲ್ಲ. ಉಳಿದ 97 ಹಳ್ಳಿಗಳಲ್ಲಿ ಮಾತ್ರ ಹಾನಿಯ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ತಿಳಿಸಿದರು.

Advertisement

ನವನಗರದ ಯುಕೆಪಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಹ ಪರಿಹಾರ ಕಾರ್ಯಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಂದ ಜಿಲ್ಲೆಯ 198 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದವು. ಇದರಲ್ಲಿ ಯುಕೆಪಿಯಡಿ 98 ಗ್ರಾಮಗಳು ಈಗಾಗಲೇ ವಿವಿಧ ಯೋಜನೆಯಡಿ ಪ್ರಯೋಜನ ಪಡೆದ ಗ್ರಾಮಗಳಾಗಿವೆ. ಹೀಗಾಗಿ 98 ಹಳ್ಳಿಗಳಲ್ಲಿ ಮನೆ ಹಾನಿ ಸಮೀಕ್ಷೆ ಮಾಡುತ್ತಿಲ್ಲ. ಈ 98 ಗ್ರಾಮಗಳ ವಿವಿಧ ಯೋಜನೆಗಳಲ್ಲಿ ಪ್ರಯೋಜನ ಪಡೆದ ಕುಟುಂಬ ಹೊರತುಪಡಿಸಿ ಉಳಿದ ಮನೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 195 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, 43136 ಕುಟುಂಬ ಮತ್ತು 69,977 ಜಾನುವಾರು ಸ್ಥಳಾಂತರಿಸಲಾಗಿದೆ. ಪ್ರಸ್ತುತ ಈಗ 7 ಪರಿಹಾರ ಕೇಂದ್ರಗಳು ಚಾಲ್ತಿಯಲ್ಲಿದ್ದು, 818 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಗುರುತಿಸಲಾದ ಸಂತ್ರಸ್ತರ ಕುಟುಂಬಗಳ 45,997 ಇದ್ದು, ಈ ಪೈಕಿ ಎಲ್ಲ ಕುಟುಂಬಗಳಿಗೆ 10 ಸಾವಿರ ರೂ.ಗಳ ಪರಿಹಾರಧನ ಆರ್‌ಟಿಜಿಎಸ್‌ ಮೂಲಕ ಜಮಾ ಮಾಡಲಾಗಿದೆ. 47,008 ಕುಟುಂಬಗಳಿಗೆ ಆಹಾರ ಕಿಟ್ ಸಹ ವಿತರಿಸಲಾಗಿದೆ ಎಂದು ವಿವರಿಸಿದರು.

ಪುನಃ ಪರಿಹಾರ ಕೊಡಲ್ಲ: ಕಳೆದ 2009ರಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ತುತ್ತಾಗಿ ಪರಿಹಾರ ಪಡೆದು ಈ ಬಾರಿಯ ಪ್ರವಾಹದಲ್ಲಿ ಹಾನಿ ಅನುಭವಿಸಿದಲ್ಲಿ ಅಂತವರಿಗೆ ಪುನಃ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ ನಿವೇಶನಗಳ ಹಕ್ಕು ಪತ್ರ ನೀಡದೇ ಇರುವವರಿಗೆ ಮಾತ್ರ ತಾತ್ಕಾಲಿಕ ಶೆಡ್‌ ನಿರ್ಮಿಸಿ ಕೊಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸುವುದಾಗಿ ಶಿವಯೋಗಿ ಕಳಸದ ತಿಳಿಸಿದರು.

Advertisement

ಜವಾಬ್ದಾರಿಯಿಂದ ಕೆಲಸ ಮಾಡಿ: ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾತನಾಡಿ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಪರಿಹಾರ ಒದಗಿಸಲು ಸರಕಾರ ವಿಶೇಷ ಗಮನ ನೀಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಪ್ರವಾಹದಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಒಳಗಾಗಿದ್ದು, ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ. ಪರಿಹಾರ ಕೇಂದ್ರಗಳಲ್ಲಿ ಕಾಲಕಾಲಕ್ಕೆ ಭೇಟಿ ನೀಡಿ ಅವರಿಗೆ ಊಟ, ಜಾನುವಾರುಗಳಿಗೆ ಸರಿಯಾಗಿ ಮೇವು ನೀಡುತ್ತಿರುವುದು ಹಾಗೂ ಆರೋಗ್ಯ ಸೌಲಭ್ಯದ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು.

ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಪ್ರವಾಹದಿಂದ ಮನೆ, ಆಸ್ತಿ-ಪಾಸ್ತಿ ಜಾನುವಾರುಗಳು ಹಾಗೂ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆ ಹಾಗೂ ರಸ್ತೆ ಹಾನಿಗೊಳಗಾಗಿದ್ದು, ಸಂತ್ರಸ್ತರಿಗೆ ಈವರೆಗೆ ನೀಡಲಾದ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಸರಕಾರ ಪರಿಹಾರ ಒದಗಿಸುವ ಕಾರ್ಯಕ್ಕೆ ವಿಶೇಷ ಗಮನ ಹರಿಸಿದ್ದು, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ತಿಳಿಸಿದರು.

ಜಿಪಂ ಸಿಇಒ ಮೊಹ್ಮದ ಇಕ್ರಮಮುಲ್ಲಾ ಶರೀಫ್‌ ಅವರು, ಜಿಲ್ಲಾ ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ಹಾನಿಗೊಳಗಾದ ಶಾಲಾ ಕಟ್ಟಡ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂಥೆ ಇತರೆ ಹಾನಿಯ ಮಾಹಿತಿ ನೀಡಿದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿಗಳಾದ ಗರಿಮಾ ಪವಾರ‌, ಡಾ|ಪ್ರಕಾಶ, ಯುಕೆಪಿಯ ಉಪಾ ಮಹಾ ವ್ಯವಸ್ಥಾಪಕ ಎಸ್‌ಎಂ. ಉಕ್ಕಲಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next