Advertisement

ದಲಾೖ ಲಾಮಾ ಆಯ್ಕೆ ಹಕ್ಕು ಅಮೆರಿಕದ ಮಹತ್ವದ ಹೆಜ್ಜೆ

12:01 AM Dec 29, 2020 | mahesh |

ತನಗೆ ಬೇಕಿರುವವರನ್ನು ನವ ದಲಾೖ ಲಾಮಾ ಆಗಿಸಬೇಕೆಂಬ ಚೀನದ ಪ್ರಯತ್ನಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಈಗ ಅಮೆರಿಕದ ಸೆನೆಟ್‌ ಹೊಸ ದಲಾೖ ಲಾಮಾರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಟಿಬೆಟಿಯನ್ನರ ಅಧಿಕಾರಕ್ಕೆ ಬೆಂಬಲ ನೀಡುವಂಥ ಬಿಲ್‌ ಪಾಸ್‌ ಮಾಡಿದೆ. ಅಮೆರಿಕನ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಸಹಿ ಬೀಳುತ್ತಿದ್ದಂತೆಯೇ, ಈ ಕಾನೂನು ಅಮೆರಿಕದ ನೀತಿಯ ಪ್ರಮುಖ ಭಾಗವಾಗಲಿದೆ. ಮುಂದಿನ ದಿನಗಳಲ್ಲಿ ಅನ್ಯ ದೇಶಗಳೂ ಇದೇ ರೀತಿ ಮಾಡಿದರೆ, ಬೌದ್ಧ ಧರ್ಮಗುರುಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿರುವ ಚೀನಕ್ಕೆ ಬಹಳ ತೊಂದರೆ ಉಂಟಾಗಲಿದೆ.

Advertisement

ಸಹಜವಾಗಿಯೇ, ಚೀನ ಈಗ ಅಮೆರಿಕದ ನಡೆಯನ್ನು ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಎಂದು ಕಟುವಾಗಿಯೇ ಟೀಕಿಸುತ್ತಿದೆ. ಆದರೆ ಜಗತ್ತಿನಾದ್ಯಂತ ಹರಡಿರುವ ಟಿಬೆಟ್‌ ಸಮುದಾಯ ಹಾಗೂ ಬೌದ್ಧ ಧರ್ಮೀಯರಿಗೆ ಅಮೆರಿಕದ ನಿರ್ಧಾರ ಬಹಳ ಬಲ ತುಂಬಿದೆ. ಹಿರಿಯ ದಲಾೖ ಲಾಮಾರಿಗೆ 85 ವರ್ಷಗಳು ತುಂಬುತ್ತಿರುವಂತೆಯೇ, ಮುಂದೆ ಅವರ ಜಾಗದಲ್ಲಿ ಯಾರು ಬರುತ್ತಾರೆ ಎನ್ನುವ ಕುತೂಹಲ ಜಗತ್ತಿಗೆ ಇದೆ. ಸಹಜವಾಗಿಯೇ, ಈ ಅಧಿಕಾರವಿರುವುದು ಟಿಬೆಟ್‌ನ ಬೌದ್ಧ ಧರ್ಮೀಯರಿಗೆ. ಆದರೆ ಟಿಬೆಟ್‌ ಅನ್ನು ಆಕ್ರಮಿಸಿರುವ ಚೀನ ಅಲ್ಲಿನ ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಲೇ ಬಂದಿದ್ದು, ದಲಾೖ ಲಾಮಾ ಪದವಿಗೆ ತನಗೆ ಬೇಕಿರುವವರನ್ನೇ ಹುಡುಕಾಡಲಾರಂಭಿಸಿತ್ತು.

ಚೀನ ದಲಾೖ ಲಾಮಾ ಸ್ಥಾನವನ್ನು ಕೇವಲ ರಾಜಕೀಯ ಆಯಾಮದಿಂದಷ್ಟೇ ನೋಡಲು ಪ್ರಯತ್ನಿಸುತ್ತಾ ಬಂದಿರುವುದೇ ಸಮಸ್ಯೆಗೆ ಕಾರಣ. ಟಿಬೆಟಿಯನ್‌ ಜನರಿಗೆ ಹಾಗೂ ಮುಖ್ಯವಾಗಿ ಬೌದ್ಧ ಧರ್ಮೀಯರಿಗೆ ಇದೊಂದು ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಸ್ಥಾನ. ದಲಾೖ ಲಾಮಾರ ರೂಪದಲ್ಲಿ ಬೋಧಿಸತ್ವನು ಕಾಣಿಸಿಕೊಳ್ಳುತ್ತಾನೆ ಎಂದು ಬೌದ್ಧ ಪರಂಪರೆಯು ಬಲವಾಗಿ ನಂಬುತ್ತದೆ.

ಹೀಗಿರುವಾಗ, ಜನರ ಧರ್ಮ, ಧಾರ್ಮಿಕ ನಂಬಿಕೆಗಳನ್ನೆಲ್ಲ ಕೊನೆಗೊಳಿಸಿ, ನಾಸ್ತಿಕತೆಯನ್ನೇ ಪಸರಿಸಲು ಪ್ರಯತ್ನಿಸುವ ಚೀನದ “ಕಮ್ಯುನಿಸ್ಟ್‌ ಸರಕಾರ’ ದಲಾೖ ಲಾಮಾರ ಸ್ಥಾನದ ಬಗ್ಗೆ ಅನಗತ್ಯ ಅತೀವ ಆಸಕ್ತಿ ತೋರಿಸುತ್ತಿರುವುದು ಅದರ ರಾಜಕೀಯ ಷಡ್ಯಂತ್ರದ ಭಾಗವೇ ಆಗಿದೆ ಎನ್ನುವುದನ್ನು ಸ್ಪಷ್ಟಗೊಳಿಸುತ್ತದೆ. ಇದು ಟಿಬೆಟ್‌ ಜನರ ನಂಬಿಕೆ ಹಾಗೂ ಸಂಸ್ಕೃತಿಯ ಮೇಲೆ ಚೀನ ನಡೆಸುತ್ತಿರುವ ದಾಳಿಯೂ ಹೌದು.

ದುರಂತವೆಂದರೆ, ಟಿಬೆಟ್‌ನ ವಿಚಾರದಲ್ಲಿ ಚೀನದ ದುರ್ನಡತೆಯನ್ನು ದಶಕಗಳಿಂದಲೂ ಜಾಗತಿಕ ಸಮುದಾಯ ಸುಮ್ಮನೇ ನೋಡುತ್ತಾ ಬಂದಿರುವುದು. ಆದಾಗ್ಯೂ ಭಾರತ ಈ ವಿಚಾರದಲ್ಲಿ ಕಾಲಕಾಲಕ್ಕೆ ಧ್ವನಿಯೆತ್ತುತ್ತಲೇ ಬಂದಿದೆ ಹಾಗೂ ಹಿರಿಯದಲಾೖಲಾಮಾರಿಗೆ ಆಶ್ರಯವನ್ನೂ ಕೊಟ್ಟಿದೆಯಾದರೂ, ಚೀನದ ವಿರುದ್ಧ ಹಾಗೂ ಟಿಬೆಟ್‌ನ ಪರವಾಗಿ ಎಲ್ಲ ರಾಷ್ಟ್ರಗಳೂ ಪ್ರಬಲ ಧ್ವನಿ ಎತ್ತಲೇ ಬೇಕಿದೆ. ಈ ಹಿನ್ನೆಲೆಯಲ್ಲಿಯೇ ಟ್ರಂಪ್‌ ಸರಕಾರ ಈಗ ಜಾರಿ ಮಾಡಿರುವ “ಟಿಬೆಟನ್‌ ಪಾಲಿಸಿ ಆ್ಯಂಡ್‌ ಸಪೋರ್ಟ್‌ ಆ್ಯಕ್ಟ್ 2020′ ನಿಜಕ್ಕೂ ಶ್ಲಾಘನೀಯವಾದದ್ದು.

Advertisement
Advertisement

Udayavani is now on Telegram. Click here to join our channel and stay updated with the latest news.

Next