Advertisement

ಯಾವುದೋ ದಾರಿ-ಎಲ್ಲಿಗೋ ಪಯಣ…?

11:26 AM May 12, 2020 | mahesh |

ಸಿರುಗುಪ್ಪ: ಊರಿಂದ ಊರಿಗೆ ಸಾಗುವ ಕುರಿಗಳು ಅದರ ಹಿಂದೆ ಹೋಗುವ ಅಲೆಮಾರಿಗಳು, ಜಮೀನಿನಲ್ಲಿ ಪುಟ್ಟದೊಂದು ಟೆಂಟ್‌, ರೈತರು ಕೊಡುವ ದವಸ ಧಾನ್ಯಗಳೇ ಇವರಿಗೆ ನಿತ್ಯದ
ಆಹಾರ. ಇನ್ನೂ ಹಬ್ಬ ಹರಿದಿನಗಳಲ್ಲಿ ಸ್ವಂತ ಊರಿಗೆ ಪಯಣ, ಇದು ಬೆಳಗಾವಿ ಕುರಿಗಾಹಿಗಳ ನಿತ್ಯದ ಬದುಕು.

Advertisement

ಇವರು ಬರಪೀಡಿತ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿಯವರಾಗಿದ್ದು, ರಾಜ್ಯಾದ್ಯಂತ ಸಂಚಾರ ಮಾಡುತ್ತಾರೆ. ಕುರಿಗಳೇ ಇವರಿಗೆ ಜೀವನಾಧಾರವಾಗಿದ್ದು, ಪ್ರತಿವರ್ಷದ
ಪ್ರಾರಂಭ ಹಾಗೂ ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ತಾಲೂಕಿನ ಕರೂರು, ದರೂರು, ಎಚ್‌.ಹೊಸಳ್ಳಿ, ಹಾಗಲೂರು, ಕೂರಿಗನೂರು, ಮಾಟಸೂಗೂರು, ಉತ್ತನೂರು, ಸಿರಿಗೇರಿ,
ಶಾನವಾಸಪುರ, ಭೈರಾಪುರ, ತೆಕ್ಕಲಕೋಟೆ, ಹಳೇಕೋಟೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರನ್ನೇ ನಂಬಿಕೊಂಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಕುರಿ ಮಂದೆಯ
ಕುರಿಗಾಹಿಗಳನ್ನು ರೈತರೇ ಕರೆಸಿಕೊಳ್ಳುತ್ತಾರೆ. ನಂತರ ಅವರಿಗೆ ದವಸ, ಧಾನ್ಯಗಳನ್ನಷ್ಟೇ ಅಲ್ಲದೆ, ಎಕರೆಗೆ 1500 ರೂ. ದಿಂದ 2000 ರೂ. ಪಡೆಯುತ್ತಾರೆ. ರೈತರು ಕಟಾವು ಮಾಡಿದ
ಭತ್ತದ ಗದ್ದೆಗಳಲ್ಲಿ ಕುರಿಗಳನ್ನು ತರಬುತ್ತಾರೆ. ಇದಕ್ಕಾಗಿ ರೈತರು ಕುರಿಗಾಹಿಗಳಿಗೆ ಹಣ ಮತ್ತು ಅಕ್ಕಿ ನೀಡುತ್ತಾರೆ.

ತಾಲೂಕಿಗೆ ವಲಸೆ ಬರುವ ಕುರಿಗಾಹಿಗಳ ಬಗ್ಗೆ ಸಂಬಂಧಿಸಿದ ಪಶುವೈದ್ಯಾಧಿಕಾರಿಗಳಿಂದ  ಸಮೀಕ್ಷೆಯೇ ನಡೆಯುವುದಿಲ್ಲ. ಅನೇಕಬಾರಿ ಕುರಿಗಳು ವಿವಿಧ ರೋಗದಿಂದ
ಸಾಯುತ್ತವೆ. ಆದರೆ ಪಶು ವೈದ್ಯಾಧಿಕಾರಿಗಳು ಈ ಬಗ್ಗೆ ತಲೆಕೆಡಸಿಕೊಳ್ಳುವುದಿಲ್ಲ. ಮಳೆ, ಗಾಳಿ, ಚಳಿಗೆ ನೂರಾರು ಕುರಿ ಮತ್ತು ಕುರಿಗಾಹಿಗಳು ತತ್ತರಿಸುತ್ತಿದ್ದಾರೆ. ಜೋಪಡಿ
ನೆರಳಿನಲ್ಲಿ ಜೀವಿಸುವ ಇವರಿಗೆ ಯಾವುದೇ ಭದ್ರತೆ ಇಲ್ಲ, ಹೊಲಗದ್ದೆಗಳಲ್ಲಿ ಠಿಕಾಣಿ ಹೂಡುವ ಕುರಿಗಾಹಿಗಳಿಗೆ ಆಗಾಗ ಹಾವು, ಚೇಳು ಕಚ್ಚುವುದು ಸಾಮಾನ್ಯವಾಗಿದೆ. ಕುರಿಗಾಹಿಗಳಿಗೆ ಭೀಮಾ ಯೋಜನೆಯಡಿ ವಿಮೆ ಸೌಲಭ್ಯವಿರುತ್ತದೆ. ಆದರೆ ಬಹುತೇಕ ಕುರಿಗಾಹಿಗಳು ವಿಮಾ ಯೋಜನೆ ಅನುಕೂಲ ಮಾಡಿಕೊಂಡಿಲ್ಲ. ಒಟ್ಟಾರೆ ವಲಸೆ ಕುರಿಗಾಹಿಗಳ ಬದುಕು ಅತಂತ್ರ ಸ್ಥಿತಿಯಲ್ಲಿದ್ದು, ಕುರಿಗಾಹಿಗಳಿಗೆ ಸೂಕ್ತ ನೆರವು ನೀಡುವ ಅವಶ್ಯಕತೆ ಇದೆ.

ಪ್ರತಿವರ್ಷ ಬೆಳೆ ಕಟಾವಾಗುತ್ತಿದ್ದಂತೆ ಇತ್ತ ಕಡೆ ಬರ್ತೀವಿ, ಕುರಿಗಳು ಕೆಲವು ಬಾರಿ ಎಷ್ಟೋ ಸಾಯ್ತಾವು, ಇಲ್ಲಿ ನಮ್ಮ ಕುರಿಗಳಿಗೆ ಮೇವು, ನೀರು ಉತ್ತಮವಾಗಿ ಸಿಗುತ್ತದೆ. ರೈತರು ನಮ್ಮ ಕುರಿಗಳನ್ನು ತಮ್ಮ ಹೊದಲ್ಲಿ ತರಬಿಸಿಕೊಂಡು ರೊಕ್ಕಾ ಮತ್ತು ಅಕ್ಕಿ ನೀಡುತ್ತಾರೆ. ಇದರಿಂದ ನಮ್ಮ ಬದುಕಿಗೆ ಅನುಕೂಲವಾಗಿದೆ. ಬಸಪ್ಪ, ಬೆಳಗಾವಿ ಕುರಿಗಾಹಿ. ನಮ್ಮ ತಾಲೂಕಿಗೆ ಪ್ರತಿವರ್ಷ 20 ರಿಂದ 25 ಸಾವಿರ ವಲಸೆ ಕುರಿಗಳು ಬರುತ್ತವೆ. ಗಂಗಾಧರ, ಮುಖ್ಯ ಪಶುವೈದ್ಯರು

ಆರ್‌.ಬಸವರೆಡ್ಡಿ, ಕರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next