Advertisement

ಬಿಜೆಪಿಗೆ ಮೋದಿ ಅಲೆ ವರ-ಐಐಟಿ ತಪ್ಪಿಸಿದ ಶಾಪ

05:54 PM Apr 16, 2019 | pallavi |
ರಾಯಚೂರು: ಅಲ್ಪ ಸಂಖ್ಯಾತ ಮತಗಳು ಹೆಚ್ಚಾಗಿರುವ ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ಸಮಬಲದ ಸೆಣಸಾಟಕ್ಕೆ ಅಣಿಯಾಗಿವೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆಯೂ ಬಿಜೆಪಿ-ಕಾಂಗ್ರೆಸ್‌ ನಡುವೆಯೇ ಪೈಪೋಟಿ ಏರ್ಪಟ್ಟಿತ್ತು.
ಸದ್ಯಕ್ಕೆ ಬಿಜೆಪಿ ಶಾಸಕರು ಅಧಿಕಾರದಲ್ಲಿರುವ ಈ ಕ್ಷೇತ್ರದಲ್ಲಿ ಅದೇ ಪಕ್ಷದ ಪಾರುಪತ್ಯವಿದೆ ಎಂದು ಹೇಳುವುದು ಕಷ್ಟ. ಅಲ್ಲದೇ, ನಗರ ಪ್ರದೇಶವಾದ್ದರಿಂದ ಪ್ರಜ್ಞಾವಂತ ಮತದಾರರ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಗೆ ಮೋದಿ ಅಲೆ ವರವಾದರೆ ಜಿಲ್ಲೆಗೆ ಐಐಟಿ ತಪ್ಪಿಸಿದ ಪಕ್ಷ ಎಂಬ ಸಿಟ್ಟು ಇದೆ. ಆದರೆ, ಅಲ್ಪಸಂಖ್ಯಾತರ ಮತಗಳು ಹೆಚ್ಚಾಗಿದ್ದು, ಕಾಂಗ್ರೆಸ್‌ಗೆ ಒಲವು ತೋರುವ ಸಾಧ್ಯತೆಗಳಿವೆ.
ಶಾಸಕರ ಯತ್ನದಿಂದ ನಗರದಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಯುಜಿಡಿ, 24/7 ಕುಡಿಯುವ ನೀರಿನ ಯೋಜನೆ ಇನ್ನೂ ಮುಗಿದಿಲ್ಲ. ಜಿಲ್ಲಾ ಕ್ರೀಡಾಂಗಣ ಉದ್ಘಾಟಿಸಿ ವರ್ಷ ಕಳೆದರೂ ಬಾಕಿ ಕಾಮಗಾರಿ ಮುಗಿದಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆದು, ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನಗಳಾಗುತ್ತಿಲ್ಲ. ಕಾಂಗ್ರೆಸ್‌ ಜಾರಿಗೊಳಿಸಿದ 371ಜೆ ಕಲಂ ಇನ್ನೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ.
ಲೋಕಸಭೆ ಚುನಾವಣೆ ದೇಶದ ಪ್ರಗತಿಗೆ ಸಂಬಂಧಿಸಿದ್ದು, ನಾವು ಪ್ರಧಾನಿ ಅಭ್ಯರ್ಥಿ, ಪಕ್ಷಗಳನ್ನು ನೋಡಿ ಮತ ಹಾಕಬೇಕಾಗುತ್ತದೆ ಎನ್ನುತ್ತಾರೆ ನಗರದ ಯುವಕರು. ಮೀಸಲಾತಿ ನಿಯಮಗಳ ಸಡಿಲಿಕೆ, ಮೇಕ್‌ ಇನ್‌ ಇಂಡಿಯಾ, ಮುದ್ರಾ ಸಾಲ ಸೌಲಭ್ಯಗಳ ಬಗ್ಗೆ ಚರ್ಚೆ ಆಗುತ್ತಿದೆ. ಪ್ರಧಾನಿ ಅಭ್ಯರ್ಥಿಗಳಾದ ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿನಡುವೆ ತುಲನೆ ಮಾಡಿ ಮಾತನಾಡುವ ಯುವಕರು ಇದ್ದಾರೆ. ಯಾವುದೇ ರಾಜಕೀಯ ಚಟುವಟಿಕೆಗಳು ಇಲ್ಲಿಂದಲೇ ಆರಂಭವಾಗುವ ಕಾರಣ ಯುವಕರ ಪಾಲ್ಗೊಳ್ಳುವಿಕೆ ಕೂಡ ಕಂಡು ಬರುತ್ತಿದೆ. ಆದರೆ, ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರು ಈವರೆಗೂ ಬಂದು ಪ್ರಚಾರ ನಡೆಸಿಲ್ಲ. ಹೀಗಾಗಿ ಪ್ರಚಾರದ ಅಬ್ಬರ ಅಷ್ಟಾಗಿ ಕಾಣುತ್ತಿಲ್ಲ.
 ಇನ್ನು ರಾಷ್ಟ್ರೀಯ ಸಮಸ್ಯೆಗಳು, ಬೆಳವಣಿಗೆಗಳ ಬಗ್ಗೆ ಹೆಚ್ಚೇ ಚರ್ಚೆ ಆಗುತ್ತಿದೆ. ಕಳಂಕರಹಿತ ಆಡಳಿತ ನೀಡಿರುವ ಪ್ರಧಾನಿಗೆ ಯುವ ಸಮೂಹ ಒಲವು ತೋರಿದರೆ , ಕೆಲವರು ರಫೆಲ್‌ ಹಗರಣ, ಅಂಬಾನಿ, ಅದಾನಿಗಳಿಗೆ ಬೆಂಬಲ, ಬ್ಯಾಂಕ್‌ಗಳಿಗೆ ಉದ್ಯಮಿಗಳ ವಂಚನೆ, ಖಾತೆಗೆ 15 ಲಕ್ಷ ಹಣ ಬರದಿರುವುದು, ಎರಡು ಕೋಟಿ ಉದ್ಯೋಗಗಳ ಬಗ್ಗೆಯೂ ಪ್ರಶ್ನಿಸುತ್ತಿದ್ದಾರೆ. ಆದರೆ, ಈಚೆಗೆ ನಡೆದ ಸರ್ಜಿಕಲ್‌ ಸ್ಟ್ರೈಕ್‌ನಿಂದ ಸಾಕಷ್ಟು ಯುವಕರು ಬಿಜೆಪಿಯತ್ತ ವಾಲಿದ್ದಾರೆ ಎನ್ನಲಾಗುತ್ತಿ¨. ಪ್ರಮುಖ ಸಮಸ್ಯೆ
ನಗರದಲ್ಲಿ ಭಾರೀ ವಾಹನಗಳ ಓಡಾಟದಿಂದ ಟ್ರಾಫಿಕ್‌ ಸಮಸ್ಯೆ ಉಲ್ಬಣಿಸುತ್ತದೆ. ನಗರದ ಹೃದಯಭಾಗದಲ್ಲಿರುವ ರೈಲ್ವೆ ಗೂಡ್ಸ್‌ ಶೆಡ್‌ ಸ್ಥಳಾಂತರಿಸಬೇಕು ಎಂಬ ಬಹುದಿನದ ಬೇಡಿಕೆ ನನೆಗುದಿಗೆ ಬಿದ್ದಿದೆ. ಹಿಂದೆ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೆ, ಅದು ಕಾರ್ಯಗತ ಆಗಲಿಲ್ಲ. ಸಮೀಪದ ಯರಮರಸ್‌ ಬಳಿ ರೈಲ್ವೆ ಗೂಡ್ಸ್‌ ಶೆಡ್‌ ನಿರ್ಮಿಸಿ ನಗರದಲ್ಲಿ ಭಾರೀ ವಾಹನ ಸಂಚಾರ ನಿಷೇ ಸಿದರೆ ನಗರ ಟ್ರಾಫಿಕ್‌ ಫ್ರೀ ಆಗಲಿದೆ. ಇನ್ನು ನಗರದ ಆಸುಪಾಸು ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಸುಸಜ್ಜಿತ ರಿಂಗ್‌ ರೋಡ್‌ ನಿರ್ಮಿಸಬೇಕಿದೆ. ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಅದು ಮಾತ್ರ ಆರಕ್ಕೇರದೆ ಮೂರಕ್ಕಿಳಿಯದೆ ಉಳಿದಿದೆ. ಇನ್ನು ಸೋಲಾರ್‌ ಪಾರ್ಕ್‌, ಎಪಿಎಂಸಿ ಆಧುನೀಕರಣ, ಐಐಐಟಿ ಸ್ಥಾಪನೆಯಂಥ ಸಾಕಷ್ಟು ಕಾರ್ಯಕ್ರಮಗಳು ನನೆಗುದಿಗೆ ಬಿದ್ದಿವೆ.
Advertisement

Udayavani is now on Telegram. Click here to join our channel and stay updated with the latest news.

Next