Advertisement

ಕೋವಿಡ್‌ ಕಾಲದಲ್ಲೂ ಹಳದಿ ಲೋಹದ ಮೇಲಿನ ಮೋಹ

06:53 PM Jul 22, 2020 | Karthik A |

ಕೊರೊನಾ ಎಂಬ ಕಣ್ಣಿಗೆ ಕಾಣದ ಕಣವೊಂದು ಮನುಕುಲವನ್ನು ಮೆತ್ತಗಾಗಿಸಿದೆ, ಜತೆಗೆ ಬೆಲೆ ಏರಿಕೆಯ ಪರಿಣಾಮ, ಗಾಯದ ಮೇಲೆ ಬರೆ ಎಳೆದಂತೆ. ಅದರಲ್ಲೂ ಹೆಣ್ಣುಮಕ್ಕಳ ನೆಚ್ಚಿನ ಚಿನ್ನದ ಬೆಲೆ ಗಗನ ಮುಖೀಯಾಗಿದೆ, ಅಲ್ಲ ಗಗನದಾಚೆ ಸಾಗಿದೆ ಎಂದರೂ ತಪ್ಪಲ್ಲ.

Advertisement

ಭವಿಷ್ಯದ ಜೀವನವೇ ಅನಿಶ್ಚಿತವಾಗಿ ಗೋಚರಿಸುವ ಈ ಸಂದಿಗ್ಧ ಸನ್ನಿವೇಶದಲ್ಲಿ, ಜನ ಸಾಮಾನ್ಯರಿಗೆ ಚಿನ್ನವೆಂಬುದು ಮರೀಚಿಕೆಯಾಗತೊಡಗಿದೆ. ಲಕ್ಷ ರೂಪಾಯಿಯ ಬೆಲೆ ಅಲಕ್ಷ್ಯವಾಗುತ್ತ, ಈಗ ಹತ್ತು ಗ್ರಾಂ ಚಿನ್ನದ ಬೆಲೆ ಬರೋಬ್ಬರಿ ಅರ್ಧ ಲಕ್ಷಕ್ಕೆ ಬಂದು ನಿಂತಿದೆ, ಅಲ್ಲ ನಿಲ್ಲದೆ ಓಡುತ್ತಲೇ ಇದೆ ಎನ್ನಬಹುದು.ಆದರೂ ಚಿನ್ನದ ಮೇಲಿನ ಉತ್ಸಾಹ ಜನರಲ್ಲಿ ಕಡಿಮೆಯಾಗುವುದೇ ಇಲ್ಲ.

ಈಗ ಎಲ್ಲಿ ನಡೆಯುತ್ತೆ ಚಿನ್ನದ ವ್ಯಾಪಾರ? ಅದ್ಯಾವ ಜನ ಹೋಗಿ ಚಿನ್ನವನ್ನು ಕೊಳ್ಳುತ್ತಾರೆ? ಈ ಸನ್ನಿವೇಶದಲ್ಲಿ, ಇದು ಮಧ್ಯಮ ವರ್ಗದ ಜನರ ಸಹಜ ಭಾವನೆ ಮತ್ತು ಸರಿಯಾದ ಅನಿಸಿಕೆಯೂ ಹೌದು. ಇದಕ್ಕೆ ವ್ಯತಿರಿಕ್ತ ಎಂಬಂತೆ ಅನುಭವವಾಗಿದ್ದು ಇತ್ತೀಚೆಗೆ ನಗರದ ಒಂದು ಪ್ರತಿಷ್ಠಿತ ಚಿನ್ನದ ಅಂಗಡಿಗೆ ಅಕಸ್ಮಾತಾಗಿ ಭೇಟಿ ಕೂಟ್ಟಾಗ.

ಇಂತಹ ಬೆಲೆ ಏರಿಕೆಯ ಸಮಯದಲ್ಲೂ ಅಲ್ಲಿಗೆ ಹೋಗಿದ್ದು ಸಂಬಂಧಿಕರ ಜತೆ, ಅವರು ಕಷ್ಟ ಪಟ್ಟು ದುಡಿದು ಗಳಿಸಿದ ಸಂಬಳದಲ್ಲಿ ಪ್ರತಿ ತಿಂಗಳು ಉಳಿಕೆಯ ಹಣವನ್ನು ಕಂತುಗಳಾಗಿ ಕಟ್ಟಿ, ವರ್ಷದ ಕೊನೆಗೆ ಮನೆಯವರಿಗೆ ಚಿನ್ನದ ಆಭರಣ ಕೊಡಿಸುವ ಯೋಜನೆಯಲ್ಲಿ ಹಣ ವಿನಿಯೋಗಿಸಿದಕ್ಕೆ. ಅಂಗಡಿ ಒಳಗಿನ ವಾತಾವರಣ, ಜನ ಜನಸಂದಣಿ ನೋಡಿ ಮೊದಲ ನೋಟಕ್ಕೆ ಗಾಬರಿಯಾಯಿತು.

ಸರಿ ಸುಮಾರು ಇಪ್ಪತ್ತು ಮೂವತ್ತು ಜನ ಕೆಲಸಗಾರರು, ಎಲ್ಲರೂ ಗ್ರಾಹಕರನ್ನು ನೋಡಿಕೊಳ್ಳುವದರಲ್ಲಿ ನಿರತರು. ಒಂದು ಕ್ಷಣ ಯೋಚಿಸಿದ್ದು ಆಯ್ತು, ಇದೇನು ಬಟ್ಟೆ ವ್ಯಾಪಾರದ ಅಂಗಡಿಯೋ ಇಲ್ಲ ಅಭರಣದ ಅಂಗಡಿಯೋ? ಹಾಗೆಯೇ ನೋಡುತ್ತಾ ನೋಡುತ್ತಾ ಮೂಕವಿಸ್ಮಿತನಾದೆ. ಲಕ್ಷಲಕ್ಷಗಳ ಬೆಲೆಗೆ ಜನರಿಗೆ ಲಕ್ಷವಿಲ್ಲ ಎಂದೆನಿಸಿತು. ಒಂದು ಸಣ್ಣ ಹತ್ತು ಗ್ರಾಂ. ತೂಕದ ಅಭರಣಕ್ಕೂ ಕನಿಷ್ಟ 50ರಿಂದ 60 ಸಾವಿರ ಖರ್ಚು. ಅಂತಹುದರಲ್ಲಿ, ದೊಡ್ಡ ದೊಡ್ಡ ನೆಕ್‌ಲೆಸ್‌, ಮಿಂಚುವ ಬಳೆಗಳು, ಹೊಳೆಯುವ ಕಿವಿಯೋಲೆಗಳು, ಎಲ್ಲವೂ ಲಕ್ಷಗಳಲ್ಲೇ ವ್ಯಾಪಾರ. ಕೆಲವು ಆಭರಣಗಳಂತೂ ದೇವತೆಗಳ ಅಲಂಕಾರಕ್ಕೆ ಉಪಯೋಗಿಸುವ ವಸ್ತುಗಳಂತೆ ಗೋಚರಿಸಿದವು.

Advertisement

ಅಂದರೆ ಅಷ್ಟೊಂದು ದೊಡ್ಡ ಮತ್ತು ಭಾರವಾದ ಕೊರಳ ಹಾರಗಳು. ಅವುಗಳ ಬೆಲೆ ಕನಿಷ್ಟ ಐದಾರು ಲಕ್ಷ ಆಗಬಹುದೇನೋ. ನೋಡು ನೋಡುತ್ತಲೇ ಯಾರೋ ಒಬ್ಬರು ಅವುಗಳ ಖರೀದಿ ಮಾಡಿಯೂ ಆಗಿತ್ತು.
ಒಂದೆಡೆ ಹೊಟ್ಟೆ ಬಟ್ಟೆಗೆ ಕಷ್ಟ ಪಟ್ಟು ಜೀವನ ನಡೆಸುವುದೇ ದುಸ್ತರವಾಗಿರುವ ಈ ಪರಿಸ್ಥಿತಿಯಲ್ಲಿ ಜನರು ದುಂಬಾಲು ಬಿದ್ದು ಚಿನ್ನದ ಅಂಗಡಿಗಳಿಗೆ ಲಗ್ಗೆ ಇಡುತ್ತಿರುವದನ್ನು, ಬಟ್ಟೆಯ ಹಾಗೆ ಬಂಗಾರವನ್ನು ಖರೀದಿಸುವುದನ್ನು ನೋಡಿದರೆ ನಿಜಕ್ಕೂ ವಿಚಿತ್ರ ಮತ್ತು ಆಶ್ಚರ್ಯ ಅನಿಸಿದರೂ, ಇದು ಸತ್ಯ.

– ಮಹಾಂತೇಶ ಮಾಗನೂರ, ಬೆಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next