Advertisement

ಯಾರ ಓಲೈಕೆಗೂ ಮುಕುಟ ಮಣಿ ಕವನ ರಚಿಸಿಲ್ಲ

12:04 PM Apr 17, 2018 | |

ಬೆಂಗಳೂರು: “ಚುನಾವಣೆಯಲ್ಲಿ ಎಂತಹ ಆಯ್ಕೆ ನಮ್ಮದಾಗಬೇಕು ಎಂಬ ಕುರಿತು ಜಾಗೃತಿ ಮೂಡಿಸುವ ಮನಸ್ಥಿತಿಯಲ್ಲಿ ನನ್ನ ಮುಕುಟ ಮಣಿ ಕವನ ಬರೆದಿದ್ದೇನೆಯೇ ಹೊರತು ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಓಲೈಕೆ ಮಾಡುವ ಉದ್ದೇಶ ನನಗಿಲ್ಲ,’ ಎಂದು ಪದ್ಮಶ್ರೀ ಪುರಸ್ಕೃತ ಕವಿ ಡಾ.ದೊಡ್ಡರಂಗೇಗೌಡ ಸ್ಪಷ್ಟಪಡಿಸಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಆವರು, “ಮುಕುಟ ಮಣಿ ಕವನದ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಪ್ರಶಸ್ತಿ ಪಡೆಯುವ ಉದ್ದೇಶದಿಂದ ಕವನ ಬರೆದಿದ್ದೇನೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನಾನು ಆ ಕವನವನ್ನು ಈ ಹಿಂದೆಯೇ ಬರೆದಿದ್ದು, ಕೆಲವರು  ತಪ್ಪಾಗಿ ಭಾವಿಸಿದ್ದಾರೆ,’ ಎಂದು ಬೇಸರ ವ್ಯಕ್ತ ಪಡಿಸಿದರು.

ಈ ಹಿಂದೆ ವಿಧಾನ ಪರಿಷತ್‌ ಸದಸ್ಯನಾಗಿದ್ದಾಗಲೂ ವಿರೋಧ ಪಕ್ಷದವರ ಜತೆ ಸೇರಿ ಆಡಳಿತ ಪಕ್ಷದ ತಪ್ಪುಗಳನ್ನು ಖಂಡಿಸಿದ್ದೇನೆ. ಬಳ್ಳಾರಿ ಗಣಿ ಧಣಿಗಳ ವಿರೋಧಿಸಿ ಕವಿತೆ ಬರೆದಿದ್ದೇನೆ. ಕವಿಗಳು ಸಮಾಜದ ಸಮನ್ವಯಕಾರಾಗಿದ್ದು, ಆವರಿಗೆ ಸಮಾಜವನ್ನು ಜಾಗೃತಗೊಳಿಸಿ ಸರಿ ದಾರಿಯಲ್ಲಿ ಕೊಂಡೊಯ್ಯುವ ಜವಬ್ದಾರಿ ಇದೆ. ಆದರಂತೆ ನಾನು ಕೂಡ ನನ್ನ ಕವನಗಳಲ್ಲಿ ಸಮಾಜದ ಸರಿ, ತಪ್ಪುಗಳನ್ನು ತೆರೆದಿಡುತ್ತಿದ್ದೇನೆ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ್‌ ಮಾತನಾಡಿ, ಕೇಂದ್ರ ಸರ್ಕಾರವು ಈ ಬಾರಿ ಅತ್ಯಂತ ಪಾರದರ್ಶಕವಾಗಿ ಹಾಗೂ ಯಾವುದೇ ಶಿಫಾರಸುಗಳನ್ನು ಪರಿಗಣಿಸದೆ ಸ್ವತಂತ್ರವಾಗಿ ಮಾಹಿತಿ ಪಡೆದು ಪದ್ಮ ಪ್ರಶಸ್ತಿಗಳಿಗೆ ಆಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ದೊಡ್ಡರಂಗೇಗೌಡ ಅವರು ಎಲ್ಲರನ್ನೂ, ಎಲ್ಲವನ್ನೂ ಶುದ್ಧ ಭಾವದಿಂದ ನೋಡುವ ವ್ಯಕ್ತಿಯಾಗಿದ್ದು, ಅನೇಕರನ್ನು ಕೈಹಿಡಿದು ಬೆಳೆಸಿದ್ದಾರೆ. ಸುಖ ದುಃಖಗಳಿಗೆ ಹಿಗ್ಗದೇ ಕುಗ್ಗದೇ ಸಮನಾಂತರ ಜೀವನ ಸಾಗಿಸಿಕೊಂಡು ಬಂದವರು ಎಂದು ಹೇಳಿದರು.

ಹಿರಿಯ ಕವಿ ಪ್ರೊ.ಎಲ್‌.ಎನ್‌. ಮುಕುಂದರಾಜ್‌ ಮಾತನಾಡಿ, ಶ್ರಮ ಸಂಸ್ಕೃತಿ ಕಾವ್ಯದ ಬೇರಾಗಿದೆ. ಶ್ರಮದ ಹಿನ್ನೆಲೆಯಿಂದ ಬಂದ ದೊಡ್ಡರಂಗೇಗೌಡರು 200 ಚಿತ್ರಗಳಿಗೆ 500ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದು, ತಮ್ಮ ಕವನಗಳ ಮೂಲಕ ಪ್ರೇಮವನ್ನು ಉಣಬಡಿಸಿದ ಮಹನೀಯ. ಇಂಥವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಕನ್ನಡಿಗರಿಗೆ ಸಂದ ಗೌರವವೇ ಸರಿ ಎಂದರು. ಹಿರಿಯ ಸಾಹಿತಿ ಡಾ.ಮಂಗಳಾ ಪ್ರಿಯದರ್ಶಿನಿ, ಕೇಂದ್ರ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next