Advertisement

ಸಮ್ಮೇಳನಕ್ಕೆ ಹರಿದು ಬಂದ ಜನಸಾಗರ

11:44 PM Feb 06, 2020 | Lakshmi GovindaRaj |

ಬುಧವಾರದಿಂದ ಆರಂಭವಾಗಿರುವ 85ನೇ ಸಾಹಿತ್ಯ ಸಮ್ಮೇಳನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಮ್ಮೇಳನದ ಎರಡನೇ ದಿನವಾದ ಗುರುವಾರವೂ ಸಾಹಿತ್ಯಾಸಕ್ತರು, ಕನ್ನಡಪ್ರೇಮಿಗಳು ತಂಡೋಪತಂಡವಾಗಿ ಹರಿದು ಬಂದರು.ಯಾವಾಗಲೂ ಜ್ಞಾನ, ಶಕ್ತಿಯಿಂದ ತುಂಬಿಕೊಂಡಿರುವ ಅನ್ನಪೂರ್ಣೆ ಗುರುವಾರವೂ ತನ್ನ ಭೌತಿಕ ಸ್ವರೂಪದಲ್ಲಿ ವಿಜೃಂಭಿಸಿದಳು. ಭೋಜನಮಂದಿರಕ್ಕೆ ಜನ ನುಗ್ಗಿ ಬಂದರು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟಕ್ಕೆ ಜನಸಂದಣಿ ಇತ್ತು.

Advertisement

ಇನ್ನು, ಬೃಹತ್‌ ಸಂಘಟನೆ ನಡೆಯುವ ಕಡೆ ಬೃಹತ್ತಾದ ಸಮಸ್ಯೆ ಸಾಮಾನ್ಯ. 1 ಲಕ್ಷವನ್ನೂ ಮೀರಿದ ಜನರಿಗೆ ಶೌಚಾಲಯದ ವ್ಯವಸ್ಥೆ ಮಾಡುವುದು ಸುಲಭದ ಮಾತಲ್ಲ. ಆದರೂ, ಸಂಘಟಕರು ಅದನ್ನು ಶಕ್ತಿಮೀರಿ ಮಾಡಿದ್ದರು. ಅದರ ನಿರ್ವಹಣೆ ಸ್ವಲ್ಪ ಕಷ್ಟವಾಯಿತು. ಶೌಚಾಲಯದೊಳಕ್ಕೆ ನೀರು ಒಯ್ಯುವುದು ಒಂದು ತಾಪತ್ರಯವಾದರೆ, ಆ ಗಲೀಜನ್ನು ತಡೆದುಕೊಳ್ಳುವುದು ಇನ್ನೊಂದು ತಾಪತ್ರಯ. ನಿಜಕ್ಕೂ ವ್ಯವಸ್ಥೆಯೊಂದು ಕೈಮೀರುತ್ತಿದೆ, ಜನಶಕ್ತಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಅನಿಸಿದರೆ, ಅಲ್ಲಿಗೆ ಜನರು ಬರುತ್ತಿದ್ದಾರೆ, ಅವರು ಸ್ಪಂದಿಸುತ್ತಿದ್ದಾರೆ ಅನ್ನುವುದೇ ಅರ್ಥ. ಈ ಮಾತು ಸಮ್ಮೇಳನದ ಎರಡನೇ ದಿನಕ್ಕೂ ಅನ್ವಯವಾಯಿತು.

ಮೊಳಗಿದ ಪ್ರತಿರೋಧ: ವಿವಾದದಿಂದಲೇ ಗಮನ ಸೆಳೆದ, ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಧ್ವನಿ, ಕಲಬುರಗಿಯಲ್ಲಿನ ನುಡಿಜಾತ್ರೆಯಲ್ಲೂ ಪ್ರತಿಧ್ವನಿಸಿತ್ತು. ಅಷ್ಟೇ ಅಲ್ಲದೆ, ಕಸಾಪ ಅಧ್ಯಕ್ಷ ಮನು ಬಳಿಗಾರ್‌ ರಾಜೀನಾಮೆಗೆ ಗೋಷ್ಠಿಗಳಲ್ಲಿ ಬಹಿರಂಗ ಆಗ್ರಹವೂ ಕೇಳಿಬಂತು.”ಮನು ಬಳಿಗಾರ ರಾಜೀನಾಮೆ ನೀಡಿ ಮನೆಗೆ ಹೋಗ ಬೇಕು. ಶೃಂಗೇರಿ ಸಮ್ಮೇಳನಕ್ಕೆ ಅಡ್ಡಿಮಾಡಿ, ಕನ್ನಡ ನಾಡಿಗೆ ದ್ರೋಹ ಬಗೆದಿದ್ದಾರೆ. ಸಮ್ಮೇಳನಕ್ಕೆ ಪೆಟ್ರೋಲ್‌ ಬಾಂಬ್‌ ಹಾಕುತ್ತೇವೆ ಎಂದು ಧಮಕಿ ಹಾಕಿದವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಗುಡುಗಿದ್ದು, ವಿಚಾರವಾದಿ ಪ್ರೊ.ಆರ್‌.ಕೆ. ಹುಡಗಿ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ದಿನದ ಗೋಷ್ಠಿ ಯಲ್ಲಿ ಹೋರಾಟಗಾರ್ತಿ ಕೆ. ನೀಲಾ ಅಸಮಾಧಾನ ಹೊರ ಹಾಕಿ ದ್ದರು.ಇನ್ನೊಂದೆಡೆ, ಶೃಂಗೇರಿ ಸಮ್ಮೇಳನದ ವಿಚಾರವಾಗಿ ಚಿಂತಕ ಡಾ. ರಹಮತ್‌ ತರೀಕೆರೆ, ಸಮ್ಮೇಳನದಿಂದ ದೂರ ಉಳಿದಿದ್ದರು. ತತ್ವಪದ, ಸೂಫಿ ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಾಗಿದ್ದ ರಹಮತ್‌ ಗೈರಾಗಿ ದ್ದರು. “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಶೃಂಗೇರಿ ಸಮ್ಮೇಳನ ವಿಚಾರದಲ್ಲಿ ಕಸಾಪ ತನ್ನ ಸ್ವಾಯತ್ತತೆ ಕಳಕೊಂಡು ಸರ್ಕಾರಕ್ಕೆ ಶರಣಾಗಿದೆ. ಇದು ಅತ್ಯಂತ ಶೋಚನೀಯ. ನನ್ನ ನಿಲುವನ್ನು ಬಳಿಗಾರ ಅವರ ಬಳಿ ಸ್ಪಷ್ಟಪಡಿಸಿದ್ದೇನೆಂದರು.

ಭಾವಿ “ರಾಷ್ಟ್ರಪತಿ’ ಬಂದಿದ್ರು!: ಬಿಳಿಪ್ಯಾಂಟು, ಷರ್ಟು ಧರಿಸಿದ್ದ ಅಜ್ಜನೊಬ್ಬ ಸಮ್ಮೇಳನದಲ್ಲಿ ಅಲೆ ಸೃಷ್ಟಿಸಿದ್ದ. “ನಾನೇ ಮುಂದಿನ ರಾಷ್ಟ್ರಪತಿ…’ ಅಂತ ಅಜ್ಜ ಸಮ್ಮೇಳನಕ್ಕೆ ಬಂದವರ ತಲೆಗೆ ಹುಳು ಬಿಡುತ್ತಿದ್ದ. ಸದ್ಯದಲ್ಲೇ ಮೋದಿಯನ್ನು ಭೇಟಿ ಮಾಡ್ತೀನಿ, ದಿಲ್ಲಿಯಲ್ಲಿ ಪ್ರಸ್‌ಮೀಟ್‌ ಮಾಡಿ ಹೇಳ್ತೀನಿ, ಈ ಬಗ್ಗೆ ದೇಶಾದ್ಯಂತ ಸುತ್ತಾಡಿ ಕ್ಯಾಂಪೇನ್‌ ಮಾಡ್ತೀನಿ ಅಂತ ಹೇಳಿಕೊಂಡು ಓಡಾಡುತ್ತಿದ್ದ. ಆತ ಹೋದಲ್ಲೆಲ್ಲ ಅನೇಕರು ಸೆಲ್ಯೂಟ್‌ ಹೊಡೆದು ಗೌರವ ಸಲ್ಲಿಸುತ್ತಿದ್ದರು. ಆತ ಮುಂದಕ್ಕೆ ಹೋದ ಮೇಲೆ, ಮುಗುಳು ನಗು ಬೀರುತ್ತಿದ್ದರು!

Advertisement

ಹೌದು ಹುಲಿಯಾ: ಮಕ್ಕಳ ಗೋಷ್ಠಿ ಅಂದ್ರೆ ಸಮ್ಮೇಳನದಲ್ಲಿ ಒಂದು ಕಳೆ. ಆದರೆ, ಈ ಬಾರಿ ಗೋಷ್ಠಿಗೆ ಕಾಲಮಿತಿ ಸಿಕ್ಕಿದ್ದೇ 15 ನಿಮಿಷ (ಒಬ್ಬೊಬ್ಬರ ಭಾಷಣಕ್ಕೆ). ಸಾಹಿತಿ ಎ.ಕೆ. ರಾಮೇಶ್ವರ ಅವರು “ಬಣ್ಣದ ತಗಡಿನ ತುತ್ತೂರಿ’ ಎನ್ನುತ್ತಾ ಪದ್ಯ ಹೇಳುವಾಗ, ಹಿಂದಿನಿಂದ ಯಾರೋ “ಹೌದು ಹುಲಿಯಾ’ ಎಂದು ಜೋರಾಗಿ ಕೂಗಿದರು. ಸಭಿಕರೆಲ್ಲ ಗೊಳ್ಳೆಂದು ನಕ್ಕಿದ್ದರು. ಒಟ್ಟಿನಲ್ಲಿ ಮಕ್ಕಳ ಗೋಷ್ಠಿಯಲ್ಲಿ ಮಕ್ಕಳಾಟವೂ ಕಂಡುಬಂತು!

ತೊಗರಿ ತಗೋರಿ ಸ್ವಾಮಿ…: ತೊಗರಿ ನೆಲದಲ್ಲಿ ತೊಗರಿಗೇ ಬೆಲೆಯಿಲ್ಲ ಎಂಬ ಕೂಗು ವ್ಯಕ್ತವಾಗಿದ್ದು, ಕೃಷಿ ಗೋಷ್ಠಿ ವೇಳೆ. ಕೃಷಿ ಬೆಲೆ ಆಯೋಗದ ಅಧ್ಯಕ್ಷ ಗೋಷ್ಠಿಯಲ್ಲಿ ಮಾತಾಡುತ್ತಿರುವಾಗ, ಹೊರಗೆ ಒಂದಿಷ್ಟು ರೈತ ಮುಖಂಡರು ಪ್ರತಿಭಟನೆಗೆ ಇಳಿದಿದ್ದರು. ಪ್ರತಿ ಪಹಣಿಗೆ ಈಗ 10 ಕ್ವಿಂಟಲ್‌ ತೊಗರಿಯನ್ನು ಸರ್ಕಾರ ಖರೀದಿ ಮಾಡುತ್ತಿದೆ. ಅದನ್ನು 20 ಕ್ವಿಂಟಲ್‌ಗೆ ಏರಿಸಬೇಕೆಂಬುದು ಪ್ರತಿಭಟನಾನಿರತರ ಬೇಡಿಕೆ. ಪ್ರತಿಭಟನೆ ಇನ್ನೇನು ಕಾವು ಪಡೆಯಿತು ಎನ್ನುವಾಗ, ಪೊಲೀಸರು ಬಂದು, ಧರಣಿನಿರತರನ್ನು ಬಂಧಿಸಿದರು. ರೈತಮುಖಂಡ ಮಾರುತಿ ಮಾನ್ಪಡೆ ಅವರನ್ನೂ ಬಂಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next