Advertisement

ಕಾನೂನು ಗಟ್ಟಿಯಾದರಷ್ಟೇ ಅಪರಾಧ ಜಗತ್ತು ಮೌನವಾಗಬಲ್ಲದು

10:05 AM Dec 29, 2019 | sudhir |

ಸಾವಿರಾರು ಅತ್ಯಾಚಾರ ಪ್ರಕರಣಗಳು ದಾಖಲಾದರೂ ಅದೆಷ್ಟು ಮಂದಿಗೆ ಗಲ್ಲು ಶಿಕ್ಷೆಯಾಗಿದೆ? ಅದೆಷ್ಟು ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ? ಬಹುತೇಕ ಹೆಚ್ಚಿನವರು ಕೆಲವೇ ವರ್ಷಗಳಿಗೆ ಹೊರಬಂದು ಆರಾಮವಾಗಿದ್ದಾರೆ. ಇನ್ನು ಕೆಲವರು ಬೇಲ್‌ ಮೇಲೆ ಹೊರಬಂದು ವಿಚಾರಣೆ ಎಂಬ ನಾಟಕ ಎದುರಿಸುತ್ತಿದ್ದಾರೆ ಅಷ್ಟೇ.

Advertisement

ಅದು 1992ನೇ ಇಸವಿ. ರಾಜಸ್ಥಾನದ ಅಜ್ಮಿàರದಲ್ಲಿ ದಾಖಲಾಗಿತ್ತು ಸರಣಿ ರೇಪ್‌ನ ಕೇಸ್‌. ಇದು ಬರೀ ಒಂದು ಹೆಣ್ಣಿನ ಮೇಲಾದ ಅತ್ಯಾಚಾರವಲ್ಲ. ಬದಲಾಗಿ ಹಲವಾರು ಹೆಣ್ಣು ಮಕ್ಕಳು ಕಾಮುಕರ ಮೋಸದಾಟಕ್ಕೆ ಬಲಿ ಯಾಗಿದ್ದರು. ಪುಂಡರ ಗುಂಪೊಂದು ಸ್ಥಳೀಯ ಕಾಲೇಜಿನ, ಹೈಸ್ಕೂಲಿನ ವಿದ್ಯಾರ್ಥಿಗಳನ್ನು ಪುಸಲಾಯಿಸಿ ರೇಪ್‌ ನಡೆಸುತ್ತಾ ಪೋಟೋ ಕ್ಲಿಕ್ಕಿಸಿಕೊಂಡು ಬ್ಲಾಕ್‌ವೆುçಲ್‌ ಮಾಡುತ್ತಾ ಬಂದಿದ್ದ ಪ್ರಕರಣ ವದು.

ಮಾನಕ್ಕೆ ಅಂಜುತ್ತಿದ್ದ ಕೆಲವು ಹೆಣ್ಣುಮಕ್ಕಳು ಮೌನವಾಗಿ ಸಹಿಸಿಕೊಂಡು ಬಂದರೆ ಇನ್ನು ಕೆಲವರು ಸದ್ದಿಲ್ಲದ್ದೆ ಆತ್ಮಹತ್ಯೆ ಮಾಡಿಕೊಂಡು ಜೀವನವನ್ನು ಮುಗಿಸಿದ್ದರು. ಒಂದು ಅಂದಾಜಿನ ಪ್ರಕಾರ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಸ್ಥಳೀಯ ಪತ್ರಿಕೆಯೊಂದು ಈ ವಿಚಾರವಾಗಿ ಸುದ್ದಿ ಪ್ರಕಟಿಸಿದಾಗಲೇ ವಿಷಯ ಬಹಿರಂಗವಾಗಿ ಪ್ರಕರಣದ ಕರಾಳತೆ ಅರಿವಾದದ್ದು. ಬಳಿಕ ನಡೆದದ್ದು ಕಾನೂನಿನ ಮೆರವಣಿಗೆ. ಫಾರೂಕ್‌ ಚಿಸ್ತಿ, ನಫೀಸ್‌ ಚಿಸ್ತಿ, ಅನ್ವರ್‌ ಚಿಸ್ತಿ (ಇವರೆಲ್ಲಾ ಅಜ್ಮಿàರ್‌ನ ಕಾಂಗ್ರೆಸ್‌ ಘಟಕದ ನಾಯಕರುಗಳು) ಸೇರಿದಂತೆ 18 ಮಂದಿ ಘಟಾನುಘಟಿಗಳ ಬಂಧನವಾಯಿತು. ಕೆಳ ಹಂತದ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೇನಂತೆ, 2013ರಲ್ಲಿ ಅಂದರೆ ಬರೋಬ್ಬರಿ 21 ವರ್ಷಗಳ ಬಳಿಕ ಅಂತಿಮ ತೀರ್ಪು ನೀಡಿದ ರಾಜಸ್ಥಾನದ ಹೈಕೋರ್ಟ್‌ ಅಪರಾಧಿಗಳು ಅದಾಗಲೇ ಸಾಕಷ್ಟು ವರ್ಷ ಬಂಧನದ ಶಿಕ್ಷೆಯನ್ನು ಅನುಭವಿಸಿದ್ದಾರೆ ಆದ್ದರಿಂದ ಅವರಿಗೆ ಜೀವಾವಧಿ ಶಿಕ್ಷೆಯ ಅಗತ್ಯವಿಲ್ಲ ಎಂದು ಅವರನ್ನು ಖುಲಾಸೆ ಮಾಡಿಬಿಟ್ಟಿತ್ತು!

ಅದೊಂದು ದಿನ ದಿಲ್ಲಿಯ ಬಸ್ಸೊಂದರಲ್ಲಿ ಹುಡುಗಿಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ರಾತ್ರಿ ಹೊತ್ತು ಪ್ರಯಾಣಿಸುತ್ತಾಳೆ. ಅದೆಲ್ಲಿ ದ್ದರೋ ಆ ಕಾಮಪಿಪಾಸುಗಳು, ರಣಹದ್ದುಗಳಂತೆ ಏಕಾಏಕಿ ಈ ಜೋಡಿಗಳ ಮೇಲೆ ಎರಗುತ್ತಾರೆ. ಪ್ರಿಯಕರನನ್ನು ಹೊಡೆದು ಉರುಳಿಸಿ ಆ ಮುಗ್ಧ ಹೆಣ್ಣಿನ ಮೇಲೆ ಮೃಗೀಯವಾಗಿ ಅತ್ಯಾಚಾರಗೈಯುತ್ತಾರೆ. ಮನಬಂದಂತೆ ಆಕೆಯ ದೇಹವನ್ನು ಬಳಸಿ ಎಲ್ಲೋ ಒಂದೆಡೆ ರಸ್ತೆಗೆ ಎಸೆದು ಅಲ್ಲಿಂದ ಪರಾರಿಯಾಗುತ್ತಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಬಳಿಕ ಜನರು ಆಸ್ಪತ್ರೆಗೆ ಸೇರಿಸಿದರೂ ಒಂದಷ್ಟು ದಿನ ನರಳಾಡಿ ಕೊನೆಗೆ ಸಾಯುತ್ತಾಳೆ. ಇವಿಷ್ಟು ನಡೆದಿರುವುದು 2012ನೇ ಡಿಸೆಂಬರ್‌ 16ರ ರಾತ್ರಿ. ದೇಶಕ್ಕೆ ದೇಶವೇ ತಲೆತಗ್ಗಿಸುವಂತಹ ಘಟನೆ ಇದು. ವಿಕೃತ ಕಾಮಿಗಳನ್ನು ಕೊಂದೇ ಬಿಡಿ ಎಂಬ ಕೂಗು ದೇಶದ್ಯಾಂತ ಮುಗಿಲು ಮುಟ್ಟಿತ್ತು ಅಂದು. ಪೋಲೀಸರೇನೋ ಅಪರಾಧಿಗಳನ್ನು ಕೆಲವೇ ದಿನಗಳಲ್ಲಿ ಹಿಡಿದು ಜೈಲಿಗಟ್ಟಿದರು. ಕೇಸ್‌ ಕೋರ್ಟ್‌ ಮೆಟ್ಟಿಲೇರಿತು.

ದುರದೃಷ್ಟಾವಶಾತ್‌ ಈ ರೀತಿಯ ನೀಚ ಕೆಲಸದ ಅಪರಾಧಿಗಳ ಪರ ವಾದಿಸಲು ಕೂಡ ನಮ್ಮಲ್ಲಿ ವಕೀಲರುಗಳು ಇದ್ದಾರೆ. ಅಪರಾಧಿಗಳಲ್ಲಿ ಓರ್ವ ಬಾಲಕ ಎಂದು ಆತನಿಗೆ ಬರೇ ಮೂರು ವರ್ಷಗಳ ಸಾದಾ ಶಿಕ್ಷೆಯನ್ನು ನೀಡಿ, ಬದುಕು ಕಲ್ಪಿಸುವ ದಾರಿಯನ್ನು ತೋರಿಸಿತು ನಮ್ಮ ಕಾನೂನು. ಇರಲಿ ಇನ್ನುಳಿದ ಅಪರಾಧಿಗಳಿಗೆ ಯಾದರೂ ಶಿಕ್ಷೆಯಾಯಿತಾ? ಅವರಿಗೆಲ್ಲಾ ಮರಣ ದಂಡನೆಯೆಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ಈವರೆಗೂ ಅದು ಜಾರಿಯಾಗಿಲ್ಲ!

Advertisement

ಇನ್ನೂ ಕೆಲವು ಪ್ರಕರಣಗಳನ್ನು ಗಮನಿಸಿ. ಉತ್ತರ ಪ್ರದೇಶದ ಉನ್ನಾವೊ ಎಂಬ ಊರಿನ ಪ್ರಕರಣವದು. ಶಿವಂ ತ್ರಿವೇದಿ ಎಂಬಾತ 2018ರ ಜನವರಿ ತಿಂಗಳಲ್ಲಿ ಹೆಣ್ಣೊಬ್ಬಳನ್ನು ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ಮದುವೆಯಾಗುತ್ತಾನೆ. ಅದೇನಾಯಿತೋ ಗೊತ್ತಿಲ್ಲ.

2018ರ ಡಿಸೆಂಬರ್‌ ತಿಂಗಳಲ್ಲಿ ತನ್ನ ಮೇಲೆ ಶಿವಂ ತ್ರಿವೇದಿ ಹಾಗೂ ಆತನ ಗೆಳೆಯ ಶುಭಂ ತ್ರಿವೇದಿ ಅತ್ಯಾಚಾರ ನಡೆಸಿದ್ದಾರೆ ಎಂದು 2019ರ ಮಾರ್ಚ್‌ನಲ್ಲಿ ಪೋಲೀಸ್‌ ಕಂಪ್ಲೇಂಟ್‌ ಕೊಡುತ್ತಾಳೆ. ಪರಿಣಾಮ ಗಂಡ ಶಿವಂ ಹಾಗೂ ಶುಭಂರ ಬಂಧನ. ದುರಾದೃಷ್ಟವಶಾತ್‌ ಮೊನ್ನೆ ಶುಭಂಗೆ ಜಾಮೀನು ದೊರಕಿತು.

ಜೈಲಿನಿಂದ ಹೊರಬಂದವನೇ ತನ್ನ ಇತರ ಮಿತ್ರರೊಡಗೂಡಿ ಅತ್ಯಾಚಾರದ ಆರೋಪ ಹೊರಿಸಿದ ಆ ಹುಡುಗಿಯ ಮೇಲೆ ಚಾಕು, ಚೂರಿಯಿಂದ ದಾಳಿನಡೆಸಿ ಪೆಟ್ರೋಲ್‌ ಹಾಕಿ ಸುಡುತ್ತಾನೆ. ಕೋರ್ಟ್‌ ಈ ಪ್ರಕರಣಕ್ಕೆ ಮೊದಲೇ ಅಂತ್ಯ ಹಾಡಿರುತ್ತಿದ್ದರೆ ಉನ್ನಾವೊದಲ್ಲಿ ಇಂತಹ ಒಂದು ಪ್ರಕರಣವೇ ನಡೆಯುತ್ತಿರಲಿಲ್ಲವೇನೋ? ಅದಿರಲಿ, ಒಂದು ಹೆಣ್ಣನ್ನು ಹಾಡುಹಗಲೇ ಎಳೆದು ಹಾಕಿ ಸುಟ್ಟದ್ದು ಘೋರ ಅಪರಾಧವೆ. ಸುಟ್ಟವರು ಯಾರೆಂಬುದು ಅಲ್ಲಿನ ಸಮಾಜಕ್ಕೆ ಗೊತ್ತೇ ಇರುವಂತಹುದು. ಆದರೂ ಮತ್ತೆ ವಿಚಾರಣೆಯ ಪ್ರಹಸನವೇಕೆ? ಅಪರಾಧಿಗಳ ವಾದಗಳನ್ನು ಆಲಿಸುವುದಾದರೂ ಏಕೆ? ಇದೇ ಉನ್ನಾವೋದಲ್ಲಿ ಇನ್ನೊಂದು ದುರ್ಘ‌ಟನೆಯೂ ನಡೆದಿತ್ತು. 2017ರಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳ ಅತ್ಯಾಚಾರದ ಪ್ರಕರಣವದು.

ಇದರಲ್ಲಿ ಅಪರಾಧಿ ಸ್ಥಾನದಲ್ಲಿರುವುದು ಬಿಜೆಪಿಯ ಉಚ್ಚಾಟಿತ ಮಾಜಿ ಎಂಎಲ್‌ಎ. ಪ್ರಕರಣ ದಾಖಲಾದ ಬಳಿಕ ಸಂತ್ರಸ್ತೆಯ ತಂದೆ ಯನ್ನು ಸುಳ್ಳು ಮೊಕದ್ದಮೆಯಲ್ಲಿ ಜೈಲಿಗಟ್ಟಿ ಅಲ್ಲೇ ಕೊಲ್ಲಲಾಯಿತು. ಕೆಲದಿನಗಳ ಬಳಿಕ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆಸಿ ಕೊಲ್ಲುವ ಪ್ರಯತ್ನವೂ ನಡೆಯಿತು. ಇಲ್ಲಿ ಆಕೆಯ ಹತ್ತಿರದ ಇಬ್ಬರು ಸಂಬಂಧಿಗಳು ಬಲಿಯಾಗಬೇಕಾಯಿತು. ಇಷ್ಟೆಲ್ಲಾ ಗುರುತರ ಅಪರಾಧವಿದ್ದರೂ ವಾದ ವಿವಾದಗಳಲ್ಲಿ ಕಾಲಕಳೆದ ನಮ್ಮ ಕಾನೂನು ವ್ಯವಸ್ಥೆ 2019ರ ಡಿಸೆಂಬರ್‌ನಲ್ಲಿ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಎಂದು ತೀರ್ಪು ನೀಡಿದೆಯಷ್ಟೇ. ಇನ್ನು ಇದು ಸುಪ್ರೀಂ ಕದ ತಟ್ಟಿದರೆ ಮತ್ತೂಂದಷ್ಟು ವರ್ಷಗಳ ಕಾಲಹರಣವಂತೂ ಗ್ಯಾರಂಟಿ.

ಇತ್ತೀಚೆಗಿನ ಇನ್ನೊಂದು ಘಟನೆ ಎಂದರೆ ಹೈದರಾಬಾದ್‌ನ ಪ್ರಕರಣ. ನಡೆದಿರುವು ಪಶುವೈದ್ಯೆಯ ಮೇಲೆ ಗುಂಪು ಅತ್ಯಾಚಾರ ಹಾಗೂ ಬೆಂಕಿ ಹಚ್ಚಿ ಆಕೆಯ ಕೊಲೆ. ಎಲ್ಲ ಅಪರಾಧಗಳಂತೆ ಇಲ್ಲಿ ಕೂಡ ಶೀಘ್ರದಲ್ಲಿ ಆರೋಪಿಗಳ ಬಂಧನವಾಯಿತು. ಆದರೆ ಇಲ್ಲಿ ಒಂದು ಬದಲಾವಣೆಯೆಂದರೆ ಘಟನೆ ನಡೆದ ಹತ್ತು ದಿನಗಳೊಳಗೆ ಎಲ್ಲಾ ಅಪರಾಧಿಗಳು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದರು. ಕೋರ್ಟ್‌ ವಿಚಾರಣೆಗಳ ಪ್ರಹಸನವಿಲ್ಲ. ಹಂತ ಹಂತದ ಕೋರ್ಟ್‌ ಗಳಲ್ಲಿ ವರ್ಷಾನುಗಟ್ಟಲೆ ಕಾಯುವ ಪ್ರಮೇಯವೂ ಇಲ್ಲ.

ಚಕಚಕನೆ ಎಲ್ಲವೂ ಮುಗಿದೋಗಿತ್ತು ಇಲ್ಲಿ. ಅಪರಾಧಿಗಳನ್ನು, ಆರೋಪಿಗಳನ್ನು ವಿಚಾರಣೆ ನಡೆಸದೆ ಕೇವಲ ಏಕಾಏಕಿ ಪೋಲೀಸರೇ ಕೊಲ್ಲುವುದಂದರೆ ಏನು? ಹೀಗೆಯೇ ಮುಂದುವರೆದರೆ ಕಾನೂನಿನ ಗತಿಯೇನು ಎಂಬಿತ್ಯಾದಿ ಚರ್ಚೆಗಳು, ವಾದ ವಿವಾದಗಳು ಒಂದಷ್ಟು ಹುಟ್ಟಿಕೊಂಡಿವೆ ಎಂಬುದು ಬೇರೆ ಮಾತು. ಆದರೆ ಒಂದಂತೂ ಸ್ಪಷ್ಟ, ಕಾನೂನಿನ ರೀತಿಯಲ್ಲಿ ಇದು ತಪ್ಪಾಗಿದ್ದರೂ ದೇಶದ ಸಾಮಾನ್ಯ ಜನ ಮಾತ್ರ ಇದನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಅತ್ಯಾಚಾರಿಗಳಿಗೆ ಹೀಗೆಯೇ ಆಗಬೇಕು ಎಂದು ಪೋಲಿಸ್‌ ಪಡೆಯ ಬೆನ್ನು ತಟ್ಟಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಹೌದು ಇಲ್ಲಿ ಮುಖ್ಯವಾಗಿರುವ ವಿಚಾರವೆ ಇದು. ಸಾಮಾನ್ಯವಾಗಿ ಪೊಲೀಸರು ಏನಾದರೂ ಆಕ್ರಮಶೀಲತೆಯನ್ನು ತೋರಿಸಿದರೆ ಆವಾಗ ದೊಡ್ಡ ಮಟ್ಟದ ಟೀಕೆಗಳು ಎದುರಾಗುತ್ತವೆ. ಇನ್ನು ಎನ್‌ಕೌಂಟರ್‌ನಲ್ಲೇನಾದರರೂ ಆರೋಪಿ ಸತ್ತು ಹೋದನೆಂದಾದರೆ ಕೇಳುವುದೇ ಬೇಡ. ಅಂಥ ಸಂದರ್ಭದಲ್ಲಿ ಒಂದಷ್ಟು ಶಿಕ್ಷೆ ಪೋಲೀಸರಿಗೆ ಗ್ಯಾರಂಟಿ. ಆದರೆ ಹೈದರಾಬಾದ್‌ ಅಪರಾಧಿಗಳ ಮೇಲಣ ಎನ್‌ಕೌಂಟರ್‌ಗೆ ಜನ ಮತ ಬೇಧ ಮರೆತು ಪೊಲೀಸರನ್ನು ಪ್ರಶಂಸಿಸಿದ್ದಾರೆ? ಶಹಬುದ್ದೀನ್‌ನಂಥ ಭಯೋತ್ಪಾದನನ್ನು ಎನ್‌ಕೌಂಟರ್‌ ಮೂಲಕ ಕೊಂದು ಹಾಕಿದಾಗ ಈ ರೀತಿಯ ಪ್ರಶಂಸೆ ಎದುರಾಗಿರಲಿಲ್ಲ. ಆದರೆ ಅತ್ಯಾಚಾರದ ಆರೋಪಿಗಳನ್ನು ಗುಂಡಿಟ್ಟು ನೆಲಕ್ಕುರುಳಿಸದ್ದನ್ನು ಜನ ಸಂಭ್ರಮಿಸಲು ಕಾರಣಗಳೇನು? ನಿಜಕ್ಕೂ ಈ ಬಗ್ಗೆ ಕಾನೂನು ಪಂಡಿತರುಗಳು ಯೋಚಿಸಬೇಕಿದೆ. ಅತ್ಯಾಚಾರ, ಕೊಲೆ ಇಂತಹ ಪ್ರಕರಣದಲ್ಲೂ ನಮ್ಮ ದೇಶದ ಕಾನೂನು ದುರ್ಬಲವಾಗಿದೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಸೋತಿದೆ ಎಂಬ ಹತಾಶೆಯ ಭಾವ ಜನರಲ್ಲಿ ಬೆಳೆದಿರುವುದರಿಂದಲೇ ತಾನೇ ಮೊನ್ನೆಯ ಎನ್‌ಕೌಂಟರ್‌ನ್ನು ಜನ ಚಪ್ಪಾಳೆ ತಟ್ಟಿ ಬೆಂಬಲಿಸಿದ್ದು. ಒಂದು ವೇಳೆ ನಮ್ಮ ಕಾನೂನೇ ಇಂತಹ ಪ್ರಕರಣದಲ್ಲಿ ಬಲವಾದ ಶಿಕ್ಷೆಯನ್ನು ನೀಡುತ್ತಾ ಬಂದಿರುತ್ತಿದ್ದರೆ ಅಂತಹ ಒಂದು ಇತಿಹಾಸವಿರುತ್ತಿದ್ದರೆ ಎನ್‌ಕೌಂಟರ್‌ಗೆ ಜನ ಈ ಪರಿಯಾಗಿ ಪೊಲೀಸರನ್ನು ಬೆಂಬಲಿಸಿರುತ್ತಿದ್ದರೆ? ನಿಜಕ್ಕೂ ಈ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು, ಮಂತ್ರಿಗಳ ಅರ್ಹತೆ/ಅನರ್ಹತೆಯನ್ನು ಹೇಗೆ ಗುರುತಿಸಬೇಕು ಎಂಬಿತ್ಯಾದಿ ವಿಚಾರಗಳಿಗೆಲ್ಲಾ ರಾತೋರಾತ್ರಿ ಬಾಗಿಲು ತೆಗೆದು ನ್ಯಾಯದಾನ ಮಾಡುವ ಕೋರ್ಟ್‌ಗಳಿಗೆ ಅತ್ಯಾಚಾರ, ಕೊಲೆ ಮುಂತಾದ ಅಮಾನುಷವಾದ ಕೃತ್ಯಗಳಿಗೆ ತ್ವರಿತ ನ್ಯಾಯದಾನ ಮಾಡಲು ಅಸಾಧ್ಯವಾಗಿರುವುದಾದರೂ ಏಕೆ ಎಂಬುದನ್ನು ನಾವು ಇಂದು ಪ್ರಶ್ನಿಸಬೇಕು.

ಮೇಲೆ ಉದಾಹರಿಸಿದ್ದು ಕೇವಲ ಎರಡು -ಮೂರು ಉದಾಹರಣೆಗಳಷ್ಟೇ. ಇಂತಹ ಸಾವಿರಾರು ಅತ್ಯಾಚಾರ ಪ್ರಕರಣಗಳು ಈ ದೇಶದಲ್ಲಿ ದಾಖಲಾಗಿರಬಹುದು. ಆದರೆ ಅದೆಷ್ಟು ಮಂದಿಗೆ ಗಲ್ಲು ಶಿಕ್ಷೆಯಾಗಿದೆ? ಅದೆಷ್ಟು ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ? ಬಹುತೇಕ ಹೆಚ್ಚಿನವರು ಒಂದೆರಡು ವರ್ಷಗಳಿಗೆ ಶಿಕ್ಷೆಯಿಂದ ಹೊರಬಂದು ಆರಾಮವಾಗಿದ್ದಾರೆ. ಇನ್ನು ಕೆಲವರು ಬೇಲ್‌ ಮೇಲೆ ಹೊರಬಂದು ವಿಚಾರಣೆ ಎಂಬ ನಾಟಕ ಎದುರಿಸುತ್ತಿದ್ದಾರೆ ಅಷ್ಟೇ. ಇಲ್ಲಿ ಎಂತಹ ನೀಚ ಅಪರಾಧಕ್ಕೂ ಪರವಾಗಿ ವಾದಿಸಲು ಲಾಯರ್‌ಗಳ ಸೇವೆ ದಕ್ಕುತ್ತದೆ. ಎಂತಹ ಆರೋಪಿಗೂ ಜಾಮೀನು ಸಿಗುತ್ತದೆ. ಇದು ನಿಜಕ್ಕೂ ವ್ಯವಸ್ಥೆಯ ದುರಂತ. ಒಟ್ಟಿನಲ್ಲಿ ಅತ್ಯಾಚಾರದಂತಹ ದುಷ್ಕೃತ್ಯವನ್ನೂ ನಮ್ಮ ಕಾನೂನು ಒಂದು ಸಾಮಾನ್ಯ ಅಪರಾಧದಂತೆ ಪರಿಗಣಿಸಿದ್ದರಿಂದಲೇ ಇಲ್ಲಿ ಈ ಮಟ್ಟದ ರೇಪ್‌ಗ್ಳು ನಡೆಯುತ್ತಿರುವುದು. ಈ ಪರಿಸ್ಥಿತಿ ಬದಲಾದರಷ್ಟೇ ನಮ್ಮ ಸಮಾಜದಲ್ಲಿ ಹೆಣ್ಣಿನ ಮಾನ-ಪ್ರಾಣಗಳ ರಕ್ಷಣೆಯಾದೀತು. ಲೈಂಗಿಕ ಶೋಷಣೆಗೆ ಕಡಿವಾಣ ಬಿದ್ದೀತು.

– ಪ್ರಸಾದ್‌ ಕುಮಾರ್‌, ಮಾರ್ನಬೈಲ್‌

Advertisement

Udayavani is now on Telegram. Click here to join our channel and stay updated with the latest news.

Next