Advertisement
ಸಾಹಿತಿ, ಅಧ್ಯಾಪಕ ದಿ| ಗುಂಡಾಲು ಮಹಾಬಲ ಶೆಟ್ಟಿ ಅವರ ಪತ್ನಿ ರತ್ನಾ ಜಿ.ಎಂ. ಶೆಟ್ಟಿ ಕಾರ್ನಾಡು ನಿವಾಸಿ. 88ರ ಹರೆಯದ ಅವರು ತಮ್ಮ ಏಳು ಮಕ್ಕಳ ಪೈಕಿ ನಾಲ್ವರನ್ನು ವೈದ್ಯರನ್ನಾಗಿಸಿದ್ದಾರೆ. ಹಿರಿಯ ಪುತ್ರ ಡಾ| ಹಂಸರಾಜ ಶೆಟ್ಟಿ ಜಿ.ಎಂ. ಅವರು ಇಂಗ್ಲಂಡ್‌ನ ಪ್ರತಿಷ್ಠಿತ ಯುನಿವರ್ಸಿಟಿ ಆಫ್ ವೇಲ್ಸ್ ಕಾರ್ಡಿಫ್ ನ ಮುಖ್ಯಸ್ಥರಾಗಿದ್ದಾರೆ. ಹಿರಿಯ ಪುತ್ರಿ ಡಾ| ಗೀತಾಂಜಲಿ ಜಿ.ಎಂ. ಮಂಗಳೂರಿನ ಲೇಡಿಗೋಷನ್ ಜಿಲ್ಲಾಸ್ಪತ್ರೆಯಲ್ಲಿ ಮುಖ್ಯತಜ್ಞ ವೈದ್ಯಾಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಮತ್ತೂಬ್ಬ ಪುತ್ರ ಡಾ| ವಿಶ್ವರಾಜ್ ಇಂಗ್ಲಂಡ್‌ನಲ್ಲಿದ್ದು, ಮತ್ತೂಬ್ಬ ಮಗಳು ಡಾ| ಪದ್ಮಿನಿ ಮುಂಬೈಯಲ್ಲಿ ವೈದ್ಯರಾಗಿದ್ದಾರೆ.
ದನದ ಹಾಲಿನ ಆತಿಥ್ಯಕ್ಕೆ ನಮ್ಮ ಹೆಸರಾಗಿತ್ತು. ಇದಕ್ಕೆ ಪೂರಕವಾಗಿ ನಾವೆಲ್ಲರೂ ಸಸ್ಯಾಹಾರಿಗಳಾಗಿಯೇ ಬದುಕುತ್ತಿದ್ದೇವೆ. ಸುಮಾರು ಏಳು ದಶಕಗಳಿಂದ ಗೋವಿನ ಸೇವೆಯಲ್ಲೇ ದುಡಿದ ಅನುಭವವಿದೆ. ಹೈನುಗಾರಿಕೆ ಮನೆವಾರ್ತೆಯ ಖರ್ಚಿನ ನಿರ್ವಹಣೆಗೆ ಸಹಕಾರಿ. ಮಕ್ಕಳ ಶಿಕ್ಷಣ, ಜೀವನ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಆಸಕ್ತಿಯಿಂದ ಮಾಡಿದೆ. ಯಾವುದೇ ಪ್ರಶಸ್ತಿ – ಪುರಸ್ಕಾರ ಅಥವಾ ಸರಕಾರದ ಸೌಲಭ್ಯ ಪಡೆದಿಲ್ಲ ಎಂದು ರತ್ನಾ ವಿವರಿಸಿದರು. ವಯಸ್ಸು 90ನ್ನು ಸಮೀಪಿಸುತ್ತಿದ್ದರೂ ದನಗಳ ಸೇವೆ ಎಂದರೆ ಅವರ ದಣಿವೆಲ್ಲ ಮಾಯವಾಗುತ್ತದೆ. ಇದರಿಂದ ಅವರಿಗೆ ಆರೋಗ್ಯ ಲಭಿಸಿದೆ, ನೆಮ್ಮದಿ ಸಿಗುವಂತೆ ಮಾಡಿದೆ. ಗೋವುಗಳೊಂದಿಗೆ ನಿತ್ಯ ಕಾಲ ಕಳೆಯುವ ರತ್ನಾ ಅವರಿಗೆ ಕಾಸರಗೋಡು ನೀರಳಿಕೆಯ ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್‌ನ ಮುಖಂಡರು ತಮ್ಮ ಗೋ ಜಾಗೃತಿ ಪಾದಯಾತ್ರೆ ಮೂಲಕ ಆಗಮಿಸಿ, ರತ್ನಾ ಅವರನ್ನು ಗೌರವಿಸಿದ್ದು ವಿಶೇಷ.
Related Articles
ಬೆಳಗ್ಗೆ ನಾಲ್ಕೂವರೆ ಗಂಟೆಗೆ ಏಳುವ ರತ್ನಾ ಬಿಡುವಿಲ್ಲದಂತೆ ದುಡಿಯುತ್ತಾರೆ. ಹನ್ನೆರಡಕ್ಕೂ ಮಿಕ್ಕಿ ತಳಿಯ ಹಸುಗಳ ಆರೈಕೆಯಲ್ಲೇ ಅವರಿಗೆ ನೆಮ್ಮದಿ. ಮಧ್ಯಮ ವರ್ಗದವರಿಗೆ ಸರಕಾರದ ಹೆಚ್ಚಿನ ಸವಲತ್ತುಗಳು ಇಲ್ಲದ ಹೊತ್ತಿನಲ್ಲಿ ಸಾಹಿತ್ಯ – ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪತಿಗೆ ಬೆನ್ನೆಲುಬಾಗಿ ನಿಂತು ತಮ್ಮ ನಾಲ್ವರು ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿದ್ದು, ಉಳಿದವರನ್ನೂ ಉತ್ತಮ ವಿದ್ಯಾವಂತರನ್ನಾಗಿ ಮಾಡಿದ್ದು ಕಠಿನ ಪರಿಶ್ರಮದಿಂದಲೇ. ದನ ಸಾಕಣೆಯ ಅನುಭವದ ಜತೆಗೆ ಅನಾರೋಗ್ಯಕ್ಕೆ ಒಳಗಾಗುವ ಜಾನುವಾರುಗಳ ಚಿಕಿತ್ಸೆ ಮತ್ತು ದನದ ಹೆರಿಗೆ ಮಾಡಿಸುವುದರಲ್ಲೂ ಬಹಳಷ್ಟು ಅನುಭವ ಪಡೆದಿದ್ದಾರೆ. ತಮ್ಮ ಪರಿಸರದಲ್ಲಿ ಹೈನುಗಾರಿಕೆ ಮಾಡುವವರಿಗೆ ಸಾಕಷ್ಟು ಪ್ರಾಯೋಗಿಕ ಮಾಹಿತಿ ನೀಡುತ್ತಾರೆ.
Advertisement
ಸರ್ವೋತ್ತಮ ಅಂಚನ್