Advertisement

ಧರ್ಮದ ಬಗ್ಗೆ ಕೋರ್ಟ್‌ ತೀರ್ಪು ಸರಿಯಲ್ಲ

12:15 PM Oct 31, 2018 | Team Udayavani |

ಬೆಂಗಳೂರು: “ಯಾವ ನ್ಯಾಯಾಂಗಕ್ಕೂ ಧರ್ಮದ ಬಗ್ಗೆ ತೀರ್ಪು ಕೊಡುವ ಹಕ್ಕು ಇಲ್ಲ. ಅದು ಸಮಾಜಕ್ಕೆ ಬಿಟ್ಟ ವಿಚಾರವಾಗಿದ್ದು, ತನ್ನ ವ್ಯಾಪ್ತಿ ಮೀರಿ ನ್ಯಾಯಾಂಗ ಹಸ್ತಕ್ಷೇಪ ಮಾಡುತ್ತಿರುವುದು ಸರಿ ಅಲ್ಲ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು.

Advertisement

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ರಾಜ್ಯಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ “ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳು; ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ವಲಯದ ಮೇಲೆ ಪರಿಣಾಮ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವೇ ಆಗಿರಬಹುದು ಅಥವಾ ಅಯೋಧ್ಯೆ ವಿವಾದವೇ ಆಗಿರಬಹುದು,

ಇವುಗಳನ್ನು ಭಕ್ತರು, ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದರೆ ಸಾಕಿತ್ತು. ತನ್ನ ಅಧೀನಕ್ಕೆ ಬಾರದ ವಿಷಯಗಳಲ್ಲಿ ನ್ಯಾಯಾಲಯ ಕೈಹಾಕುವುದು ಸರಿ ಅಲ್ಲ. ಇತ್ತೀಚಿನ ತೀರ್ಪುಗಳನ್ನು ಅವಲೋಕಿಸಿದರೆ, ನ್ಯಾಯಾಂಗ ತನ್ನ ವ್ಯಾಪ್ತಿಯನ್ನು ಮೀರಿ ಹೊರಹೋಗುತ್ತಿದೆ ಎಂದು ನನಗೆ ಅನಿಸುತ್ತಿದೆ. ನ್ಯಾಯಾಂಗದ ಇಂದಿನ ಪರಿಸ್ಥಿತಿ ನೋಡಿದರೆ, ಮನಸ್ಸಿಗೆ ನೋವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಒಂದು ವೇಳೆ ಇಂತಹ ಧಾರ್ಮಿಕ ವಿಚಾರಗಳಲ್ಲಿ ನ್ಯಾಯಾಂಗ ಪರಿಹಾರ ಸೂಚಿಸದಿದ್ದರೆ, ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಗಳು ಕಂಡಬಂದಲ್ಲಿ ತಾತ್ಕಾಲಿಕ ಪರಿಹಾರ ಸೂಚಿಸಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ತನಗೆ ಮುಜುಗರ ತರಬಹುದಾದ ವಿಷಯಗಳನ್ನು ನ್ಯಾಯಾಂಗದ ಮುಂದಿಡುವ ಪ್ರವೃತ್ತಿ ಕಂಡುಬರುತ್ತಿದೆ. ಶಬರಿಮಲೆ ಮತ್ತು ಅಯೋಧ್ಯೆ ವಿಚಾರದಲ್ಲಾಗಿದ್ದೂ ಇದೇ ಎಂದು ಹೇಳಿದರು. 

ಅಷ್ಟಕ್ಕೂ ಕೋರ್ಟ್‌ನಲ್ಲಿ ಬೇರೆ ಕೇಸುಗಳೇ ಇಲ್ಲವೇ? ಸುಮಾರು ವರ್ಷಗಳಿಂದ ಸಾಕಷ್ಟು ಕೇಸುಗಳು ಬಾಕಿ ಉಳಿದಿವೆ. ಹೀಗಿರುವಾಗ, ತನ್ನ ವ್ಯಾಪ್ತಿಯನ್ನು ಮೀರಿದ ವಿಚಾರಗಳಲ್ಲಿ ಕೈಹಾಕುವುದು ಯಾಕೆ ಎಂದು ಪ್ರಶ್ನಿಸಿದರು. ಜೈನ್‌ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ.ಸಂದೀಪ್‌ ಶಾಸಿ ಮಾತನಾಡಿ, ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದಿದ್ದಾಗ, ನ್ಯಾಯಾಂಗ ಮಧ್ಯಪ್ರವೇಶ ಮಾಡಬೇಕಾಗುತ್ತದೆ.

Advertisement

ಅದು ಐಸಿಯುನಲ್ಲಿರುವ ರೋಗಿಗೆ ಚಿಕಿತ್ಸೆ ನೀಡುವ ವೈದ್ಯನಂತೆ. ಆದರೆ, ರೋಗಿ (ವ್ಯವಸ್ಥೆ) ಕಾಯಂ ಆಗಿ ತೀವ್ರ ನಿಗಾ ಘಟಕದಲ್ಲೇ ಇರುವಂತಹ ಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬಂಟ್ವಾಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಜಕ್ಕಳ ಗಿರೀಶ್‌ ಭಟ್‌ ,ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಮಲ್ಲೇಶ್ವರಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next