ಬೆಂಗಳೂರು: ಕೆಪಿಎಸ್‌ಸಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕೆಲ ಸದಸ್ಯರ ವಿರುದ್ಧ ಪ್ರಾಸಿಕ್ಯೂಶನ್ ಅನುಮತಿ ಕೋರಿರುವ ಪ್ರಕ್ರಿಯೆಯ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ನೀಡುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆಪಿಎಸ್ಸಿಯ ಕೆಲ ಸದಸ್ಯರ ವಿರುದ್ಧ ಪ್ರಾಸಿಕ್ಯೂಶನ್ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಜಿ ರಮೇಶ್ ಹಾಗೂ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನಣ್ಣ, ಅಕ್ರಮದಲ್ಲಿ ಭಾಗಿಯಾದ ಕೆಪಿಎಸ್‌ಸಿ ಸದಸ್ಯರ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವಂತೆ ಸಕ್ಷಮ ಪ್ರಾಧಿಕಾರವಾದ ರಾಷ್ಟ್ರಪತಿಗಳನ್ನು ಕೋರಲಾಗುತ್ತದೆ. ಹಾಲಿ ಸದಸ್ಯರಾಗಿರುವ ಮೂರು ಮಂದಿಯೂ ಪ್ರಾಸಿಕ್ಯೂಶನ್ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಾಗಾದರೇ ತಪ್ಪಿತಸ್ಥರ ವಿರುದ್ಧದ ಪ್ರಾಸಿಕ್ಯೂಶನ್ ಅನುಮತಿ ಪ್ರಕ್ರಿಯೆ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಪ್ರಶ್ನಿಸಿತು.
8 ತಿಂಗಳು ಬೇಕು: ಇದಕ್ಕೆ ಉತ್ತರಿಸಿದ ಸರಕಾರ ಆರೋಪಿಗಳ ವಿರುದ್ಧದ ದಾಖಲೆಗಳು 6000 ಪುಟಗಳಿದ್ದು ಅದನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಬೇಕಿದೆ. ಜೊತೆಗೆ ಕಾನೂನು ಪ್ರಕ್ರಿಯೆಗಳೂ ಜರುಗಬೇಕಿದೆ. ಈ ಪ್ರಕ್ರಿಯೆಗೆ ಕನಿಷ್ಟ 8 ತಿಂಗಳು ಬೇಕಾಗುತ್ತದೆ ಎಂದರು.
ಈ ವಾದ ಆಲಿಸಿದ ನ್ಯಾಯಪೀಠ, ಕೆಪಿಎಸ್‌ಸಿ ಸದಸ್ಯರ ವಿರುದ್ಧದ ಪ್ರಾಸಿಕ್ಯೂಶನ್‌ಗೆ ಒಳಪಡಿಸುವ ಸಂಬಂಧ ರಾಜ್ಯಸರ್ಕಾರ ಅನುಸರಿಸುವ ವಿಧಾನದ ಬಗ್ಗೆ ವರದಿಯನ್ನು ನ್ಯಾಯಪೀಠಕ್ಕೂ ತಿಳಿಸಿ ಎಂದು ಸೂಚಿಸಿ ಜೂನ್ 20ಕ್ಕ ವಿಚಾರಣೆ ಮುಂದೂಡಿತು.