Advertisement

ದೇಶಸೇವೆಯ ತಪಸ್ಸು ಕೊನೆಗೂ ಸುಳ್ಳಾಗಲಿಲ್ಲ!

09:21 AM Jan 31, 2018 | |

ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕೆಂಬ ಹಂಬಲ. ತಂದೆತಾಯಿಯ ಕೂಲಿಯಿಂದಲೇ ನಡೆಯುತ್ತಿತ್ತು ಜೀವನ. ಹಳ್ಳಿಗಾಡಿನಿಂದ ಬಂದು ಸೇನೆ ಸೇರುವ ತವಕಕ್ಕೆ ಬಿಕಾಂ ಕಲಿಕೆಯನ್ನು ಅರ್ಧಕ್ಕೆ ತ್ಯಜಿಸಿದ ಸೈನಿಕನ ಸಾಹಸಗಾಥೆಯಿದು.

Advertisement

ಮಂಗಳೂರು: ದಿನಕ್ಕೆ ನಾಲ್ಕೆಂಟು ಕಿ.ಮೀ. ಶಾಲೆಗೆ ಕ್ರಮಿಸುತ್ತಿದ್ದ ಆ ಬಾಲಕನ ಕಣ್ಣಲ್ಲಿ ಸೇನೆ ಸೇರಬೇಕೆಂಬ ನಿರಂತರ ತುಡಿತ. ನಿತ್ಯವೂ ಅದೇ ಧ್ಯಾನ. ಈ ತಪಸ್ಸು ಸುಳ್ಳಾಗಲಿಲ್ಲ. 19ನೇ ವಯಸ್ಸಿಗೇ ಗಡಿಭದ್ರತಾ ಪಡೆ ಸೇರಿ ಸತತ 34 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮಂಗಳೂರು ಮೇರಿಹಿಲ್‌ನ ಎಂ. ಸಂಜೀವ ಕುಲಾಲ್‌ ಅವರು ನಿಜಕ್ಕೂ ಯುವ ಜನತೆಗೆ ಮಾದರಿ.

ಪುತ್ತೂರಿನ ಮುದನಾಜೆ ಮೂಲದ, ಸದ್ಯ ಮಂಗಳೂರು ಮೇರಿಹಿಲ್‌ನ ಎಂ. ಸಂಜೀವ ಕುಲಾಲ್‌, ಗಡಿಭದ್ರತಾ ಪಡೆಯ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನಕ್ಸಲ್‌ ಪ್ರದೇಶದ ಒರಿಸ್ಸಾ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕಾಶ್ಮೀರ, ಕುಪ್ವಾರ, ಪಂಜಾಬ್‌, ರಾಜಸ್ತಾನ್‌, ಗುಜರಾತ್‌, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಕಠಿನ ಪರಿಸ್ಥಿತಿಗಳಲ್ಲಿಯೂ ಕೆಲಸ ಮಾಡಿದ ಅಪೂರ್ವ ಅನುಭವ ಹೊಂದಿದ್ದಾರೆ.


ಶ್ರಮದ ದಾರಿ

ಹಳ್ಳಿಗಾಡಿನಿಂದ ಬಂದ ಸಂಜೀವ್‌ ಅವರು ದೇಶ ರಕ್ಷಣೆಗೆ ಇಳಿಯುವುದರ ಹಿಂದೆ ಶ್ರಮದ ಕಥೆ ಇದೆ.1ರಿಂದ 5ರವರೆಗೆ ಪುತ್ತೂರು ಮಾಯಿದೆ ದೇವೂಸ್‌ ಚರ್ಚ್‌ ಶಾಲೆ, 6 ಮತ್ತು 7ನೇ ತರಗತಿಯನ್ನು ಪುತ್ತೂರು ಪ್ರಾಥಮಿಕ ಶಾಲೆ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಪುತ್ತೂರು ಕೊಂಬೆಟ್ಟು ಪ್ರೌಢಶಾಲೆ ಮತ್ತು ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಪೂರೈಸಿದರು.

ಇಷ್ಟೂ ವರ್ಷವೂ ಅವರು ಮನೆಯಿಂದ ಕಲಿಕೆಗಾಗಿ ದುರ್ಗಮ ಸ್ಥಳಗಳಲ್ಲಿ ನಡೆದೇ ಕ್ರಮಿಸಬೇಕಿತ್ತು. ಬಳಿಕ ಬೆಂಗಳೂರಿನ ಶೇಷಾದ್ರಿಪುರಂನ ಸಂಧ್ಯಾ ಕಾಲೇಜಿನಲ್ಲಿ ಬಿಕಾಂ ಪದವಿ ಮಾಡುತ್ತಲೇ, ಶಾಪ್‌ವೊಂದರಲ್ಲಿ ದಿನಗೂಲಿ ಸಂಬಳದಲ್ಲಿ ದುಡಿಯುತ್ತಿದ್ದರು. ಅಲ್ಲಿ ನಾಲ್ಕೇ ತಿಂಗಳು ಕಲಿಕೆ ನಡೆಸಿದ್ದು, ಬಳಿಕ ಗಡಿಭದ್ರತಾ ಪಡೆಗೆ ಆಯ್ಕೆಯಾದ್ದರಿಂದ ಸೇವೆಗೆ ತೆರಳಿದರು. 1984ರ ಫೆಬ್ರವರಿಯಲ್ಲಿ ಮಿಲಿಟರಿ ಏರ್‌ಫೋರ್ಸ್‌ಗೆ ಆಯ್ಕೆಯಾದರಾದರೂ, ಕಾರಣಾಂತರದಿಂದ ಹೋಗಿರಲಿಲ್ಲ. ಬಳಿಕ ಗಡಿ ಭದ್ರತಾ ಪಡೆಯಲ್ಲಿ ಕಾನ್ಸ್‌ಟೇಬಲ್‌ ಆಗಿ ನೇಮಕಗೊಂಡರು. ಆನಂತರ ಬಿಎಸ್ಸೆಫ್‌ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌, ಇನ್ಸ್‌ಪೆಕ್ಟರ್‌ ಆಗಿ ಭಡ್ತಿ ಹೊಂದಿ ಒರಿಸ್ಸಾದಲ್ಲಿ ಸೇವೆಯಲ್ಲಿದ್ದಾರೆ. 

Advertisement

ಸೋದರನ ಕನಸಿಗೆ ರೆಕ್ಕೆ
ಸಂಜೀವರ ಕನಸಿಗೆ ರೆಕ್ಕೆ ಕಟ್ಟಿದ್ದು ಅವರ ಸೋದರರು ಮತ್ತು ಹೆತ್ತವರು. ಕೂಲಿ ಕೆಲಸ ಮಾಡುತ್ತಿದ್ದ ತಂದೆ ದಿ| ಸಂಕಪ್ಪ ಮೂಲ್ಯ, ತಾಯಿ ದಿ| ಶೇಷಮ್ಮ, ಸಹೋದರರಾದ ದಿ| ಈಶ್ವರ ಮತ್ತು ಗಿರೀಶ್‌ ಅವರ ಸಂಪಾದನೆಯಿಂದ ಮನೆ ನಡೆಯುತ್ತಿತ್ತು. ಸೇನೆಗೆ ಸೇರಬೇಕೆಂಬ ಅವರ ಆಸೆಗೆ ಹೆತ್ತವರು ಸೋದರರು ಬೆಂಬಲವಾಗಿದ್ದು, ವಿದ್ಯಾಭ್ಯಾಸಕ್ಕೆ ನೆರವು ನೀಡಿದರು. ಪ್ರಸ್ತುತ ಪತ್ನಿ ರೇಖಾ ಎಸ್‌. ಕುಲಾಲ್‌ ಮಕ್ಕಳಾದ ರಶ್ಮಿ ಎಸ್‌. ಕುಲಾಲ್‌ ಮತ್ತು ರಕ್ಷಾ ಎಸ್‌. ಕುಲಾಲ್‌ ಅವರ ಸಂಪೂರ್ಣ ಸಹಕಾರದೊಂದಿಗೆ ದೇಶಸೇವೆಯಲ್ಲಿ ಧನ್ಯತೆ ಕಾಣುತ್ತಿದ್ದಾರೆ. 

ಚಂದಪ್ಪ ಮೂಲ್ಯರ ಪ್ರೋತ್ಸಾಹ
‘ಸೇನೆಗೆ ಸೇರುವ ನಿಟ್ಟಿನಲ್ಲಿ ಹಲವಾರು ಪರೀಕ್ಷೆಗಳನ್ನು ಎದುರಿಸಬೇಕಿತ್ತು. ಇದಕ್ಕೆಲ್ಲ ಪುಸ್ತಕ-ಅಗತ್ಯ ಸಲಹೆಗಳನ್ನು ನೀಡಿ ಹುರಿದುಂಬಿಸಿದ್ದು ಬಿಎಸ್ಸೆಫ್‌ ಮಾಜಿ ಡೆಪ್ಯುಟಿ ಕಮಾಂಡೆಂಟ್‌ ಆಗಿರುವ ಕನ್ಯಾನದ ಚಂದಪ್ಪ ಮೂಲ್ಯ ಅವರು. ಅವರ ನಿರಂತರ ಪ್ರೋತ್ಸಾಹ ಮತ್ತು ಮನೆಯವರ ಸಹಕಾರದಿಂದಾಗಿ ಸೇವೆಯಲ್ಲಿ ಧನ್ಯತಾಭಾವ ಅನುಭವಿಸುತ್ತಿದ್ದೇನೆ’ ಎನ್ನುತ್ತಾರೆ ಎಂ. ಸಂಜೀವ ಕುಲಾಲ್‌.

ಮಂಜಿನಲ್ಲಿ ನಡೆವ ರೋಮಾಂಚನ
ಬೆಂಗಳೂರಲ್ಲಿ 4 ವರ್ಷ ಪೂರಕ ತರಬೇತಿ ಪಡೆದಿದ್ದ ಸಂಜೀವ್‌ ಅವರಿಗೆ ಮೊದಲು ಕಾಶ್ಮೀರದಲ್ಲಿ ಪೋಸ್ಟಿಂಗ್‌ ಆಗಿತ್ತು. ಆಗಲೇ ಮಂಜಿನಲ್ಲಿ ನಡೆವ ತೀರ ಸವಾಲು ಎದುರಿಸಿದ್ದರು. ಇದಕ್ಕೆಲ್ಲ ಕಷ್ಟ ಪಟ್ಟರೂ, ಈ ಕಷ್ಟ ಮೀರಿ ನಿಂತು ದೇಶಸೇವೆಯನ್ನೇ ಉಸಿರಾಗಿಸಿದ್ದೇನೆ ಎನ್ನುತ್ತಾರೆ. 

ದೇಶ ಸೇವೆ ತುಡಿತ ಪ್ರತಿಯೊಬ್ಬ ಯುವಕರ ಹೃದಯದಲ್ಲಿರಬೇಕು
ದೇಶರಕ್ಷಣೆಯಲ್ಲಿ ನಾನು ತೃಪ್ತ ಪ್ರಾಮಾಣಿಕತೆ ಮತ್ತು ಧನಾತ್ಮಕ ಯೋಚನೆಯೊಂದಿಗೆ ಮುನ್ನಡೆದರೆ ದೇವರು ಸಹಾಯ ಮಾಡುತ್ತಾನೆ. ದೇಶಸೇವೆಯ ತುಡಿತ ಪ್ರತಿ ಯುವಕರ ಹೃದಯದಲ್ಲಿರಬೇಕು. ದೇಶ ರಕ್ಷಣೆಯ ಕೆಲಸದಲ್ಲಿ ನಾನು ತೃಪ್ತಿ ಅನುಭವಿಸುತ್ತಿದ್ದೇನೆ.
– ಎಂ. ಸಂಜೀವ ಕುಲಾಲ್‌, ಬಿಎಸ್‌ಎಫ್ ಸಬ್‌ಇನ್ಸ್‌ಪೆಕ್ಟರ್‌

ಮಕ್ಕಳಿಗೂ ದೇಶಪ್ರೇಮದ ಅರಿವು
ಪತಿ ದೇಶದ ಗಡಿ ಭದ್ರತಾ ಪಡೆಯಲ್ಲಿ ಕಳೆದ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಪತ್ನಿಯಾಗಿ ನನಗೆ ಹೆಮ್ಮೆಯ ವಿಷಯ. ಮನೆಯಲ್ಲಿ ಮಕ್ಕಳಿಗೂ ದೇಶ ಪ್ರೇಮದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
– ರೇಖಾ ಎಸ್‌. ಕುಲಾಲ್‌

– ಧನ್ಯಾ ಬಾಳೆಕಜೆ

►ಯೋಧ ನಮನ 1►ಕ್ಯಾಪ್ಟನ್‌ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ: //bit.ly/2noe3RR

►ಯೋಧ ನಮನ 2► ಕೈತುಂಬ ಸಂಬಳದ ಕೆಲಸಕ್ಕೇ ಗುಡ್‌ಬೈ!: //bit.ly/2ByAZCW

►ಯೋಧ ನಮನ 3►30ನೇ ವಯಸ್ಸಿಗೇ ಉಳಿದವರಿಗೆ ಸ್ಫೂರ್ತಿಯಾದ!: //bit.ly/2E0zx1y

►ಯೋಧ ನಮನ 4►ನೌಕಾಪಡೆ ಜಾಹೀರಾತು ಬದುಕು ತಿರುಗಿಸಿತು!: //bit.ly/2DWurTJ

►ಯೋಧ ನಮನ 5►ಸೇನೆ ಸೇರಲು ಸಂಪತ್ತೂ ಬೇಕಿಲ್ಲ,ಶಿಫಾರಸೂ ಅಗತ್ಯವಿಲ್ಲ !: //bit.ly/2DNF47Z

Advertisement

Udayavani is now on Telegram. Click here to join our channel and stay updated with the latest news.

Next