Advertisement

ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ನೀತಿ ಅಗತ್ಯ

11:21 AM Dec 16, 2018 | Team Udayavani |

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷವಾದರೂ, ಸರ್ವರಿಗೂ ಆರೋಗ್ಯ ಎಂಬುದು ಇಂದಿಗೂ ಘೋಷಣೆಯಾಗಿಯೇ ಉಳಿದಿದೆ. ಆರೋಗ್ಯ ಇಲಾಖೆಯಲ್ಲಿನ ಈ ಸಮಸ್ಯೆ ದೇಶದ ಪ್ರಗತಿಗೆ ದೊಡ್ಡಮಟ್ಟದ ಅಡಚಣೆಯಾಗಿದೆ ಎಂದು ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಟಿ.ಡಿ. ಕೆಂಪರಾಜು ಹೇಳಿದರು. ನಗರದ ಅಖೀಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ(ಆಯುಷ್‌)ಯಲ್ಲಿ ಶನಿವಾರ ಸಂಜೆ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಈಡೇರದ ಬೇಡಿಕೆ: ಆರೋಗ್ಯದ ಕುರಿತು ಬಹುತೇಕ ಮಂದಿಯಲ್ಲಿರುವ ಅಜ್ಞಾನದ ಪರಿಣಾಮ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಪಡೆಯುವಲ್ಲಿ ಭಾರೀ ಹಿನ್ನೆಡೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕಲ್ಪಿಸಬೇಕೆಂಬ ಘೋಷಣೆ ಇಂದಿಗೂ ಈಡೇರಿಲ್ಲ. ಅಲ್ಲದೇ ಭಾರತೀಯ ಆರೋಗ್ಯ ವ್ಯವಸ್ಥೆ ಸಂಪೂರ್ಣ ವೈದ್ಯ ಕೇಂದ್ರಿತವಾಗಿರುವುದರಿಂದ ಆರೋಗ್ಯ ಸೌಲಭ್ಯಗಳ ಕೊರತೆ ಎದುರಿಸುವಂತಾಗಿದೆ ಎಂದರು. 

ಆರೋಗ್ಯ ರಕ್ಷಣೆ ವ್ಯವಸ್ಥೆ: ಈ ಹಿನ್ನೆಲೆಯಲ್ಲಿ ದೇಶದಲ್ಲಿ ಹೊಸ ಆರೋಗ್ಯ ರಕ್ಷಣಾ ನೀತಿಯನ್ನು ಅನುಸರಿಸುವ ಅಗತ್ಯವಿದ್ದು, ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ನೀತಿ ಅಗತ್ಯವಿದೆ. ಅಲ್ಲದೆ ಆರೋಗ್ಯ ವಲಯದ ಬಗ್ಗೆ ಸಾರ್ವಜನಿಕ ಅಭಿಪ್ರಾಯವು ಭಿನ್ನವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಾನವೀಯತೆ ಮತ್ತು ತಾಳ್ಮೆಯ ಅಗತ್ಯವಿದೆ.

ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದ್ದು, ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಯಾವ ಮಗುವಿಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆ ಇರುತ್ತದೆ ಅಂತಹ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ, ಪ್ರೀತಿ ತೋರಬೇಕಾದ ಅಗತ್ಯವಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಎಂಎಸ್ಸಿ ವಿದ್ಯಾರ್ಥಿ ಪ್ರಿಯದರ್ಶಿನಿ ಮೂರು ಚಿನ್ನದ ಪದಕ ಪಡೆದರು. ಈ ಸಂದರ್ಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೆಮಂತ ಕುಮಾರ್‌, ವಿಶ್ರಾಂತ ಕುಲಪತಿ ಪ್ರೊ. ಜೆ. ಶಶಿಧರ ಪ್ರಸಾದ್‌, ಸಂಸ್ಥೆ ನಿರ್ದೇಶಕಿ ಪ್ರೊ. ಎಂ.ಪುಷ್ಪಾವತಿ, ಪ್ರೊ. ಆರ್‌. ರಂಗಸಾಯಿ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next