Advertisement
ಮೊನ್ನೆ ಭರಮಪ್ಪ ಎಂಬ ರೈತನೊಬ್ಬನನ್ನು ಮಾತನಾಡಿಸುತ್ತಿದ್ದೆ. “”ಹೆಸರು ಬಿತ್ತಿದ್ವಿ ಅದು ಕೈಕೊಟ್ಟಿತು. ತೊಗರಿ ಬೆಳೆಗೆ ಮಳೆ ಕೈಕೊಟ್ಟಿತು. ಭಾಳ ವರ್ಷದಿಂದ ಬೆಳೀಗೆ ಸೂಕ್ತ ಬೆಲೆ ಇಲ್ಲದ ಸಂಸಾರ ಹೈರಾಣ ಆಗ್ಯದ ಸರ. ಮೂರು ಹೆಣ್ಣುಮಕ್ಕಳ ಮದುವಿ ಮಾಡಬೇಕು, ಇಬ್ರು ಗಂಡುಮಕ್ಕಳು ಓದಕತ್ಯಾರ ಇಷ್ಟು ಖರ್ಚು ಮಾಡೂದೊಳಗ ಹೈರಾಣ ಆಗೀನ್ರಿ”. ಹೀಗೆಂದು ಆತ ತನ್ನ ತಲೆಯ ಮೇಲಿನ ವಸ್ತ್ರ ಕೆಳಗಿಟ್ಟಾಗ ಆತನ ಕಣ್ಣಾಲಿಗಳು ಒದ್ದೆಯಾದದ್ದು ಕಾಣಿಸಿತು. ಈ ದೇಶದ ಬೆನ್ನೆಲುಬೆಂದು ಕರೆಸಿಕೊಳ್ಳುವ ರೈತನ ನೋವುಗಳನ್ನು ಮಾತ್ರ ನಮಗೆ ನಿಜವಾಗಲೂ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಶಾಶ್ವತ ಮತ್ತು ಸಮಯೋಚಿತ ಯೋಜನೆಗಳಿಲ್ಲದೆ ಈ ದೇಶದ ಬೆನ್ನೆಲುಬು ಮುರಿಯುವುದಕ್ಕೆ ಪ್ರಾರಂಭವಾಗಿದೆ. ಸರಕಾರದ ಕಂದಾಯ ಇಲಾಖೆಯ ವರದಿಯ ಪ್ರಕಾರ ಕರ್ನಾಟಕದಲ್ಲಿ 18.6.2015ರಿಂದ ಜನವರಿ 12, 2016ರವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1002 ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
“ಪೇಟ್ ಕೋ ಆಟಾ ನಹಿ, ಡೇಟಾ ಫ್ರೀ’ ಎನ್ನುವ ಆಧುನಿಕ ಗಾದೆಯಂತೆ ಭಾರತದ ಬಡರಾಜ್ಯಗಳಲ್ಲಿ ಹೊಟ್ಟೆಗೆ ತುತ್ತು ಕೊಡದಿದ್ದರೂ ಉಚಿತ ಇಂಟರ್ನೆಟ್ ಕೊಟ್ಟ ಶ್ರೇಯಸ್ಸು ಸರ್ಕಾರಗಳಿಗೆ ಸಲ್ಲುತ್ತದೆ. ಈ ದಿನಗಳಲ್ಲಿನ ಕೃಷಿ ಉತ್ಪನ್ನಗಳ ಆದಾಯ, ಕನಿಷ್ಠ ಅವುಗಳ ಉತ್ಪಾದನಾ ವೆಚ್ಚಕ್ಕೆ ಸಮನಾಗಿಲ್ಲ. ಸರಾಸರಿ ಪ್ರತಿ ಎಕರೆ ಇಳುವರಿಯ 35 ಚೀಲಕ್ಕೆ ಗುರುತಿಸಿದ ಉತ್ಪಾದನಾ ವೆಚ್ಚ ರೂ.41,385. ಆದರೆ ಬೆಂಬಲ ಬೆಲೆಯಿಂದ ಸಿಗುವ ಮೊತ್ತ ಕೇವಲ 32,338ರೂ ಮಾತ್ರವೇ ಆಗಿದೆ. ಹೀಗಾಗಿ, ಪ್ರತಿ ಎಕರೆಗೆ ಸುಮಾರು 9000 ರೂ ನಷ್ಟ ಉಂಟಾಗುತ್ತದೆ. ಅದೇ ರೀತಿ, ಕಲಬುರಗಿಯ ತೊಗರಿ ಲೆಕ್ಕಾಚಾರ ಗಮನಿಸಿದರೆ, ಸರಕಾರದ ಬೆಂಬಲ ಬೆಲೆ ನಿಗದಿಯು 2,491ರೂ.ಗಳಷ್ಟು ಕಡಿಮೆ ಇದ್ದು, ಪ್ರತಿ ಎಕರೆಗೆ ಸುಮಾರು 7,500ರೂ ನಷ್ಟ ಉಂಟು ಮಾಡುತ್ತದೆ. ರಾಗಿಯ ಪ್ರತಿ ಕ್ವಿಂಟಾಲ… ಉತ್ಪಾದನಾ ವೆಚ್ಚ 2,547ರೂ ಆದರೆ ಬೆಂಬಲ ಬೆಲೆ ಕೇವಲ 1650 ಮಾತ್ರವೇ ಆಗಿದೆ. ಹಾಲು ಪ್ರತಿ ಲೀಟರ್ ಉತ್ಪಾದನಾ ವೆಚ್ಚ 31.50ರೂ ಆಗಿದ್ದರೆ, ಬೆಲೆಯು ಕೇವಲ 21.10 ಮತ್ತು 4ರೂ ಮಾತ್ರವೇ ಆಗಿದೆ. ರಾಗಿ ಮತ್ತು ಬಿಳಿಜೋಳದ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಕ್ರಮವಾಗಿ 1,590 ಮತ್ತ 1,650. ಎಂದರೆ, ಸದರಿ ಬೆಳೆಗಳನ್ನು ಒಂದೆಡೆ 2000ರೂ ದರದಲ್ಲಿ ಖರೀದಿಸುವಂತೆ ಕರ್ನಾಟಕ ಕೃಷಿ ಬೆಲೆ ಆಯೋಗ ರಾಜ್ಯ ಸರಕಾರಕ್ಕೆ ಸೂಚಿಸುತ್ತದೆ. ಮತ್ತೂಂದೆಡೆ, ಅವುಗಳ ಲೆಕ್ಕಾಚಾರವನ್ನು ರೈತರ ಸಮ್ಮುಖದಲ್ಲಿ ಲೆಕ್ಕಿಸುವಾಗ ಅದು 2500ಕ್ಕೂ ಹೆಚ್ಚಾಗಿದೆಯೆಂದು ಹೇಳುತ್ತದೆ.
Related Articles
Advertisement
ಜೀವನ ನಿರ್ವಹಣೆಗೆ ಆದಾಯವಿಲ್ಲದಿರುವಾಗ ರೋಗರುಜಿನಗಳಿಗೆ ಮತ್ತು ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಹಬ್ಬಗಳು ಮುಂತಾದವುಗಳ ವೆಚ್ಚವೂ ಮತ್ತೂಂದು ದೊಡ್ಡ ಸಾಲವಾಗಿ ಎರಗುತ್ತದೆ. ರೈತರು ಸಾಲಬಾಧೆ ಎದುರಿಸುವುದು, ಆತ್ಮಹತ್ಯೆಗೆ ಮೊರೆ ಹೋಗುವುದರ ಹಿಂದೆ ಈ ಅಂಶಗಳೆಲ್ಲ ಅಡಗಿರುವುದು ಸ್ಪಷ್ಟವಾಗುತ್ತದೆ. ಯಾರೋ ಕೆಲವರು ಹೊಟ್ಟೆ ತುಂಬಿದವರು ಮತ್ತು ಕೃಷಿಯಲ್ಲಿ ತೊಡಗದ ಕೆಲ ಭೂಮಾಲಕರು ಜೂಜಾಡುವುದನ್ನು ಮತ್ತು ದುಂದು ವೆಚ್ಚ ಮಾಡುತ್ತಿರುವುದನ್ನು ನೋಡಿ ಎಲ್ಲಾ ರೈತರೂ ಹೀಗೇ ಮಾಡುತ್ತಾರೆ. ಜೂಜಾಡಿ ಹಣ ಕಳೆದುಕೊಂಡು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದೇ ಅವರ ಆತ್ಮಹತ್ಯೆಗಳಿಗೆ ಕಾರಣ ಎಂದು ಹೇಳುವುದು ಅನ್ನದಾತನಿಗೆ ಮಾಡುವ ಅವಮಾನವಾಗುತ್ತದೆ ಮತ್ತು ಹಾಗೆ ಹೇಳುವವರಿಗೆ ವಾಸ್ತವದಲ್ಲಿ ಇರುವ ಅಜ್ಞಾನವನ್ನು ಅದು ತೋರಿಸುತ್ತದೆ. ಈ ದಿನಗಳ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಳು ಮತ್ತು ಮಾರುಕಟ್ಟೆ ಬೆಲೆಗಳು ವಿವಿಧ ರಾಜ್ಯಗಳ ಸರಾಸರಿ ಉತ್ಪಾದನಾ ವೆಚ್ಚವನ್ನು ಮತ್ತು ಇಳುವರಿಯನ್ನು ಆಧರಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಬದಲಿಗೆ, ಬಹುತೇಕ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಮತ್ತು ಭಾರತದ ಕೃಷಿಯನ್ನು ಮತ್ತು ಗ್ರಾಹಕ ಮಾರುಕಟ್ಟೆಯನ್ನು ಸ್ವಾಧೀನ ಮಾಡಿಕೊಳ್ಳುವ ಅವುಗಳ ತಂತ್ರದ ಏರಿಳಿತಗಳನ್ನವಲಂಬಿಸಿವೆ.
ಮತ್ತೂಂದು ಪ್ರಮುಖ ಸಮಸ್ಯೆ ಎಂದರೆ, ಕನಿಷ್ಠ ಬೆಂಬಲ ಬೆಲೆ ನಿಗದಿ. ಕೇಂದ್ರ ಸರಕಾರ ಇದನ್ನೂ ಕೂಡ ಅತ್ಯಂತ ಅವೈಜ್ಞಾನಿಕವಾಗಿ ಲೆಕ್ಕಿಸಿ ನಿಗದಿಸುತ್ತದೆ. ಈಚೆಗೆ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ ಕರ್ನಾಟಕ ಕೃಷಿ ಬೆಲೆ ಆಯೋಗ ಕೇಂದ್ರ ಸರಕಾರದ ಬೆಲೆ ನಿಗದಿಯ ದೋಷಗಳನ್ನು ಬಯಲಿಗೆಳೆದಿದೆ. ಅದು ಕರ್ನಾಟಕದ ರಾಗಿ ಮತ್ತು ಜೋಳದ ಕುರಿತ ಲೆಕ್ಕಾಚಾರ ಮಾಡಿದ ಅಂಶಗಳನ್ನು ಎತ್ತಿ ತೋರಿಸಿದೆ. 2010-11ರಲ್ಲಿ ಆರ್ಥಿಕ ನಿರ್ದೇಶನಾಲಯ ಪ್ರತಿ ಕ್ವಿಂಟಾಲ್ ರಾಗಿ ಮತ್ತು ಜೋಳದ ವೆಚ್ಚವನ್ನು ಕ್ರಮವಾಗಿ 1,566 ಮತ್ತು 1,992 ಎಂದರೆ, ಬೆಂಬಲ ಬೆಲೆಯು ಕೇವಲ ಅನುಕ್ರಮವಾಗಿ 613 ಮತ್ತು 900ರೂ ಎಂದು ತಿಳಿಸಿದೆ. ಅದೇ ರೀತಿ, ಕೇಂದ್ರ ಸರಕಾರದ ಬೆಂಬಲ ಬೆಲೆಗಳು ಮಾತ್ರವೇ ಅಲ್ಲ, ರಾಜ್ಯ ಸರಕಾರಕ್ಕೆ ಬೆಲೆಗಳನ್ನು ಸೂಚಿಸುವಾಗ ಕರ್ನಾಟಕ ಕೃಷಿ ಬೆಲೆ ಆಯೋಗ ತಾನು ಅದಕ್ಕಿಂತ ಭಾರೀ ಭಿನ್ನವಾಗಿಲ್ಲವೆಂಬುದನ್ನು ತೋರಿಸಿಕೊಂಡಿದೆ. ನಾವುಗಳು ಹಲವು ಸಂದರ್ಭಗಳಲ್ಲಿ ಗುರುತಿಸಿದ ಲೆಕ್ಕಾಚಾರಗಳೂ ಕೂಡ ಗಂಭೀರ ಕೊರತೆಗಳನ್ನೊಳಗೊಂಡಿವೆ.
ವೈಜ್ಞಾನಿಕವಾಗಿ ಗುರುತಿಸಲಾಗಿದೆಯೆನ್ನುವ ರೇಷ್ಮೆ ತಾಂತ್ರಿಕ ಸಮಿತಿಯ ರೇಷ್ಮೇ ಗೂಡಿನ ಉತ್ಪಾದನಾ ವೆಚ್ಚವೂ ಹಲವು ಕೊರತೆಗಳನ್ನೊಳಗೊಂಡಿದೆ. ಇತ್ತೀಚೆಗೆ, ವಿದೇಶಿ ಕೃಷಿ ಉತ್ಪನ್ನಗಳ ಬೆಲೆಗಳನ್ನು ಗಮನದಲ್ಲಿರಿಸಿಕೊಂಡು ಬೆಲೆ ನಿಗದಿಸುವ ಪ್ರವೃತ್ತಿಯನ್ನು ಕೇಂದ್ರ ಸರಕಾರ ತೋರಿಸುತ್ತಿದೆ. ಉದಾಹರಣೆಗೆ, ಸಕ್ಕರೆ ಕೈಗಾರಿಕೆಗಳ ಮಾಲೀಕರ ಸಂಘವು ಕಬ್ಬಿಗೆ ಬೆಲೆಯನ್ನು ಅದರ ವೈಜ್ಞಾನಿಕವಾದ ಉತ್ಪಾದನಾ ವೆಚ್ಚವನ್ನನುಸರಿಸಿ ನಿಗದಿಸದೇ ರಂಗರಾಜನ್ ವರದಿಯಂತೆ ಅಂದಿನ ಮಾರುಕಟ್ಟೆಯಲ್ಲಿನ ಸಕ್ಕರೆ ಬೆಲೆಯ ಶೇ 65-70 ಎಂದು ನಿಗದಿಸಲು ಒತ್ತಾಯಿಸುತ್ತಿದೆ. ಅದೇ ರೀತಿ, ಕೇಂದ್ರ ಸರಕಾರ ನಿಗದಿಸುವ ಬೆಲೆಗಳು ಉತ್ಪಾದನಾ ವೆಚ್ಚಕ್ಕೆ ಹೋಲಿಸಿದಲ್ಲಿ ಬಹಳ ಕಡಿಮೆ ಮತ್ತು ಅವೈಜ್ಞಾನಿಕ ಬೆಲೆ. ಕೆಲ ರಾಜ್ಯಗಳು, ಉದಾಹರಣೆಗೆ ಕೇರಳ ಮತ್ತು ಕರ್ನಾಟಕ ಭತ್ತ ಕಬ್ಬು ಬೆಳೆಗಳಿಗೆ ಹೆಚ್ಚುವರಿ ಬೆಲೆಗಳನ್ನು ಘೋಷಿಸಿದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಮೊದಲು ಹೆಚ್ಚುವರಿ ನಿಗದಿಸಲಾದ ಬೆಲೆಗಳ ಮೌಲ್ಯವನ್ನು ರಾಜ್ಯಗಳೇ ಭರಿಸಬೇಕಾಗುತ್ತದೆಂದು ಬೆದರಿಸಿತು. ಮತ್ತು ಇದೀಗ ಅವರಿಗೆ ನೀಡುವ ಅನುದಾನವನ್ನು ಕಡಿತ ಮಾಡಲಾಗುವುದೆಂದು ಗುಟುರುಹಾಕುತ್ತಿದೆ. ಹೀಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ವೈಜ್ಞಾನಿಕವಾದ ಬೆಲೆ ಘೋಷಿಸಿ ಅದನ್ನು ಖಾತರಿಯಾಗಿ ದೊರೆಯುವಂತೆ ಮಾಡಲು ಉದ್ದೇಶ ಪೂರ್ವಕವಾಗಿಯೇ ನಿರಾಕರಿಸುತ್ತಿವೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದೆನಿಸುವುದಿಲ್ಲವೆ?
– ಕೆ.ಎಂ.ವಿಶ್ವನಾಥ, ಮರತೂರ