Advertisement

ಸಚ್ಚತಾ ಕಾರ್ಯಸ್ವಚ್ಛ ಮನಸ್ಸಿನಿಂದ ಪರಿಪೂರ್ಣ: ಸುಧಾರಾಣಿ

10:44 AM Oct 03, 2017 | |

ಬಾವುಟಗುಡ್ಡೆ: ಬೀದಿಯಲ್ಲಿ ಬಿದ್ದಿರುವ ಕಸವನ್ನು ಗುಡಿಸಿ ಸ್ವಚ್ಛ ಮಾಡುವುದರಿಂದ ಸ್ವಚ್ಚತೆ ಪೂರ್ಣವಾಗದು. ಮನಸ್ಸಿನಲ್ಲಿರುವ ಅಹಂ, ದುರಾಸೆ, ಸ್ವಾರ್ಥಗಳನ್ನು ಸ್ವಚ್ಚ ಮಾಡಿದರೆ ನಿಜಾರ್ಥದಲ್ಲಿ ಶುಚಿತ್ವ ಕಾರ್ಯ ಪರಿಪೂರ್ಣವಾಗುತ್ತದೆ ಎಂದು ಆಳ್ವಾಸ್‌ ಕಾಲೇಜು ಉಪನ್ಯಾಸಕಿ ಸುಧಾರಾಣಿ ಅಭಿಪ್ರಾಯಪಟ್ಟರು.

Advertisement

ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ನಗರದ ಟಾಗೋರ್‌ ಪಾರ್ಕ್‌ನಲ್ಲಿ ಸೋಮವಾರ ನಡೆದ ಮಹಾತ್ಮಾಗಾಂಧಿ 150ರ ಪೂರ್ವಭಾವಿ ಸಂಭ್ರಮದಲ್ಲಿ 147ನೇ ಜನ್ಮ ದಿನಾಚರಣೆ ಮತ್ತು ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಗಾಂಧೀಜಿಯವರ ಸಿದ್ಧಾಂತಗಳನ್ನು ಪ್ರಸ್ತುತ ಸಂಕುಚಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆಗ ಅವರು ನೀಡಿದ ಸಿದ್ಧಾಂತಗಳನ್ನು ಈಗಿನ ಕಾಲದಲ್ಲಿ ಅಳೆಯುವುದು, ಟೀಕಿಸುವುದು ನಾಗರಿಕ ಸಮಾಜದಲ್ಲಿ ಉತ್ತಮ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ಎಲ್ಲ ಮಹಾನ್‌ ವ್ಯಕ್ತಿಗಳ ಜಯಂತಿಗಳನ್ನು ಆಚರಿಸಿ ವಿಶ್ವ ಮಾನವರನ್ನು ಜಾತಿ, ಧರ್ಮಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಆದರ್ಶಗಳನ್ನು ಕೊಟ್ಟು ಹೋದ ವ್ಯಕ್ತಿಗಳನ್ನು ಹೀಗೆ ಸಂಕುಚಿತಗೊಳಿಸುವ ಪ್ರಯತ್ನ ಮಾಡದೆ, ಸಮಗ್ರ ಸ್ವರೂಪಿಯಾಗಿ ಮಾನವತಾ ವಾದದಂತೆ ನಡೆಯುವ ಮನಸ್ಥಿತಿ ನಮ್ಮದಾಗಬೇಕು ಎಂದು ಅವರು ಆಶಿಸಿದರು.

ಪ್ರಶಸ್ತಿ ಪ್ರದಾನ
ಪ್ಲಾಸ್ಟಿಕ್‌ ತ್ಯಾಜ್ಯದ ನಿರ್ಮೂಲನೆ ಬಗೆಗೆ ಗ್ರಾಮೀಣ ಜನರಿಗೆ ಪ್ರೇರಕಿಯಾದ ಪುತ್ತೂರು ಆಲಂಕಾರು ಚಾಮೆತ್ತಡ್ಕದ ಪ್ರೇಮಾ ಅವರಿಗೆ ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವವನ್ನು ಪ್ರದಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಪ್ರೇಮಾ, ‘ಪ್ಲಾಸ್ಟಿಕ್‌ ಉಪಯೋಗದಿಂದ ಇಡೀ ಪರಿಸರ ಕಲುಷಿತಗೊಳ್ಳುವುದರೊಂದಿಗೆ ಜೀವಚರಗಳಿಗೂ ತೊಂದರೆ ಉಂಟಾಗುತ್ತದೆ. ವಿಷಕಾರಿ ಪ್ಲಾಸ್ಟಿಕ್‌ ಬಳಸದಂತೆ ಪ್ರತಿ ತಾಯಂದಿರು ತಮ್ಮ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಮನೆಯಲ್ಲಿ ದೊರೆ ಯುವ ಜಾಗೃತಿಯು ಊರು, ಗ್ರಾಮ, ಸಮಾಜ, ಆ ಮೂಲಕ ದೇಶವನ್ನು ಸ್ವಚ್ಚವಾಗಿಡಲು ಸಹಕಾರಿಯಾಗಬಲ್ಲದು’ ಎಂದರು.

Advertisement

ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟರ್‌ ಎ.ಸಿ. ವಿನಯರಾಜ್‌ ಮುಖ್ಯ ಅತಿಥಿಯಾಗಿದ್ದರು. ಕಾರ್ಯದರ್ಶಿ ಡಾ| ಇಸ್ಮಾಯಿಲ್‌ ಎನ್‌. ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next