Advertisement

ಮರೆಯಾಯಿತೇ ಪಕ್ಷಗಳ ಕಾರ್ನರ್‌ ಮೀಟಿಂಗ್‌!

02:24 PM May 08, 2023 | Team Udayavani |

ಉಡುಪಿ: ಚುನಾವಣ ಕಾಲದ ಭಾಷಣಗಳಿಗೆ ಈಗ ಬರಗಾಲ ಬಂದಂತಿದೆ. ಸುಮಾರು 15ರಿಂದ 20 ವರ್ಷಗಳ ಹಿಂದೆ ಚುನಾವಣೆ ಅಂದರೆ ಹಳ್ಳಿ ಹಳ್ಳಿಗಳಲ್ಲಿ ಭಾಷಣ ಗಳದ್ದೇ ಹಾವಳಿ. ಹಳ್ಳಿಗಳಲ್ಲಿ ಪ್ರತಿ ವಾರದ ಸಂತೆಯ ದಿನದಂದು ರಾಜಕೀಯ ಪಕ್ಷಗಳ ಪ್ರಚಾರದ ಸಲುವಾಗಿಯೇ ಇರುವ ಸ್ಥಳೀಯ ಭಾಷಣಗಾರರನ್ನು ಕರೆಸಿ ಕೊಂಡು ಅವರಿಂದ ಭಾಷಣ ಮಾಡಿಸುವುದು ನಡೆಯುತ್ತಿತ್ತು, ಅವರ ಭಾಷಣಗಳನ್ನು ಕೇಳುವುದೇ ತುಂಬಾ ತಮಾಷೆ ವಿಷಯವಾಗಿತ್ತು. ಅವರ ಮಾತು ಕೇಳಲೆಂದೇ ಪ್ರತೀ ಊರುಗಳಲ್ಲಿ 300ರಿಂದ 500ಕ್ಕೂ ಮಿಕ್ಕಿ ಜನರು ಸೇರುತ್ತಿದ್ದ ಕಾಲವದು.

Advertisement

ಕಾಲ ಕಳೆದ ಹಾಗೆ ಸ್ಥಳೀಯ ಮಟ್ಟದ ಭಾಷಣಗಳು ಕಡಿಮೆಯಾಗುತ್ತಾ ಬಂದಿದೆ. ಇದಕ್ಕೇನು ಕಾರಣ ಅನ್ನುವುದನ್ನು ನೋಡಿದಾಗ ಬಹು ಮುಖ್ಯವಾಗಿ ಪ್ರತಿಯೊಬ್ಬರ ಕೈಗೊಂದು ಸ್ಮಾರ್ಟ್‌ ಫೋನ್‌ ಬಂದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿಯೇ ಜನರನ್ನು ಸುಲಭದಲ್ಲಿ ತಲುಪಬಹುದು ಅನ್ನುವುದು ಪ್ರತೀ ಪಕ್ಷಗಳ ಇರಾದೆಯಾಗಿದೆ. ಆಗ ರಾತ್ರಿ 10ರಿಂದ 11 ಗಂಟೆ ವರೆಗೂ ಭಾಷಣ ಸಭೆಗಳು ನಡೆಯುತ್ತಿತ್ತು. ಜನ ಸೇರಿಸಲು ಬೆಳಗ್ಗಿನಿಂದಲೇ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿತ್ತು.

ಜನ ಸೇರುತ್ತಿದ್ದೆಡೆ ಸಭೆ
ಪ್ರಚಾರ ಭಾಷಣ ಸಭೆಯಲ್ಲಿ ಆಯಾಯ ಪಕ್ಷದ ಕಾರ್ಯಕರ್ತರು ಭಾಷಣ ನಡೆಸುವ ಸ್ಥಳದ ಸುತ್ತಮುತ್ತಲ ಭಾಗ ಮತ್ತು ಆ ಊರಿನಲ್ಲಿ ಬ್ಯಾನರ್‌ಗಳನ್ನು ಕಟ್ಟುತ್ತಿದ್ದರು. ಭಾಷಣಕ್ಕೆ ಬರುವ ಸ್ಟಾರ್‌ ಪ್ರಚಾರಕರು (ರಾಷ್ಟ್ರ, ರಾಜ್ಯಮಟ್ಟದ ಪಕ್ಷದ ಮುಖಂಡರು, ಚಿತ್ರನಟರು, ಪಕ್ಷದ ಅಭ್ಯರ್ಥಿ, ಸ್ಥಳೀಯ ನಾಯಕರು) ವೇದಿಕೆಯಲ್ಲಿ ಪಕ್ಷದ ಚಿನ್ಹೆಯುಳ್ಳ ಶಾಲನ್ನು ಹಾಕಿಕೊಂಡು ಪ್ರಚಾರ ಭಾಷಣಕ್ಕೆ ಮುಂದಾಗುತ್ತಿದ್ದರು.

ಪ್ರಸ್ತುತ ಇವೆಲ್ಲವೂ ಕಾಲಗರ್ಭದಲ್ಲಿ ಲೀನವಾಗಿದ್ದು ರಾಷ್ಟ್ರಮಟ್ಟದ ನಾಯಕರನ್ನು ಜಿಲ್ಲಾ ಕೇಂದ್ರಗಳಿಗೆ ಕರೆಸಿಕೊಂಡು ಭಾಷಣ, ರ್ಯಾಲಿ ಗಳನ್ನು ಮಾಡುವ ಮೂಲಕ ಮತದಾರರನ್ನು ಆಕರ್ಷಿಸುವ ತಂತ್ರಗಾರಿಕೆಗೆ
ಪಕ್ಷಗಳು ಹೆಚ್ಚು ಆಸಕ್ತಿ ತೋರಿಸುತ್ತಿವೆ.

ಅಲ್ಲದೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಭಾಷಣ ಕೇಳುವ ಆಸಕ್ತಿಯನ್ನು ಮತದಾರರು ಕಳೆದುಕೊಂಡಿ¨ªಾರೆ ಅನ್ನು ವುದೂ ಅಷ್ಟೇ ಸತ್ಯ. ಇಂದು ಪಕ್ಷಗಳ ಕಾರ್ಯಕರ್ತರ ಪಡೆ ಹೆಚ್ಚು ಇರುವ ಕಾರಣ ಮನೆ ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡುವ ದಾರಿ ತುಳಿಯುತ್ತಿದ್ದಾರೆ.

Advertisement

ಮನೆ ಮನೆಗೆ ಅಲೆದು ಮತ ಕೇಳುವ ಕಾರ್ಯಕರ್ತರಿಗಿಂತ ನಾಯಕರೇ ಹೆಚ್ಚಿರುವ ಕಾರಣ ಇದೂ ಅಚ್ಚು ಕಟ್ಟಾಗಿ ನಡೆಯುತ್ತದೆ ಎಂದು ಹೇಳುವಂತಿಲ್ಲ. ಹವಾ ನಿಯಂತ್ರಿತ ಕಾರುಗಳಲ್ಲಿ ಓಡಾಡುವ ಜನರಿಗೆ ಮನೆಮನೆ ಭೇಟಿ ನೀಡುವುದೂ ಈ ಬೇಸಗೆಯ ಧಗೆಯಲ್ಲಿ ಕಷ್ಟಸಾಧ್ಯವೇ ಸರಿ.

ಕುಡುಕರೂ ಸತ್ಯ ನುಡಿಯುತ್ತಿದ್ದರೆ?
ತಮಾಷೆ ಎಂದರೆ ಕುಡಿದ ಮತ್ತಿನಲ್ಲಿದ್ದ ಒಬ್ಬರೋ ಇಬ್ಬರು ವ್ಯಕ್ತಿಗಳು ಮುಖಂಡರು ಭಾಷಣ ಮಾಡಿದ ತುಣುಕನ್ನು ಹೆಕ್ಕಿ ಸಭೆಯ ಎದುರಿನಲ್ಲೇ ಕೂಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಮತ್ತೆ ಕಾರ್ಯಕರ್ತರು ಆತನನ್ನು ಸಮಾಧಾನಪಡಿಸಿ ಭಾಷಣ ಸಭಾ ಸ್ಥಳದಿಂದ ಕರೆದುಕೊಂಡು ಹೋಗುತ್ತಿದ್ದರು. “ವಿಪಕ್ಷದವರು ಭ್ರಷ್ಟಾಚಾರ ದಲ್ಲಿ ಮುಳುಗಿದ್ದಾರೆ’ ಎಂದು ಭಾಷಣ ಕಾರರು ಹೇಳಿದರೆ ಅದನ್ನೇ ಅವರು ಪುನರು ತ್ಛರಿಸುತ್ತಿದ್ದರು. ಬೇರೆ ಬೇರೆ ಪಕ್ಷದ ಕುಡುಕ ರಿಬ್ಬರ ನಡುವೆ ಸಣ್ಣಪುಟ್ಟ ಗಲಾಟೆ ಪ್ರಸಂಗವೂ ನಡೆಯುತ್ತಿತ್ತು. ಆಗ ಅವರು ತಮ್ಮ ಪಕ್ಷದ ಹೆಸರು ಹೇಳಿ ಜೋರಾಗಿ ಅರಚುತ್ತಿದ್ದರು. ಭಾಷಣ ಮಾಡುವಾಗ ನಾನು “ಕ್ಷೇತ್ರದಲ್ಲಿ ಅಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ’ ಎಂದು ಪಕ್ಷದ ನಾಯಕರು ಹೇಳಿದರೆ, ಇಲ್ಲಿ ಕೆಳಗಿನಿಂದ ಇನ್ನೊಬ್ಬ “ಎಲ್ಲ ಸುಳ್ಳು’ ಎಂದು ಕೂಗುತ್ತಿದ್ದ.

-ಎಸ್‌.ಜಿ. ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next