ಅದೊಂದು ಭಾನುವಾರ. ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿ “ಸೀನಿಯರ್’ ಪಟ್ಟಗಳಿಸಿದ ಮೇಲಂತೂ ಒಂದು ಭಾನುವಾರವನ್ನೂ ಸುಮ್ಮನೆ ಕಳೆಯಲಾಗದೆ, ಎಲ್ಲಿಗಾದರೂ ಹೋಗಬೇಕು ಅಥವಾ ಏನನ್ನಾದರೂ ಮಾಡಬೇಕು ಎಂದು ನಾವು ಪ್ಲಾನ್ ಹಾಕುತ್ತಿರುತ್ತೇವೆ. ಅಂತೆಯೇ ಅಂದು ಎಲ್ಲಿಯೂ ಹೋಗಲಾಗದ ಕಾರಣ ಏನನ್ನಾದರೂ ಮಾಡೋಣ ಎಂದು ನಿರ್ಧರಿಸಿದೆವು. ಅಂತಿಮವಾಗಿ ಒಂದು ಪ್ಲಾನ್ ಓಕೆಯಾಯ್ತು. ಅದು ನನ್ನ ಮಟ್ಟಿಗಂತೂ ಅಂತಿಂಥ ಪ್ಲಾನ್ ಅಲ್ಲ. ಕಳ್ಳತನ… “ಜೋಳ’ದ ಕಳ್ಳತನ…
ನಮ್ಮ ಹುಡುಗರು ಇರುವ ಇನ್ನೊಂದು ಹಾಸ್ಟೆಲ್‌ನ ಸುತ್ತ ಮೆಕ್ಕೆ ಜೋಳ ಸಮೃದ್ಧವಾಗಿ ಬೆಳೆದಿತ್ತು. ಅಷ್ಟೇ ಸಾಕಿತ್ತು ನಮಗೆ. ಮಾಸ್ಟರ್ ಪ್ಲಾನ್ ರೆಡಿ. ಇಂದು ಜೋಳ ಕದ್ದು ಬೇಯಿಸೋಣ ಎಂಬ ಗೆಳೆಯನ ಮಾತಿಗೆ ಸರ್ವರ ಸಮ್ಮತಿಯೂ ದೊರೆಯಿತು. ಕತ್ತಲು ಯಾವಾಗ ಆಗುತ್ತೋ ಅಂತ ಕಾಯುತ್ತಿದ್ದೆವು. ಸಂಜೆ ಮಸುಕಾಗುತ್ತಿದ್ದಂತೆ ಕೆಳಗಿನ ಹಾಸ್ಟೆಲ್‌ನವರಾದ ನಾವು ಮೇಲಿನ ಹಾಸ್ಟೆಲ್‌ಗೆ ಯಾವುದೋ ಮಹತ್ಕಾರ್ಯಕ್ಕೆ ಹೋಗುವವರಂತೆ ಹೋದೆವು. ಮುಖದಲ್ಲಿ ಕ್ಷಾತ್ರ ತೇಜಸ್ಸು! ಎಲ್ಲಾ ಒಂದೆಡೆ ಸೇರಿ ಯಾರು ಜೋಳ ಕೀಳಲು ಹೋಗಬೇಕು, ಯಾರ್ಯಾರು ಜೊತೆಯಲ್ಲಿ ಹೋಗಬೇಕೆಂದು ಫಿಕ್ಸಾಯಿತು.
ಹಾಸ್ಟೆಲ್‌ನ ಹುಡುಗರು ಈಗಾಗಲೇ ಇಂತಹ ಸಾಹಸವನ್ನು (ಯಾರ ಕಣ್ಣಿಗೂ ಬೀಳದಂತೆ, ತಂತಿ ಬೇಲಿಯಿರುವ ಎತ್ತರದ ಕಾಂಪೌಂಡ್ ಹಾರಿ ಎಲ್ಲರಿಗೂ ಸಾಕಾಗುವಷ್ಟು ಜೋಳ ಕದಿಯುವ ಕಾರ್ಯ ಸಾಹಸವೇ ಸರಿ) ಮಾಡಿದ್ದರಿಂದ ನಮಗೆ ಹೆಚ್ಚು ಕಷ್ಟ ಎನಿಸಲಿಲ್ಲ. ಇಬ್ಬರು ಹೊಟ್ಟೆಯಲ್ಲಿ ಬ್ಯಾಗ್ ಇಟ್ಟುಕೊಂಡು ತಂತಿ ಬೇಲಿ ತೂರಿ, ಕಾಂಪೌಂಡ್ ಹಾರಿ, ಒಳಗೆ ನುಗ್ಗಿಯೇಬಿಟ್ಟರು. ನಾನು, ಮತ್ತಿಬ್ಬರು ಆಚೆ ಯಾರಾದರೂ ಬಂದರೆ ಸೂಚನೆ ನೀಡುವ ಗುಪ್ತಚರದಳದವರಾದೆವು.
ತುಂಬಾ ಸಮಯ ಕಳೆಯಿತು. ಒಳ ಹೋದವರ ಸುಳಿವೇ ಇಲ್ಲ. ಆಮೇಲೆ ಜೋಳದ ಗಿಡಗಳ ನಡುವೆ ಯಾರೋ ನಡೆದು ಬರುವ ಸಪ್ಪಳವಾಯಿತು. ಅವರಿಬ್ಬರು ಇನ್ನೇನು ಹೊರಗೆ ಬರುವಷ್ಟರಲ್ಲೇ ಯಾರೋ ಬರುತ್ತಿದ್ದನ್ನು ಗಮನಿಸಿ ನಮಗೆ ಗಾಬರಿ! ಆದರೂ ಏನೂ ಆಗಿಲ್ಲವೇನೋ ಎಂಬಂತೆ ಕ್ಲಾಸಿನ ವಿಚಾರಗಳನ್ನು ಗಂಭೀರವಾಗಿ ಮಾತನಾಡತೊಡಗಿದೆವು. ಬಂದವರು ಪರಿಚಿತರೇ ಆಗಿದ್ದರು. ನಮ್ಮ ಆತಂಕ ದೂರವಾಯಿತು. ಬೆವರುತ್ತಿದ್ದ ಮೈ ತಣ್ಣಗಾಯಿತು. ಕಳ್ಳತನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಆಗಲೇ ನನಗೆ ಗೊತ್ತಾಗಿದ್ದು. ಅವರು ಹೋದ ನಂತರ ಕೊಂಚವೇ ದೂರವಿದ್ದ ಗೆಳೆಯರಿಗೆ ಸಣ್ಣಗೆ ವಿಷಲ್ ಹಾಕಿ ಹೊರಕರೆದೆವು. ಆಗ ಬಂದರು ಗಂಟಿನ ಸಮೇತ. ಎರಡು ಬ್ಯಾಗಿನ ತುಂಬಾ ಜೋಳವನ್ನು ತುಂಬಿಕೊಂಡು ಬಂದಿದ್ದರು.
ಇನ್ನು ಹೆದರುವ ಅಗತ್ಯವಿರಲಿಲ್ಲ. ಹೊರಗೆ ಬೆಂಕಿ ಹಾಕಿ ಬೇಯಿಸಿದರೆ ಖಂಡಿತ ಸಿಕ್ಕಿಬೀಳುತ್ತೇವೆ ಎಂದು ಮೊದಲೇ ಯೋಚಿಸಿ, ಗೆಳೆಯನ ಗ್ಯಾಸ್ ಸ್ಟೌನಲ್ಲೇ ಬೇಯಿಸಲು ಅಣಿಯಾದವು. ಆ ಸ್ಟೌಗೆ ಅದ್ಯಾವ ದೆವ್ವ ಹಿಡಿದಿತ್ತೋ ಗೊತ್ತಿಲ್ಲ. ಸಣ್ಣಗೆ, ಆಮೆಯ ನಡಿಗೆಯಂತೆ ನಿಧಾನವಾಗಿ ಬೆಂಕಿಯುಗುಳುತ್ತಿದ್ದ ಅದು ನಮಗೆ ಒಂದು ಕಡೆ ವರ, ಮತ್ತೂಂದು ಕಡೆ ಶಾಪ. ಸುಮಾರು ಇಪ್ಪತ್ತು ಜೋಳದ ತೆನೆಗಳನ್ನು ಬೇಯಿಸಲು ಅದು ತೆಗೆದುಕೊಂಡ ಸಮಯ ಬರೋಬ್ಬರಿ ಎರಡೂವರೆ ಗಂಟೆ. ಅದರೂ ಸರಿಯಾಗಿ ಬೆಂದಿರಲಿಲ್ಲ. ಸಮಯ ಮೀರುತ್ತಿದ್ದುದರಿಂದ ಎಷ್ಟು ಅರ್ಧಂಬರ್ಧ ಬೆಂದಿದ್ದರೂ ಪಾತ್ರೆ ಕೆಳಗಿಳಿಸಿ, ಸ್ಟೌ ಆರಿಸಿದೆವು. ಜೋಳಗಳಿಗೆ ಉಪ್ಪು, ಖಾರ ಸವರಿ, ಪ್ರತಿಯೊಬ್ಬರೂ ಎರಡೆರಡು ಜೋಳ ತಿಂದೆವು. ಕದ್ದು ತಿಂದ ವಸ್ತು ಹೇಗಿದ್ದರೂ ಚೆನ್ನ ಅನ್ನೋದು ಅವತ್ತು ಅರ್ಥ ಆಯ್ತು.
ಎಸ್.ಎನ್. ಗೋವರ್ಧನ, ಶಿರಾ