ಕಲಬುರಗಿ/ಶಹಾಬಾದ: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭರಣಿ ಮಳೆ ಬಿಸಿಲ ಧಗೆಯಿಂದ ಬೇಸತ್ತ ಜನರಿಗೆ ತಂಪಿನ ಸಿಂಚನ ನೀಡಿದೆ. ಸಂಜೆ ಐದು ಗಂಟೆಗೆ ಗುಡುಗು ಸಹಿತ ಪ್ರಾರಂಭವಾದ ಮಳೆ ಸುಮಾರು ಎರಡು ಗಂಟೆವರೆಗೆ ಸುರಿಯಿತು. ಬೇಸಿಗೆ ಬಿರು ಬಿಸಿಲಿನಿಂದ ಕಾಯ್ದ ಭೂಮಿಯನ್ನು ಮಳೆ ತಂಪಾಗಿಸಿತು.
ರಸ್ತೆಯಲ್ಲಿದ್ದ ತಗ್ಗು ಗುಂಡಿಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪದಿಂದ ಬಳಲುತ್ತಿದ್ದ ಬಿಸಿಲೂರಿನ ಜನರು ಶುಕ್ರವಾರ ಸಂಜೆ ಸುರಿದ ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. 42ರಿಂದ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲೆಯಿಂದ ಜನ ತತ್ತರಿಸಿ ಹೋಗಿದ್ದರು.
ಗುರುವಾರ ಸ್ವಲ್ಪ ಬಿಸಿಲಿನ ಪ್ರಖರತೆ ತಗ್ಗಿತ್ತು. ಶುಕ್ರವಾರ ಸಂಜೆ 4:00 ರ ಸುಮಾರಿಗೆ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಮಳೆ ಸುರಿದಿದೆ.
ಸಿಡಿಲಿಗೆ ಯುವಕ ಸಾವು: ಶುಕ್ರವಾರ ಸುರಿದ ಮಳೆ ಸಂದರ್ಭದಲ್ಲಿ ಸಿಡಿಲಿಗೆ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಅಫಜಲಪುರ ಪಟ್ಟಣದಲ್ಲಿ ಹೊರ ವಲಯ ಹೊಲದಲ್ಲಿದ್ದ ಆನಂದ ಅಂಬಣ್ಣ ಚಿಂಚೋಳಿ (20) ಎನ್ನುವ ಯುವಕ ಸಾವನ್ನಪ್ಪಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಶಹಾಬಾದ ನಗರದ ಶಾಸ್ತ್ರಿ ಚೌಕ್, ಎಸ್‌ಬಿಎಚ್ ಪಕ್ಕದ ರಸ್ತೆಗೆ ಚರಂಡಿ ನೀರು ನುಗ್ಗಿದ್ದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಯಿತು. ಚರಂಡಿಯಿಂದ ಹರಿದು ಬಂದ ತ್ಯಾಜ್ಯಗಳು ರಸ್ತೆ ತುಂಬೆಲ್ಲ ಹರಿಡಿದ್ದವು. ಪಾದಾಚಾರಿಗಳು ಗಬ್ಬು ವಾಸನೆಯಿಂದ ಸಹಿಸದೇ ಮೂಗು ಮುಚ್ಚಿಕೊಂಡೆ ಸಂಚರಿಸಿದರು. ನಗರದ ವಾಡಿ ವೃತ್ತದಲ್ಲಿ ಹಾಗೂ ಜಿಇ ಕಾಲೋನಿಯಲ್ಲಿ ಮರದ ಕೊಂಬೆಗಳು ಮುರಿದು ಬಿದ್ದಿವೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅಗೆದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರು ಗೊತ್ತಾಗದೇ ತೆಗ್ಗುಗಳಲ್ಲಿ ಬಿದ್ದ ಘಟನೆಗಳು ಕಂಡವು. ಒಟ್ಟಾರೆ ಬೇಸಿಗೆ ಬೀರು ಬಿಸಿಲಿಗೆ ನಲುಗಿದ ವಾತಾವರಣವನ್ನು ಮಳೆ ತಂಪಾಗಿಸಿದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.