Advertisement

ವಿವಾದಕ್ಕೀಡಾದ ಡಾ|ಘಂಟಿ “ಸೂಟ್‌ಕೇಸ್‌’ಮಾತು

06:30 AM Sep 15, 2017 | |

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಮಲ್ಲಿಕಾ ಘಂಟಿ ಅವರು “ಸೂಟ್‌ಕೇಸ್‌’ ಕುರಿತು ಆಡಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅವರು ಲಿಖೀತ ಸ್ಪಷ್ಟೀಕರಣ ನೀಡಿ ವಿವಾದಕ್ಕೆ ತೆರೆ ಎಳೆಯುವ ಯತ್ನವನ್ನೂ ಮಾಡಿದ್ದಾರೆ.

Advertisement

ಕನ್ನಡ ವಿವಿಯಲ್ಲಿ ಬುಧವಾರ ಬೆಳ್ಳಿಹಬ್ಬದ ನಿಮಿತ್ತ “ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ’ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ವಿಶ್ರಾಂತ ಕುಲಪತಿಗಳು ತಮ್ಮ ಕಾಲಾವಧಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ಹೇಗೆ ಎಂಬುದನ್ನು ಮೆಲುಕು ಹಾಕಿದ್ದರು. ಇದನ್ನು ಡಾ|ಘಂಟಿಯವರು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಿ ಮಾತನಾಡುವಾಗ ಈ ಅಚಾತುರ್ಯ ನಡೆದಿದೆ.

“ವಿವಿಯನ್ನು ಆಕ್ಸ್‌ಫರ್ಡ್‌ ವಿವಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಹೇಳುತ್ತಾರೆ. ಆದರೆ, ಇಲ್ಲಿ ಬೇಕಾದಷ್ಟು ಉಪನ್ಯಾಸಕರೇ ಇಲ್ಲ. ಖಾಲಿ ಹುದ್ದೆಗಳ ಪೈಕಿ ತಕ್ಷಣಕ್ಕೆ ಎಷ್ಟು ಅಗತ್ಯವೋ ಅಷ್ಟನ್ನು ನೇಮಕ ಮಾಡಿ ಕೊಡಲು ಹಾಗೂ ಅನುದಾನ ನೀಡಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡುತ್ತಾರೆ. ಆದರೆ, ಇದೆಲ್ಲ ನಂಬುವಂಥದ್ದಲ್ಲ ಎನ್ನುವುದು ಗೊತ್ತು. ಹಿಂದೆಲ್ಲ ಕುಲಪತಿಗಳು ಮಂತ್ರಿಗಳನ್ನು ಭೇಟಿ ಮಾಡಲು ಹೋದಾಗ ಸೂಟ್‌ಕೇಸ್‌ ತುಂಬಾ ಕಡತಗಳನ್ನು ತೆಗೆದುಕೊಂಡು ಹೋಗಿ ಎಲ್ಲವನ್ನೂ ಕ್ಲೀಯರ್‌ ಮಾಡಿಸಿಕೊಂಡು ಬರುವಾಗ ಸೂಟ್‌ಕೇಸ್‌ ತುಂಬ ರೊಕ್ಕ (ಅನುದಾನ) ತರುತ್ತಿದ್ದರಂತೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನಾನೇ ಸೂಟ್‌ಕೇಸ್‌ ತುಂಬ ದುಡ್ಡು ತೆಗೆದುಕೊಂಡು ಹೋಗಿ ಎಲ್ಲರಿಗೂ ಕೊಟ್ಟು ಕೊಟ್ಟು ಈ ಕೆಲಸ ನಂದು ಮಾಡ್ರಿ ಮಾಡ್ರಿ ಅನ್ನೋ ಹಂಗಾಗಿದೆ’ ಎಂದಿದ್ದರು ಡಾ|ಘಂಟಿ.

ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿ ವಿವಾದದ ಸ್ವರೂಪ ಪಡೆಯುತ್ತಲೇ ಎಚ್ಚೆತ್ತ ಅವರು, “ನಾನು ಹಾಗೆ ಹೇಳಿಯೇ ಇಲ್ಲ. ವಿಧಾನಸೌಧಕ್ಕೆ ಸೂಟ್‌ಕೇಸ್ ತೆಗೆದುಕೊಂಡು ಹಣ ತರಬೇಕಾಗಿದೆ’ ಎಂಬರ್ಥ ಬರುವಂತೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ತಿಳಿಸಿ ವಿವಾದಕ್ಕೆ ತೇಪೆ ಹಚ್ಚುವ ಯತ್ನ ಮಾಡಿದರು.

ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಅತ್ಯಂತ ಗೌರವವಿದೆ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ನನ್ನ ಹೇಳಿಕೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿ. ಇಡೀ ಭಾಷಣದಲ್ಲಿ ಎಲ್ಲಿಯೂ “ವಿಧಾನಸೌಧ’ ಪದ ಬಳಕೆ ಮಾಡಿಲ್ಲ. ಹಾಗೆಯೇ ಹಾಲಿ ಸರ್ಕಾರ ಹಿಂದಿನ ಸರ್ಕಾರಗಳಿಗಿಂತಲೂ ಹೆಚ್ಚು ಅನುದಾನ ನೀಡಿರುವುದನ್ನು ನೆನೆಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

ಘಂಟಿ ಹೇಳಿಕೆ ಅಲ್ಲಗಳೆಯುವಂತಿಲ್ಲ
ಹುಬ್ಬಳ್ಳಿ:
ವಿಧಾನಸಭೆಯಲ್ಲಿ ಯಾವುದೇ ಕೆಲಸವಾಗಬೇಕಿದ್ದರೆ ಸೂಟ್‌ಕೇಸ್‌ ಒಯ್ಯಬೇಕೆಂಬ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿಯವರ ಹೇಳಿಕೆ ಅಲ್ಲಗಳೆಯುವಂತಿಲ್ಲ ಎಂದು ಆರೋಗ್ಯ ಸಚಿವ ರಮೇಶಕುಮಾರ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಲ್ಲಿಕಾ ಘಂಟಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರ ಹೇಳಿಕೆ ಕಡೆಗಣಿಸುವಂತಿಲ್ಲ. ವಿಧಾನಸೌಧವೇನು ಗಂಗೋತ್ರಿಯಲ್ಲ. ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲೂ ಇದೆ. ಮಲ್ಲಿಕಾ ಅವರು ಕೇವಲ ಆರೋಪ ಮಾಡಿದರೆ ಸಾಲದು, ಅವರು ನಗದು ರೂಪದಲ್ಲಿ ಹಣ ಕೊಟ್ಟಿದ್ದಾರೋ, ಬಂಗಾರ ರೂಪದಲ್ಲಿ ಕೊಟ್ಟಿದ್ದಾರೋ ಎಂಬ ಕುರಿತು ಸಾಕ್ಷ್ಯಾಧಾರ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next