Advertisement

ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ

03:41 PM May 03, 2022 | Team Udayavani |

ಶಹಾಪುರ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕಾರ್ಮಿಕರ ಪರಿಶ್ರಮ ಮಹತ್ವದ್ದಾಗಿದೆ. ಸಂಘಟನೆಗಳು, ಜನಪ್ರತಿನಿಧಿಗಳು, ಚಿಂತಕರು, ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಕಾರ್ಮಿಕರ ಹಿತ ಕಾಯಬೇಕು ಎಂದು ಏಕದಂಡಿಗೆ ಮಠದ ಕಾಳಹಸ್ತೇಂದ್ರ ಸ್ವಾಮಿಗಳು ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತರಕ್ಷಣಾ ಸಂಘದಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಇ-ಶ್ರಮಕಾರ್ಡ್‌ ವಿತರಣೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕಾಯಕ ತತ್ವವೇ ಮೂಲ ಆಶಯ ವಿಟ್ಟುಕೊಂಡು ದುಡಿಯುತ್ತಿರುವ ಕಾರ್ಮಿಕರಿಗೆ ಶೋಷಣೆಯಾಗದಂತೆ ನೋಡಿಕೊಳ್ಳಬೇಕು. ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಸಂಘಟನೆ, ಸಂಘ, ಸಂಸ್ಥೆಗಳ ಪಣ ತೊಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ದುಡಿಯುವ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಅಸಂಘಟಿತ ಕಾರ್ಮಿಕರಿಗೆ ಸಿಗಬೇಕು. ಕಾರ್ಮಿಕರ ಬಗ್ಗೆ ಕೇವಲ ಅನುಕಂಪ ಬೇಡ, ಅವಕಾಶ ಕಲ್ಪಿಸುವ ಕೆಲಸವಾಗಬೇಕು ಎಂದರು.

ಗ್ರಾಮಾಂತರ ಸಿಪಿಐ ಚೆನ್ನಯ್ಯ ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರ ಕಲ್ಪಿಸಿದ ಸೌಲಭ್ಯಗಳನ್ನು ಕಾರ್ಮಿಕರು ಸಮರ್ಪಕವಾಗಿ ಪಡೆಯುವ ಮೂಲಕ ಆರ್ಥಿಕವಾಗಿ ಸುಸ್ಥಿತಿಗೆ ಬರಬೇಕು. ಕಾರ್ಮಿಕ ಸಂಘಟನೆಗಳು ಕಾರ್ಮಿಕರಿಗೆ ಸೌಲಭ್ಯ ಒದಗಿಸಿಕೊಡುವಲ್ಲಿ ಹೆಚ್ಚು ಪರಿಶ್ರಮವಹಿಸಬೇಕು. ಅಲ್ಲದೇ ಕಾರ್ಮಿಕ ಕುಟುಂಬದವರಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಬದುಕಿಗೆ ಭದ್ರತೆಯಂತಹ ಸೌಲಭ್ಯ ದೊರಕಬೇಕು ಎಂದರು.

ಗುರುಪಾದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮೌನೇಶ್ವರ ಸ್ವಾಮೀಜಿ ಸೇರಿದಂತೆ ದೇಶಮುಖ ಕಾಲೇಜಿನ ಮುಖ್ಯಸ್ಥ ಶಿವರಾಜ ದೇಶಮುಖ, ರಾಯಪ್ಪಗೌಡ ದರ್ಶನಾಪುರ, ಗುರುನಾಥರಡ್ಡಿಗೌಡ ಸಿಂಗನಹಳ್ಳಿ, ಸಂಗಮೇಶ ಮುಡಬೂಳ, ಸಾಯಬಣ್ಣ ಪುರೆಲ ಉಪಸ್ಥಿತರಿದ್ದರು. ಸಮಿತಿ ಸಂಸ್ಥಾಪಕ ಅಧ್ಯಕ್ಷ ಮೌನೇಶ ಸುರಪುರಕರ್‌ ಅಧ್ಯಕ್ಷತೆ ವಹಿಸಿದ್ದರು. ಇ-ಶ್ರಮ ಹಾಗೂ ಕಿಟ್‌ ವಿತರಣೆ ಮತ್ತು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next