ಬಾಳೆಹೊನ್ನೂರು: ಧರ್ಮ ಪ್ರಧಾನವಾದ ದೇಶ ಭಾರತ. ಧರ್ಮ, ಸಂಸ್ಕೃತಿ, ಪರಂಪರೆಯ ಸಂವರ್ಧನೆಗೆ ಮಹಿಳೆಯರು ಕೊಟ್ಟ ಕೊಡುಗೆ ಅಮೂಲ್ಯ ಎಂದು ಶ್ರೀ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು. ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಜರುಗಿದ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗಿಂತ ಎಲ್ಲಾ ರಂಗಗಳಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದಾರೆಂದರೆ ತಪ್ಪಾಗದು. ಅವರ ನಿರಂತರ ಸಾಧನೆ ಮತ್ತು ಪ್ರಯತ್ನವೇ ಇದಕ್ಕೆಲ್ಲ ಕಾರಣ. ಒಬ್ಬ ಮಹಿಳೆ ವಿದ್ಯಾವಂತಳಾಗಿ, ಸಂಸ್ಕಾರವಂತಳಾಗಿ ಬಾಳಿದರೆ ಇಡೀ ಕುಟುಂಬ ಉತ್ತಮವಾಗಿ ಬಾಳಿ ಬದುಕಲು ಸಾಧ್ಯ. ಆದರ್ಶ ಮಹಿಳೆಯರಿಂದ ಸಮಾಜ ಯಾವಾಗಲೂ ಜಾಗೃತವಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಬ್ಬ ಮಹಿಳೆಯಲ್ಲಿ ಆರು ಸದ್ಗುಣಗಳು ಇದ್ದರೆ ಆ ಮನೆತನ ಉದ್ಧಾರವಾಗುವುದು. ಕೆಲಸ ಕಾರ್ಯಗಳನ್ನು ಮಾಡುವಾಗ ಆಳಾಗಿ, ಸಲಹೆ ಸೂಚನೆ ಕೊಡುವಲ್ಲಿ ಮಂತ್ರಿಯಾಗಿ, ರೂಪದಲ್ಲಿ ಲಕ್ಷ್ಮಿಯಾಗಿ , ತಾಳ್ಮೆಯಲ್ಲಿ ಭೂಮಾತೆಯಾಗಿ, ಊಟ ಮಾಡಿಸುವಾಗ ತಾಯಿಯಾಗಿ, ಸಾಂಸಾರಿಕ ಜೀವನದಲ್ಲಿ ಪತಿಯ ಇಚ್ಛೆಯನ್ನರಿತು ನಡೆದಿದ್ದಾದರೆ ಆ ಕುಟುಂಬ ಸುಖಮಯವಾಗಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುವುದೆಂದ ಅವರು, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದೌರ್ಜನ್ಯ- ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮಹಿಳೆ ಜಾಗೃತಗೊಂಡು ಕಾರ್ಯ ನಿರ್ವಹಿಸಿದರೆ ಆಗುವ ಅನಾಹುತಗಳಿಂದ ಮುಕ್ತವಾಗಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವೆ ಹಾಗೂ ಚಲನಚಿತ್ರ ನಟಿ ಉಮಾಶ್ರೀ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ದೇಶ ಮಹಿಳೆಗೆ ಬಹು ದೊಡ್ಡ ಸ್ಥಾನ ನೀಡಿದೆ. ಸೃಷ್ಟಿಯ ಪ್ರತಿಯೊಂದರಲ್ಲಿ ಸ್ತ್ರೀಯನ್ನು ಕಾಣಬಹುದಾಗಿದೆ. ಮಹಿಳೆಯರು ಸಣ್ಣ- ಸಣ್ಣ ವಿಷಯಗಳಿಗೆ ಮನಸ್ಸು ಕೆಡಿಸಿಕೊಳ್ಳಬಾರದು. ದೊಡ್ಡದಾಗಿ ವಿಚಾರ ಮಾಡಬೇಕು. ಇಂದು ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗಗಳಲ್ಲಿ ಮಹಿಳೆ ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾಳೆ. ಮಹಿಳೆಯರು ಸಂಕುಚಿತ ಭಾವನೆಯಿಂದ ಹೊರ ಬರಬೇಕು ಎಂದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಸಂಕಲ್ಪ ಸಿದ್ಧಿ, ಕನ್ನಡ ತಾಯ ಚಿಕ್ಕಮಗಳು, ನೆನಪಿನ ಪಯಣ ಕೃತಿ ಹಾಗೂ ಭದ್ರಾ ತರಂಗ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಧರ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ತರ ಸ್ಥಾನವನ್ನು ನಾಡು ಕಲ್ಪಿಸಿಕೊಟ್ಟಿದೆ. ಬಹುತೇಕ ದೇವರ ಹೆಸರುಗಳಲ್ಲಿ ಮಹಿಳೆಯರ ಹೆಸರೇ ಮೊದಲು ಬರುತ್ತದೆ. ಮಹಿಳೆಯರು ಕೀಳರಿಮೆ ಬಿಟ್ಟು ಬದುಕಬೇಕು. ತಮಗೂ ರಂಭಾಪುರಿ ಪೀಠಕ್ಕೂ ಇರುವ ಅವಿನಾಭಾವ ಸಂಬಂಧ ದೊಡ್ಡದಾಗಿದೆ. ಕಷ್ಟದ ದಿನಗಳಲ್ಲಿ ನನಗೆ ಶ್ರೀ ಪೀಠ ಸಾಂತ್ವನ ಹೇಳಿದ್ದಾರೆ . ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ನೀಡಿದ “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’, “ಧರ್ಮಕ್ಕೆ ಬಾಳಿರಿ ಧರ್ಮಕ್ಕೆ ಏಳಿರಿ’ ಸಂದೇಶವನ್ನು ಸದಾ ಸ್ಮರಣೆಯಲ್ಲಿಡಬೇಕು. ಧರ್ಮ ಯಾವುದಾದರೂ ತತ್ವ ಒಂದೇ ಆಗಿದೆ. ಧರ್ಮವನ್ನು ಬಿಡಲು ಸಾಧ್ಯವಿಲ್ಲ ಎಂದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವೆ ಮೋಟಮ್ಮ, ಸ್ವಾಗತ ಸಮಿತಿ ಅಧ್ಯಕ್ಷೆ ಬಿ.ಸಿ. ಗೀತಾ, ರವೀಂದ್ರ ಕುಕ್ಕುಡಿಗೆ, ಅ.ಭಾ.ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ ಎಚ್.ಎಂ.ಲೋಕೇಶ್, ಕೆ. ಟಿ. ವೆಂಕಟೇಶ್ ಇತರರು ಇದ್ದರು. ಸಮ್ಮೇಳನಾಧ್ಯಕ್ಷರಾದ ಬೀರೂರಿನ ಡಾ| ಸಿ.ಎಂ. ಸುಲೋಚನ ಮಾತನಾಡಿ, ಇದೊಂದು ಪುಣ್ಯ-ಗಣ್ಯ ದಿನ. ಕನಸು ಮನಸಿನಲ್ಲೂ ನಾನು ಕಲ್ಪಿಸಿರದ ಸಮ್ಮಾನದ ಸ್ಥಾನವನ್ನು ನನಗಿತ್ತು ಗೌರವಿಸಿದ ಸುದಿನ. ರಾಜ್ಯದಲ್ಲೇ ಪ್ರಥಮ ಬಾರಿಗೆ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿರುವುದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದರು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಬಿ.ಸಿ. ಗೀತಾ ಸ್ವಾಗತಿಸಿ, ದಿವ್ಯಭಾರತಿ ಮಹಿಳಾ ಮಂಡಳಿಯವರು ನಾಡಗೀತೆ ಹಾಡಿ, ನಿವೇದಿತಾ ಗೊರಸುಗೊಡಿಗೆ ಪ್ರಾರ್ಥಿಸಿ, ಸುಮಾ ಪ್ರಸಾದ ನಿರೂಪಿಸಿದರು.