ಡೊಂಬಿವಲಿ, ನ. 21: ಕನ್ನಡಿಗರು ಸಂಘ ಜೀವಿಗಳು. ವಿಶ್ವದ ಯಾವುದೇ ಮೂಲೆ ಯಲ್ಲಿದ್ದರೂ ಸಹಿತ ಸಂಘಟನೆಗಳ ಮೂಲಕ ಕನ್ನಡದ ಕೈಂಕರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಇದಕ್ಕೆ ಮುಂಬಯಿ ಕನ್ನಡಿಗರು ಹೊರತಾಗಿಲ್ಲ. ಕಳೆದ ಅನೇಕ ದಶಕ ಗಳಿಂದ ಮುಂಬಯಿ ಹಾಗೂ ಉಪ ನಗರ ಗಳಲ್ಲಿ ನೂರಾರು ಕನ್ನಡಪರ ಸಂಘಟನೆಗಳು ಕನ್ನಡವನ್ನು ಉಳಿಸಿ-ಬೆಳೆಸಲು ಶ್ರಮಿಸುತ್ತಿದ್ದು ಅಭಿನಂದನೀಯ ಎಂದು ಮುಲುಂಡ್ ಜ್ಞಾನ ವಿಕಾಸ ಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಪಿ. ಎಂ. ಕಾಮತ್ ನುಡಿದರು.
ನ. 17ರಂದು ಸಂಜೆ ಡೊಂಬಿವಲಿಯ ಪೂರ್ವದ ಶ್ರೀ ಗಣೇಶ ಮಂದಿರ ವಕ್ರತುಂಡ ಸಭಾಗೃಹದಲ್ಲಿ ಡೊಂಬಿವಲಿ ಮಹಾನಗರ ಕನ್ನಡ ಸಂಸ್ಥೆಯ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕನ್ನಡ ಸಂಘಟನೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಜ್ಞಾನ ದಾಸೋಹದ ಕಾರ್ಯವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ. ನನಗೆ ನನ್ನ ಜೀವನದಲ್ಲಿ ಅನೇಕ ಮಾನ-ಸಮ್ಮಾನಗಳು ದೊರೆತಿವೆ. ಆದರೆ ಕನ್ನಡಪರ ಸಂಘಟನೆಯಾದ ಮಹಾನಗರ ಸಂಸ್ಥೆ ಡೊಂಬಿವಲಿ ನೀಡಿದ ಸಮ್ಮಾನ ಅವಿಸ್ಮರಣೀಯವಾಗಿದೆ ಎಂದು ನುಡಿದರು.
ಇನ್ನೋರ್ವ ಅತಿಥಿ ಜ್ಞಾನ ವಿಕಾಸ ಮಂಡಳ ಕಲ್ವಾದ ಜತೆ ಕಾರ್ಯದರ್ಶಿ ಕೆ. ಎಚ್.ದೇಶಪಾಂಡೆ ಮಾತನಾಡಿ, ನಮ್ಮ ವ್ಯಾವಹಾರಿಕ ಭಾಷೆ ಯಾವುದೇ ಇರಲಿ, ನಮ್ಮ ಮನೆಯ ಭಾಷೆ ಕನ್ನಡ ವಾಗಿರಬೇಕು. ಮಕ್ಕಳಲ್ಲಿ ಕನ್ನಡಾಭಿಮಾನಬೆಳೆಸ ಬೇಕು ಎಂದು ಹೇಳಿ ಶುಭ ಹಾರೈಸಿದರು.
ಗೌರವ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕ, ಕಾನೂನು ಸಲಹೆಗಾರ ವಿ. ಗುರುರಾಜ ಭಟ್ ಅವರು ಮಾತನಾಡಿ, ಜೀವನ ಎಂಬುದು ಒಂದು ಪ್ರಶರ್ ಕುಕ್ಕರ್ ಇದ್ದ ಹಾಗೆ. ಕಷ್ಟ- ಸುಖಗಳು ಎಲ್ಲರಿಗೂ ಬರುತ್ತಲೇ ಇರುತ್ತದೆ. ಆದ್ದರಿಂದ ವನಮಹೋತ್ಸವದಲ್ಲಿ ಸಸಿ ಹಂಚಿ ವನಮಹೋತ್ಸವ ಆಚರಿಸುವಂತೆ ನಮ್ಮ ಜೀವನದಲ್ಲೂ ಸಂತೋಷವನ್ನು, ಜೀವನೋತ್ಸಾಹವನ್ನು ಆಚರಿಸೋಣ. ಇಂದು ಮುಂಬಯಿಯಲ್ಲಿ ಎರಡು ಕನ್ನಡ ದಿನ ಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದು, ಬೆಳಗಿನ ಜಾವವೇ ಕನ್ನಡಿಗರ ಮನ-ಮನೆಗಳನ್ನು ಸೇರುತ್ತಿರುವುದು ಅಭಿಮಾನದ ವಿಷಯ. ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಸ್ಥೆಯು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಸಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಸಮಾಜ ಸೇವಕ ವಸಂತ ಸುವರ್ಣ ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕ ಡಾ| ಸುಧೀಂದ್ರ ಕುಲಕರ್ಣಿ ಅವರಿಗೆ ಸಂಸ್ಥೆಯ ವಾರ್ಷಿಕ ಶ್ರೀ ಪುರಸ್ಕಾರವನ್ನು ಪ್ರದಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಇಂ. ಸತೀಶ್ ಆಲಗೂರ ಅವರು ಮಾತನಾಡಿ, ನಮ್ಮ ಸಂಸ್ಥೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ-ಬೆಳೆಸಲು ಕಂಕಣಬದ್ಧವಾಗಿದ್ದು ತಮ್ಮೆಲ್ಲರ ಸಹಾಯ, ಸಹಕಾರ ಸದಾಯಿರಲಿ ಎಂದು ನುಡಿದು ಪುರಸ್ಕೃತರನ್ನು ಅಭಿನಂದಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್. ಎನ್. ಸೋಮಾ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು.
ಡಾ| ಬಿ. ಆರ್. ದೇಶಪಾಂಡೆ, ದತ್ತಾತ್ರೇಯ ದೇಶಪಾಂಡೆ, ವಿ. ಬಿ. ಕುಲಕರ್ಣಿ, ಪಿ. ಎಂ. ಜೋಶಿ ಅವರು ಗಣ್ಯರನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ನಿಮಿತ್ತ ನಡೆದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ವಿದ್ಯಾವತಿ ಆಲಗೂರ ಮತ್ತು ಜ್ಯೋತಿ ಬಾಳಗುಂದ ಪ್ರಾರ್ಥನೆಗೈದರು. ವಿದ್ಯಾವತಿ ಆಲಗೂರ ಕಾರ್ಯಕ್ರಮ ನಿರ್ವಹಿಸಿದರು. ಅಜಿತ್ ಉಮಾರಾಣಿ ವಂದಿಸಿದರು. ಕು| ಪ್ರಾಚಿಚಿಲ್ಲರಗಿ ಅವರಿಂದ ಭರತನಾಟ್ಯ, ಲಕ್ಷ್ಮೀ ಕಾಂತ್ ಕುಲಕರ್ಣಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸಂಸ್ಥಾಪಕ ಸುರೇಂದ್ರ ಕುಬೇರ, ಇಂ. ಅಶೋಕ್ ಹೆಕ್ಕೇರಿ, ಸೋಮಶೇಖರ್ ಮಸಳಿ, ಎಸ್. ಜಿ. ಮಠಪತಿ, ಎಂ. ಆರ್. ಹೊಸಕೋಟಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಗುರುರಾಜ ಪೋತನೀಸ್