Advertisement

ದೇಶದ ಅತೀದೊಡ್ಡ ಧ್ವಜಸ್ತಂಭ ನಿರ್ಮಾಣ ಅಂತಿಮ ಹಂತದಲ್ಲಿ

10:44 PM Aug 09, 2022 | Team Udayavani |

ಬಳ್ಳಾರಿ: ರಾಜ್ಯದ 31ನೇ ಜಿಲ್ಲೆಯಾಗಿ ಉದಯಿಸಿರುವ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ 405 ಅಡಿ ಎತ್ತರದ ರಾಷ್ಟ್ರ ಧ್ವಜಸ್ತಂಭ ತಲೆಯೆತ್ತಲಿದ್ದು, ಈ ಕುರಿತ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಜಗತ್ತಿನ ಜನಮನ ಸೆಳೆದ ಹಂಪಿ ಸ್ಮಾರಕಗಳನ್ನು ಹೊಂದಿದ್ದ ಹೊಸಪೇಟೆ ಇದೀಗ ದೇಶದಲ್ಲಿ ಮೊದಲ, ವಿಶ್ವದಲ್ಲಿ 9ನೇ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭದ ಹೆಗ್ಗಳಿಕೆ ಪಾತ್ರವಾಗಲಿದೆ.

Advertisement

ಹಾಲಿ ಬೆಳಗಾವಿಯ ಕೋಟೆಕೆರೆ ಪ್ರದೇಶದಲ್ಲಿರುವ 110 ಮೀಟರ್‌ ಎತ್ತರದ ಧ್ವಜಸ್ತಂಭ ದೇಶದ ಅತಿದೊಡ್ಡ ಧ್ವಜಸ್ತಂಭ ಎಂಬ ದಾಖಲೆಗೆ ಪಾತ್ರವಾಗಿತ್ತು. ಇದೀಗ ಹೊಸಪೇಟೆಯಲ್ಲಿ ನಿರ್ಮಿಸಲಾಗುತ್ತಿರುವ ಧ್ವಜಸ್ತಂಭ ಅದಕ್ಕಿಂತಲೂ 13 ಮೀಟರ್‌ ಹೆಚ್ಚು ಎತ್ತರವಿರಲಿದೆ.

ದೇಶದ ಅತೀ ಎತ್ತರದ ಧ್ವಜಸ್ತಂಭ ನಿರ್ಮಿಸುವ ಸಲುವಾಗಿ ಹೊಸಪೇಟೆ ನಗರದ ಹೃದಯಭಾಗದಲ್ಲಿನ ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ 2-3 ತಿಂಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಧ್ವಜಸ್ತಂಭದ ಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕಳೆದ ಮೂರು ದಿನಗಳಿಂದ ಧ್ವಜಸ್ತಂಭ ಅಳವಡಿಸುವಕಾರ್ಯ ಭರದಿಂದ ಸಾಗಿದ್ದು, ಆ. 15ರಂದು ತ್ರಿವರ್ಣ ಧ್ವಜ ಹಾರಲಿದೆ.

ಈ ಅತೀ ಎತ್ತರದ ಧ್ವಜಸ್ತಂಭ ನಿರ್ಮಿಸುವ ರೂವಾರಿ ವಿಜಯನಗರ ಶಾಸಕ, ಪ್ರವಾಸೋದ್ಯಮ ಸಚಿವ ಬಿ.ಎಸ್‌. ಆನಂದ್‌ಸಿಂಗ್‌ ಅವರು. ಈ ಧ್ವಜಸ್ಥಂಭ 6 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next