Advertisement

ಸಂವಿಧಾನ ರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯ

07:33 AM Feb 25, 2019 | Team Udayavani |

ಚಿತ್ರದುರ್ಗ: ಮೀಸಲಾತಿ ಹಾಗೂ ದಲಿತ ವಿರೋಧಿಗಳು ಸಂವಿಧಾನವನ್ನು ಸುಡಬೇಕು, ಬದಲಾಯಿಸಬೇಕು ಎನ್ನುವ ಕೂಗು ಎಬ್ಬಿಸುತ್ತಿದ್ದಾರೆ. ಮೀಸಲಾತಿ ಪಡೆಯುತ್ತಿರುವ ಎಸ್ಸಿ-ಎಸ್ಟಿ ಸೇರಿದಂತೆ ಇತರೆ ಎಲ್ಲ ಒಬಿಸಿ ವರ್ಗದವರು ಎಚ್ಚೆತ್ತುಕೊಳ್ಳಬೇಕು ಎಂದು ಸಾಮಾಜಿಕ ಚಿಂತಕ ಅರಕಲವಾಡಿ ನಾಗೇಂದ್ರ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ “ಭಾರತ ಸಂವಿಧಾನ ಮತ್ತು ಸಮಕಾಲೀನ ಸ್ಥಿತಿಗತಿಗಳು’ ಎಂಬ ವಿಷಯ ಕುರಿತ ವಿಚಾರಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಹಾಗಾಗಿ ಆಪತ್ತಿನಲ್ಲಿರುವ ಸಂವಿಧಾನವನ್ನು ಅಪಾಯದಿಂದ ಪಾರು ಮಾಡಬೇಕಾಗಿದೆ. ಇದಕ್ಕಾಗಿ ಮೀಸಲಾತಿ ಪಡೆಯುತ್ತಿರುವ ಎಲ್ಲ ಸಮುದಾಯಗಳು ಒಗ್ಗೂಡಿ ಹೋರಾಟ ಮಾಡಬೇಕು. ಸಂವಿಧಾನಕ್ಕೆ ಧಕ್ಕೆಯಾದರೆ ಅದು ಸಮಗ್ರ ಭಾರತೀಯರಿಗೆ, ಬಹುಸಂಖ್ಯಾತರಿಗೆ ಅಪಾಯವಾದಂತೆ ಎನ್ನುವುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ದೇಶದ 130 ಕೋಟಿ ಜನರಿಗೆ ಸಂವಿಧಾನ ರಕ್ಷಾಕವಚವಾಗಿದೆ. ಈ ರಕ್ಷಾಕವಚ ಕಳಚಿದರೆ ದೊಡ್ಡ ಅಪಾಯ ಕಾದಿದೆ. ಸಮಾನತೆಯ ಬದುಕಿಗಾಗಿ ಇಡೀ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಭಾರತ ಹೊಂದಿದೆ. ಡಾ| ಬಿ.ಆರ್‌. ಅಂಬೇಡ್ಕರ್‌ ನೀಡಿದ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ.

ಭಾರತ ದೇಶ ಒಪ್ಪಿಕೊಂಡಿರುವ ಸಂವಿಧಾನ ಕೇವಲ ಎಸ್ಸಿ-ಎಸ್ಟಿ ವರ್ಗಗಳಿಗೆ ಮಾತ್ರವಲ್ಲ, ಎಲ್ಲ ಸಮುದಾಯ ಹಾಗೂ ಧರ್ಮದವರಿಗೆ ಎನ್ನುವುದನ್ನು ಮರೆಯಬಾರದು. ಅಲ್ಲದೆ ಸಂವಿಧಾನದ ಮಹತ್ವವನ್ನು ದೇಶದ ನಾಗರಿಕರಿಗೆ ತಿಳಿಸುವ ಮೂಲಕ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ. ಆ ಕಾರಣಕ್ಕೆ ಎಲ್ಲ ಕಡೆಗಳಲ್ಲಿ ಸಂವಿಧಾನ ಕುರಿತು ವಿಚಾರಸಂಕಿರಣ, ಸಂವಾದ ಆಯೋಜಿಸುವ ಮೂಲಕ ಸಂವಿಧಾನದ ತಿರುಳನ್ನು ಅರ್ಥೈಸಿಕೊಳ್ಳಬೇಕು ಎಂದರು.

Advertisement

ನಿವೃತ್ತ ಪ್ರಾಂಶುಪಾಲ ಬಿ.ಆರ್‌. ಶಿವಕುಮಾರ್‌ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್‌ ಈ ದೇಶಕ್ಕೆ ನೀಡಿರುವ ಸಂವಿಧಾನ ಹಾಗೂ ಅವರಲ್ಲಿನ ವಿಚಾರಧಾರೆಗಳನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದರಿಂದಾಗಿ ಅನಾಹುತಗಳು ಆಗುತ್ತಿವೆ ಎಂದು ಹೇಳಿದರು.

ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಚಂದ್ರಪ್ಪ, ಮಾಜಿ ಅಧ್ಯಕ್ಷ ಜಗನ್ನಾಥ, ಉಪನ್ಯಾಸಕ ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಸಂಘದ ಪ್ರಧಾನ ಕಾರ್ಯದರ್ಶಿ ಎನ್‌. ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಟಿ. ಶ್ರೀನಿವಾಸ್‌, ಚಳ್ಳಕೆರೆ ತಾಲೂಕು ಘಟಕದ ಅಧ್ಯಕ್ಷ ದಯಾನಂದ, ಅಂಬೇಡ್ಕರ್‌ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಪಿ. ತಿಪ್ಪೇಸ್ವಾಮಿ, ಡಾ| ಬಿ.ಎಂ. ಗುರುನಾಥ್‌ ಮತ್ತಿತರರು ಇದ್ದರು.

ಸಂವಿಧಾನ ಬದಲಾವಣೆ ಮಾಡುವುದು, ಸಂವಿಧಾನದಲ್ಲಿ ಪ್ರಾತಿನಿಧ್ಯ ನೀಡಿದ ಮೀಸಲಾತಿ ಬದಲಾವಣೆ ಮಾಡುವ ಮಾತುಗಳು ಕೇಳಿಬರುತ್ತಿರುವುದು ವಿಷಾದನೀಯ ಸಂಗತಿ. ದೇಶದ ಬಹುಸಂಖ್ಯಾತರ ಅಸ್ತಿತ್ವವನ್ನು ಅಲುಗಾಡಿಸುವ ಪ್ರಕ್ರಿಯೆಗಳು, ಪ್ರಕರಣಗಳು ನಡೆಯುತ್ತಿರುವುದು ಬಹು
ದೊಡ್ಡ ದುರಂತ. 
ಅರಕಲವಾಡಿ ನಾಗೇಂದ್ರ, ಸಾಮಾಜಿಕ ಚಿಂತಕ.

Advertisement

Udayavani is now on Telegram. Click here to join our channel and stay updated with the latest news.

Next