Advertisement

ಸಂವಿಧಾನ, ಕಾನೂನು ತಿಳಿಯದೆ ಅಪರಾಧ: ಎಸ್‌ಪಿ

12:46 PM Mar 01, 2017 | Team Udayavani |

ಹುಣಸೂರು: ದೇಶದ ಬಹುತೇಕ ಮಂದಿ ಇಂದಿಗೂ ನಮ್ಮ ದೇಶದ ಸಂವಿಧಾನ, ಕಾನೂನು ಕಾಯ್ದೆಗಳನ್ನು ಅರಿಯದ ಪರಿಣಾಮ ಪ್ರತಿ ವರ್ಷ ಶೇ 6-8ರಷ್ಟು ಪ್ರಕರಣಗಳು ಹೆಚ್ಚುತ್ತಿವೆ ಎಂದು ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್‌ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಶಿಕ್ಷಕರ ಭವನದಲ್ಲಿ ಮೈಸೂರು ಜಿಲ್ಲಾ ಪೊಲೀಸ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಮತ್ತು ಪೋಕ್ಸೊ ಕಾಯ್ದೆ-2012 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.  

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಇದಕ್ಕೆ ಶಾಲಾ ಆವರಣದಲ್ಲಿ ಆಗುವ ಘಟನೆಗಳಿಗೆ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ನೇರ ಹೊಣೆಗಾರರಾಗಲಿದ್ದಾರೆ. ಪೋಕ್ಸೊ ಕಾಯ್ದೆಯಲ್ಲಿ ತೊಂದರೆಗೊಳಗಾದ ಮಗುವಿನ ಹೇಳಿಕೆ ಅಂತಿಮ. ಶಾಲಾ ಆವರಣದಲ್ಲಿ ಘಟನೆಗಳು ಸಂಭವಿಸಿದಲ್ಲಿ ಕೂಡಲೇ ದೂರು ದಾಖಲಿಸಬೇಕು. ಮಕ್ಕಳ ಜವಾಬ್ದಾರಿಯನ್ನು ಪೋಷಕರು, ಶಿಕ್ಷಕರು ಸಮಪಾಲಾಗಿ ಹೊರಬೇಕು ಎಂದರು.

ದತ್ತುಗ್ರಾಮ: ಎಚ್‌.ಡಿ.ಕೋಟೆಯ ಎನ್‌.ಬೇಗೂರು, ಕಾರಾಪುರ ಗ್ರಾಮದ ಶಾಲೆಯನ್ನು ದತ್ತು ಪಡೆದಿದ್ದು, ಈ ಶಾಲೆಗಳಿಂದ ಕನಿಷ್ಟ 10 ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿ ಹೊರಲಿದೆ. ಮುಂದಿನ ದಿನಗಳಲ್ಲಿ ಪ್ರತಿ ಗುರುವಾರ ಆಯಾ ಸರಹದ್ದಿನ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ತೆರೆದ ಮನೆ ಕಾರ್ಯಕ್ರಮದಲ್ಲಿ  ಪೊಲೀಸ್‌ ಇಲಾಖೆ ಬಗ್ಗೆ ಇರುವ ಭಯವನ್ನು ದೂರಗೊಳಿಸಲಿದ್ದಾರೆಂದರು.

ಕನಕಪುರದ ಹಿರಿಯ ನ್ಯಾಯವಾದಿ ಗೋಪಾಲಗೌಡ ಪೋಕ್ಸೊ ಕಾಯ್ದೆ-2012ರ ಕುರಿತು ಮಾಹಿತಿ ಒದಗಿಸಿದರು. ಹುಣಸೂರು ಎಎಸ್‌ಪಿ ಹರೀಶ್‌ಪಾಂಡೆ ಮಾತನಾಡಿದರು. ಡಿಡಿಪಿಐ ಕಚೇರಿಯ ಇಒ ನಾಗರಾಜು, ಬಿಇಒಗಳಾದ ಆರ್‌.ಕರೀಗೌಡ, ರೇವಣ್ಣ, ಉದಯಕುಮಾರ್‌, ಕೇಂಬ್ರಿಡ್ಜ್ ಶಾಲೆಯ ಮುಖ್ಯಸ್ಥ ತಮ್ಮಣ್ಣೇಗೌಡ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಯ್ಯ, ಹುಣಸೂರು ಬಿಇಒ ಬಿ.ಕೆ.ಶಿವಣ್ಣ, ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿ, ಇಸಿಒ, ಹಾಗೂ ಮುಖ್ಯಶಿಕ್ಷಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next