ವಾಡಿ: ಡಾ| ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನ ಪ್ರತಿಯೊಬ್ಬ ಭಾರತೀಯನ ಜೀವನದ ಸಿದ್ಧಾಂತವಾಗ ಬೇಕು ಎಂದು ಕೊಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ ಹಿರೆಡ್ಡಿ ಹೇಳಿದರು.
ನಾಲವಾರ ವಲಯದ ಕೊಲ್ಲೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಗಳ ಭವ್ಯ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕೊಟ್ಟು ಸಮಾನತೆ ಬೋಧಿಸಿದ ಭಾರತದ ಸಂವಿಧಾನ ಎಲ್ಲರನ್ನೂ ಒಂದುಗೂಡಿಸುವ ಮಹಾನ್ ಗ್ರಂಥವಾಗಿದೆ. ಶೋಷಿತರ, ಮಹಿಳೆಯರ, ದುರ್ಬಲ ವರ್ಗದವರ ಸಮಗ್ರ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ ಮೀಸಲಾತಿ ಹಕ್ಕು ಒದಗಿಸಿದ್ದಾರೆ. ಯಾವುದೇ ಜಾತಿಯ ಜನಾಂಗವನ್ನು ಬಾಬಾಸಾಹೇಬರು ಕಡೆಗಣಿಸಿಲ್ಲ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಹಲವು ಸಂಸ್ಕೃತಿ, ಹಲವಾರು ಜಾತಿ, ಧರ್ಮ, ವಿವಿಧ ರೀತಿ ಸಂಪ್ರದಾಯ, ರೀತಿ ನೀತಿಗಳನ್ನು ಹೊಂದಿರುವ ಭಾರತ ದೇಶಕ್ಕೆ ಒಂದು ಸಂವಿಧಾನ ಬರೆದುಕೊಟ್ಟ ಅಂಬೇಡ್ಕರ್ ಜಾತ್ಯತೀತ ತತ್ವಗಳನ್ನು ಎತ್ತಿ ಹಿಡಿದಿದ್ದಾರೆ. ಎಲ್ಲರಿಗೂ ಸಮಾನ ಹಕ್ಕು, ಸಮಾನ ಅಧಿಕಾರ ನೀಡಿ ಸ್ವಾಭಿಮಾನದ ಬದುಕು ನೀಡಿದ್ದಾರೆ ಎಂದರು.
ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕುಪೇಂದ್ರ ಶಿವಶೆಟ್ಟಿ, ಉಪಾದ್ಯಕ್ಷ ಬಸವರಾಜ ಭಾಗನ್, ಮುಖಂಡರಾದ ಶರಣು ಸಾಹು ಬಿರಾಳ, ಹಣಮಂತರೆಡ್ಡಿ ತಿಪ್ಪರೆಡ್ಡಿ, ಮಲ್ಲಿಕಾರ್ಜುನ ಸನ್ನತಿ, ಕಲ್ಲಪ್ಪ ಕುಂಬಾರ, ಸಿದ್ಧಣ್ಣ ಕುಲಕುಂದಿ, ಚನ್ನಪ್ಪಗೌಡ, ಸುಭಾಶ್ಚಂದ್ರ ಅಣಬಿ, ಮುನೀರ್ ಪಟೇಲ, ಮಲ್ಲಿನಾಥ ಪೂಜಾರಿ, ರಾಮರಾಜ ಆಂಧ್ರ, ಮುಕ್ತಾರ್ ಮುಲ್ಲಾ, ವಿಶ್ವಾರಾಧ್ಯ ದಾಸರ, ಶಿವಶರಣಪ್ಪ ಕಡ್ಡೆಕರ್, ಸಾಬಮ್ಮಾ ಹಳ್ಳಿ, ಗೀತಾಬಾಯಿ ತಿಪ್ಪಣ್ಣ ಇತರರು ಪಾಲ್ಗೊಂಡಿದ್ದರು. ಶಿವಯೋಗಿ ದೇವಿಂದ್ರಕರ ನಿರೂಪಿಸಿದರು. ಭೀಮರಾಯ ಸ್ವಾಗತಿಸಿದರು. ಸತೀಶ ಕೋಗಿಲಕರ ವಂದಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಯಿತು.